ಬಾಳೆಹೊನ್ನೂರಲ್ಲಿ ತಗ್ಗಿದ ಮಳೆಯ ಅಬ್ಬರ, ನೆರೆ

KannadaprabhaNewsNetwork | Published : Aug 1, 2024 12:21 AM

ಸಾರಾಂಶ

ಬಾಳೆಹೊನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಅಬ್ಬರಿಸಿದ್ದ ಪುಷ್ಯ ಮಳೆ ಬುಧವಾರದ ವೇಳೆಗೆ ಸಂಪೂರ್ಣವಾಗಿ ಕಡಿಮೆಯಾಗಿದ್ದು, ದಿಢೀರ್ ಅನಿಯಮಿತವಾಗಿ ಸುರಿದ ಮಳೆಗೆ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ತಗ್ಗಿದೆ.

ಮುಂದುವರೆದ ಹಾನಿ । ಗುಡ್ಡ ಜರಿದು ರಸ್ತೆ ಬಂದ್ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಅಬ್ಬರಿಸಿದ್ದ ಪುಷ್ಯ ಮಳೆ ಬುಧವಾರದ ವೇಳೆಗೆ ಸಂಪೂರ್ಣವಾಗಿ ಕಡಿಮೆಯಾಗಿದ್ದು, ದಿಢೀರ್ ಅನಿಯಮಿತವಾಗಿ ಸುರಿದ ಮಳೆಗೆ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ತಗ್ಗಿದೆ.ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನವರೆಗೆ ಒಂದೇ ಸಮನೆ ಮಳೆ ಸುರಿದ ಹಿನ್ನೆಲೆಯಲ್ಲಿ ಭದ್ರಾನದಿ ಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಹಲವು ಅಂಗಡಿ ಮುಂಗಟ್ಟುಗಳು, ಮನೆ, ಜಮೀನುಗಳು ಜಲಾವೃತವಾಗಿದ್ದವು. ಮಂಗಳವಾರ ಸಂಜೆ ಬಳಿಕ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ನೆರೆ ಪರಿಸ್ಥಿತಿ ಕಡಿಮೆಯಾಗಿದ್ದು, ಮನೆ, ಅಂಗಡಿ, ತೋಟಕ್ಕೆ ನುಗ್ಗಿದ್ದ ನೀರು ಸಂಪೂರ್ಣವಾಗಿ ಇಳಿಕೆಯಾಗಿದೆ.ಮಳೆ ಕಡಿಮೆಯಾದರೂ ಹಾನಿ ಮುಂದುವರಿದಿದ್ದು, ಖಾಂಡ್ಯ ಹೋಬಳಿ ಬಿದರೆ ಗ್ರಾಪಂ ವ್ಯಾಪ್ತಿಯ ಕೊಂಡದ ಖಾನ್‌ನಿಂದ ಕಡಬಗೆರೆಗೆ ತೆರಳುವ ಲಿಲ್ಲಿಖಾನ್-ಕೋಲಾರ್‌ಖಾನ್ ಮಧ್ಯೆ ರಸ್ತೆಗೆ ಗುಡ್ಡ ಜರಿದು ಬಿದ್ದು ರಸ್ತೆ ಸಂಪೂರ್ಣ ಬಂದ್ ಆಗಿದೆ. ಗುಡ್ಡದೊಂದಿಗೆ ಬಹೃತ್ ಬಂಡೆಕಲ್ಲು ಸಹ ಉರುಳಿ ಬಿದ್ದಿದೆ. ಆದರೆ ಯಾವುದೇ ಹಾನಿಯಾಗಿಲ್ಲ.ಬಿ.ಕಣಬೂರು ಗ್ರಾಮದ ವಿವೇಕನಗರದ ಸುಂದರಿ ಕೃಷ್ಣಾಚಾರಿ ಅವರ ವಾಸದ ಮನೆ ಗೋಡೆ ಭಾರೀ ಮಳೆಗೆ ಕುಸಿದಿದೆ. ಆದರೆ ಮನೆಯಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಕಳಸ ರಸ್ತೆಯ ಹೊಳೆಬಾಗಿಲು ಗ್ರಾಮದ ಹರಿಪ್ರಸಾದ್ ಎಂಬುವರ ಮನೆ ಕಂಪೌಂಡ್ ಕುಸಿದು ಹಾನಿಯಾಗಿದೆ. ಸ್ಥಳಕ್ಕೆ ಗ್ರಾಪಂ ಪಿಡಿಒ ಕಾಶಪ್ಪ, ವಿಎ ಸಮೀಕ್ಷಾ ಭೇಟಿ ನೀಡಿ ಪರಿಶೀಲಿಸಿದರು.ಮಂಗಳವಾರ ಸುರಿದ ಭಾರೀ ಮಳೆಗೆ ಬಾಳೆಹೊನ್ನೂರು ಮೆಸ್ಕಾಂ ವ್ಯಾಪ್ತಿಯ ಗಡಿಗೇಶ್ವರದಲ್ಲಿ 5 ವಿದ್ಯುತ್ ಕಂಬ ಗಳು ತುಂಡಾಗಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಮೆಸ್ಕಾಂ ವ್ಯಾಪ್ತಿಯ ಗಡಿಗೇಶ್ವರ, ಸೀಕೆ, ಮುದುಗುಣಿ, ದಾವಣ, ತುಪ್ಪೂರು, ಬಿಂತ್ರವಳ್ಳಿ, ಮೇಲ್ಪಾಲ್, ಕರ್ಕೇಶ್ವರ, ಆಡುವಳ್ಳಿ, ಕೆಳ ಕಟ್ಟಿನಮನೆ, ಹೆನ್ನಂಗಿ, ಚಿಕ್ಕಗ್ರಹಾರದ 12 ಕಡೆಗಳಲ್ಲಿ ವಿದ್ಯುತ್ ಪರಿವರ್ತಕ, ಪರಿವರ್ತಕದ ಜಿಒಎಸ್‌ಗಳು ಧರೆಗುರುಳಿವೆ. ಗ್ರಾಮೀಣ ಭಾಗದ ಕೆಲವೆಡೆ ವಿದ್ಯುತ್ ಕಂಬಗಳು ತುಂಡಾಗಿದ್ದು, ಅವುಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಅಧಿಕ ಗಾಳಿ ಪರಿಣಾಮ ಈ ಬಾರಿ ಅಧಿಕ ವಿದ್ಯುತ್ ಕಂಬ ಗಳು, ಲೈನ್‌ಗೆ ಹಾನಿಯಾಗಿದೆ. ಬಾಳೆಹೊನ್ನೂರು ಮೆಸ್ಕಾಂ ವ್ಯಾಪ್ತಿಯಲ್ಲಿ ಕೇವಲ ಇಬ್ಬರು ವಿದ್ಯುತ್ ಗುತ್ತಿಗೆದಾರರು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಹಾನಿಯಾದ ಕಡೆಗಳಲ್ಲಿ ತಕ್ಷಣಕ್ಕೆ ವಿದ್ಯುತ್ ಲೈನ್ ದುರಸ್ತಿ ಸಾಧ್ಯವಾಗುತ್ತಿಲ್ಲ. ಮಂಗಳೂರಿನಿಂದಲೂ ಓರ್ವ ಗುತ್ತಿಗೆದಾರರನ್ನು ಇಲಾಖೆ ಕರೆಸಿಕೊಂಡಿದ್ದು, ಇದೇ ವಾತಾವರಣ ಮುಂದುವರಿದಲ್ಲಿ ಮುಂದಿನ 3 ದಿನದಲ್ಲಿ ಎಲ್ಲಾ ಕಡೆ ವಿದ್ಯುತ್ ಸಂಪರ್ಕ ಪುನರ್ ಕಲ್ಪಿಸಿ ಯಥಾ ಸ್ಥಿತಿ ಮುಂದುವರೆಯಲಿದೆ ಎಂದು ಮೆಸ್ಕಾಂ ಎಇಇ ಗೌತಮ್ ತಿಳಿಸಿದ್ದಾರೆ.೩೧ಬಿಹೆಚ್‌ಆರ್ ೧:

ಬಾಳೆಹೊನ್ನೂರು ಸಮೀಪದ ಬಿದರೆ ಗ್ರಾಪಂ ವ್ಯಾಪ್ತಿಯ ಕೊಂಡದಖಾನ್‌ನಿಂದ ಕಡಬಗೆರೆಗೆ ತೆರಳುವ ಲಿಲ್ಲಿಖಾನ್-ಕೋಲಾರ್‌ಖಾನ್ ಮದ್ಯೆ ರಸ್ತೆಗೆ ಗುಡ್ಡ ಜರಿದು ಬಿದ್ದು ರಸ್ತೆ ಸಂಪೂರ್ಣ ಬಂದ್ ಆಗಿದೆ.೩೧ಬಿಹೆಚ್‌ಆರ್ ೨:

ಬಾಳೆಹೊನ್ನೂರಿನ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಹೊಳೆಬಾಗಿಲಿನ ಹರಿಪ್ರಸಾದ್ ಎಂಬುವರ ಮನೆ ಕಂಪೌಂಡ್ ಬಾರೀ ಮಳೆಗೆ ಕುಸಿದಿರುವುದು.೩೧ಬಿಹೆಚ್‌ಆರ್ ೩:

ಬಾಳೆಹೊನ್ನೂರಿನ ವಿವೇಕನಗರದ ಸುಂದರಿ ಕೃಷ್ಣಾಚಾರಿ ಎಂಬುವರ ವಾಸದ ಮನೆ ಗೋಡೆ ಭಾರೀ ಮಳೆಗೆ ಕುಸಿದಿದೆ.೩೧ಬಿಹೆಚ್‌ಆರ್ ೪:

ಬಾಳೆಹೊನ್ನೂರು ಪಟ್ಟಣದ ಭದ್ರಾನದಿ ದಡದಲ್ಲಿ ಮಂಗಳವಾರ ಉಂಟಾದ ಪ್ರವಾಹದಿಂದ ಪಾರಾಗಲು ಮನೆಯ ಮೇಲ್ಛಾವಣಿ ಏರಿ ರಕ್ಷಣೆ ಪಡೆಯಲಾಯಿತು.೩೧ಬಿಹೆಚ್‌ಆರ್ ೫:

ಬಾಳೆಹೊನ್ನೂರಿನ ಮೆಸ್ಕಾಂ ವ್ಯಾಪ್ತಿಯಲ್ಲಿ ಭಾರೀ ಮಳೆ, ಗಾಳಿಗೆ ವಿದ್ಯುತ್ ಪರಿವರ್ತಕ ಧರೆಗುರುಳಿರುವುದು.

Share this article