ದೇಶದ ಉತ್ತಮ ಭವಿಷ್ಯಕ್ಕೆ ಅಭಿವೃದ್ಧಿ ಪಾತ್ರ ಮುಖ್ಯ: ಎಸ್.ವಿ. ಸಂಕನೂರ

KannadaprabhaNewsNetwork | Published : Apr 3, 2025 12:31 AM

ಸಾರಾಂಶ

ಪ್ರಧಾನಿ ನರೇದಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಬಡವರಿಗೆ, ದೀನ- ದಲಿತರಿಗೆ, ಮಹಿಳೆಯರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಪೂರಕವಾಗುವ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.

ರಾಣಿಬೆನ್ನೂರು: ಭವ್ಯ ಭಾರತದ ಉತ್ತಮ ಭವಿಷ್ಯಕ್ಕೆ ಅಭಿವೃದ್ಧಿ ಕಾರ್ಯಕ್ರಮಗಳ ಪಾತ್ರವು ಅವಶ್ಯಕವಾಗಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ತಾಂತ್ರಿಕ ಕ್ಷೇತ್ರಗಳ ಸುಧಾರಣೆಯಲ್ಲಿ ಕೇಂದ್ರ ಸರ್ಕಾರದ ಅನೇಕ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿವೆ ಎಂದು ವಿಧಾನಪರಿಷತ್‌ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.ಎಸ್‌ಜೆಎಂವಿ ಬಿಎಜೆಎಸ್‌ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಹೈದರಾಬಾದ್‌ನ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಪರಿಷತ್ ದಕ್ಷಿಣ ಪ್ರಾದೇಶಿಕ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡ ವಿಕಸಿತ ಭಾರತದ ದೃಷ್ಟಿಕೋನದಲ್ಲಿ ಭಾರತದ ಕೌಶಲ್ಯ ಕಾರ್ಯಕ್ರಮಗಳು: ಸಮಸ್ಯೆಗಳು, ಸವಾಲುಗಳು ಹಾಗೂ ಮುಂದಿನ ದಾರಿ ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ನರೇದಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಬಡವರಿಗೆ, ದೀನ- ದಲಿತರಿಗೆ, ಮಹಿಳೆಯರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಪೂರಕವಾಗುವ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಅವುಗಳ ಫಲಶೃತಿಯಲ್ಲಿ ಇಂತಹ ವಿಚಾರಸಂಕಿರಣಗಳ ಅಂಶಗಳು ಮೈಲುಗಲ್ಲಾಗಿವೆ ಎಂದರು. ಕಾಲೇಜಿನ ಪ್ರಾ. ಡಾ. ಆರ್.ವಿ. ಹೆಗಡಾಳ ಮಾತನಾಡಿದರು. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಪಾಂಡುರಂಗ ಕೆ. ಅವರ ನೇತೃತ್ವದಲ್ಲಿ ನಡೆದ ಮೊದಲನೇ ತಾಂತ್ರಿಕ ಅಧಿವೇಶನದಲ್ಲಿ ಸುಮಾರು 12 ಪ್ರತಿನಿಧಿಗಳು ತಮ್ಮ ಸಂಶೋಧನಾ ಲೇಖನಗಳನ್ನು ಮಂಡಿಸಿದರು. ಡಾ. ಶರತ್‌ಕುಮಾರ ಎಸ್. ನೇತೃತ್ವದ 2ನೇ ತಾಂತ್ರಿಕ ಅಧಿವೇಶನದಲ್ಲಿ ಸುಮಾರು 14 ಪ್ರತಿನಿಧಿಗಳು ತಮ್ಮ ಸಂಶೋಧನಾ ಲೇಖನಗಳನ್ನು ಮಂಡಿಸಿದರು. ಡಾ. ಅನಿಲಕುಮಾರ, ಬಿ.ಆರ್. ಡಮ್ಮಳ್ಳಿ, ಡಾ. ಕೆ.ಬಿ. ರಂಗಪ್ಪ ಮತ್ತಿತರರಿದ್ದರು.ಧಾರಾವಾಹಿಗಳ ಹಾವಳಿಯಿಂದ ರಂಗಕಲೆಗೆ ಧಕ್ಕೆ

ಹಿರೇಕೆರೂರು: ಜೀವನ ಒಂದು ನಾಟಕ. ನಾವೆಲ್ಲ ಪಾತ್ರಧಾರಿಗಳು. ಜೀವನದ ನಾಟಕದಲ್ಲಿ ಒಂದು ನಾಟಕ ರಂಗಭೂಮಿ. ಈ ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಪಟ್ಟಣದ ಗುರುಭವನದಲ್ಲಿ ಇಳಕಲ್ ತಾಲೂಕಾರಂಗ ಸಂಗಮ ಕಲೆ ಮತ್ತು ಸಾಂಸ್ಕೃತಿಕ ಸಂಘ ಹಾಗೂ ತಾಲೂಕು ಕಸಾಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ಲಯನ್ಸ್ ಕ್ಷಬ್ ಸಹಯೋಗದಲ್ಲಿ ಪ್ರದರ್ಶನಗೊಂಡ ಮಲಮಗಳು ನಾಟಕ ಉದ್ಘಾಟಿಸಿ ಮಾತನಾಡಿದರು.

ರಂಗಭೂಮಿ ಕಲೆಯಲ್ಲಿ ನಿಜವಾದ ನೈಜಕಲೆಯ ಅನಾವರಣ ಆಗುತ್ತದೆ. ಧಾರಾವಾಹಿಗಳ ಹಾವಳಿಗಳಿಂದ ರಂಗಕಲೆ ಮರೆಯಾಗುತ್ತಿದೆ. ಸಾವಿರಕ್ಕೆ ಒಬ್ಬಕಲಾವಿದ ಹುಟ್ಟುತ್ತಾನೆ. ಅಂತಹ ಅಪರೂಪದ ಕಲಾವಿದರ ಜೀವನ ಕಷ್ಟಕರವಾಗುತ್ತಿದೆ. ನಾವೆಲ್ಲ ವಿದ್ಯಾಭ್ಯಾಸದ ಜತೆ ನಾಟಕದಕಡೆ ಆಸಕ್ತಿ ಹೊಂದಿದ್ದೆವು. ಆದರೆ ಯುವಕರು ಮೊಬೈಲ್ ಗೀಳಿಗೆ ದಾಸರಾಗಿ ಕಲೆಯ ಸ್ವಾರಸ್ಯವನ್ನು ಕಳೆದುಕೊಂಡಿದ್ದಾರೆ ಎಂದರು.

ಕಸಾಪ ಘಟಕದ ಅಧ್ಯಕ್ಷ ಎನ್. ಸುರೇಶಕುಮಾರ ಮಾತನಾಡಿ, ರಂಗ ಕಲಾವಿದರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಅವರ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ. ಕನ್ನಡದ ಜನತೆ ಇಂಥ ಕಲಾವಿದರಿಗೆ ಸಹಾಯಹಸ್ತ ಚಾಚಬೇಕಾಗಿದೆ. ಅವರ ಸಹಾಯಾರ್ಥದ ಸದುದ್ದೇಶದಿಂದ ಈ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.

ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಎಸ್.ಎಸ್. ಪಾಟೀಲ ಮಾತನಾಡಿ, ರಂಗಭೂಮಿ ಅಳಿವಿನ ಅಂಚಿನಲ್ಲಿದ್ದು, ಆಧುನಿಕ ವಿದ್ಯುನ್ಮಾನ ಯುಗದ ಕಲೆಗೆ ರಂಗ ಭೂಮಿ ಆಧಾರಸ್ತಂಭ ಎಂಬುದನ್ನು ತಿಳಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಕಸಾಪ ಘಟಕದ ಗೌರವಾಧ್ಯಕ್ಷ ಮಹೇಂದ್ರ ಬಡಳ್ಳಿ, ಕಾರ್ಯದರ್ಶಿ ಪಿ.ಎಸ್. ಸಾಲಿ, ಮೌನೇಶ ಮತ್ತೂರ, ಜಿ.ಪಿ. ಪ್ರಕಾಶಗೌಡ, ಡಾ. ಎಸ್.ಪಿ. ಗೌಡರ, ರಂಗ ಸಂಗಮ ಇಳಕಲ್‌ನ ಅಧ್ಯಕ್ಷೆ ರೇಷ್ಮಾ ಸಿ. ಅಳವಂಡಿ, ಎನ್.ಸಿ. ಕಟಾರೆ, ಪಿ.ಬಿ. ನಿಂಗನಗೌಡ್ರ, ಕುಮಾರ ಪಟ್ಟಪ್ಪಗೌಡ್ರ, ಎಂ.ಬಿ. ಹಾದಿಮನಿ, ಬಿ.ವಿ. ಸೊರಟೂರ, ಡಾ. ಬಸವರಾಜ ಪೂಜಾರ ಇತರರು ಇದ್ದರು.

Share this article