ಹಳಿಯಾಳ: ರಾಜ್ಯದಲ್ಲಿನ ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರ ಕೊರತೆ ನಿಗಿಸುವಲ್ಲಿ ಹಾಗೂ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿ ವೃದ್ಧಿಸುವಲ್ಲಿ ಅತಿಥಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದು ರಾಜ್ಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷೆ ಚಿತ್ರಲೇಖಾ ಕೆ ಹೇಳಿದರು.
ಭಾನುವಾರ ಪಟ್ಟಣದ ಪುರಭವನದಲ್ಲಿ ಆಯೋಜಿಸಿದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರ ಸಮಾವೇಶ ಉದ್ದೇಶಿಸಿ ಮಾತನಾಡಿದರು.ಅತ್ಯಂತ ಕನಿಷ್ಟ ವೇತನದೊಂದಿಗೆ ಯಾವುದೇ ಸೇವಾ ಭದ್ರತೆಯಿಲ್ಲದೇ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರನ್ನು ಗೌರವದಿಂದ ನೋಡಿಕೊಳ್ಳುವ ಹಾಗೂ ಸೂಕ್ತ ಆರ್ಥಿಕ ಭದ್ರತೆ ನೀಡುವ ಜವಾಬ್ದಾರಿ ಸರ್ಕಾರಕಿದೆ ಎಂದರು.
ರಾಜ್ಯದಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆ ಭರ್ತಿ ಮಾಡುವಾಗ ಸರ್ಕಾರ ಅತಿಥಿ ಶಿಕ್ಷಕರಿಗೆ ಮೊದಲ ಪ್ರಾಶಸ್ತ್ಯ ನೀಡಿ ಆಯ್ಕೆ ಮಾಡಬೇಕು. ಸರ್ಕಾರಿ ಶಿಕ್ಷಕರಂತೆ ಅತಿಥಿ ಶಿಕ್ಷಕರಿಗೂ ಮಧ್ಯಂತರ ರಜೆ ಹಾಗೂ ಬೇಸಿಗೆಯ ರಜೆಯಲ್ಲಿಯೂ ಸಹ 12 ತಿಂಗಳ ವೇತನ ನೀಡುವುದರ ಜತೆಯಲ್ಲಿ ಸೇವೆಯಲ್ಲಿ ಮುಂದುವರೆಸಬೇಕು ಎಂದು ಆಗ್ರಹಿಸಿದರು.ರಾಜ್ಯ ಸರ್ಕಾರಕ್ಕೆ ಅತಿಥಿ ಶಿಕ್ಷಕರ ಸಮಸ್ಯೆ ಮನವರಿಕೆ ಮಾಡಲು ಮುಂದಿನ ತಿಂಗಳು 4 ಅಥವಾ 5ರಂದು ರಾಜ್ಯಮಟ್ಟದ ಸಮಾವೇಶ ಆಯೋಜಿಸಿದ್ದು, ಈ ಸಮಾವೇಶದಲ್ಲಿ ಬಾರಿ ಸಂಖ್ಯೆಯಲ್ಲಿ ಅತಿಥಿ ಶಿಕ್ಷಕರು ಭಾಗವಹಿಸಿ ಸರ್ಕಾರಕ್ಕೆ ನಮ್ಮ ಬೇಡಿಕೆ ಸಲ್ಲಿಸೋಣ ಎಂದರು.
ಸಮಾವೇಶ ಉದ್ಘಾಟಿಸಿದ ಹಳಿಯಾಳ ತಾಲೂಕು ಸರ್ಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯಕ ಬಾವಿಕೇರಿ ಮಾತನಾಡಿ, ಹಳಿಯಾಳ ಮತ್ತು ದಾಂಡೇಲಿ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರನ್ನು ಅತ್ಯಂತ ಗೌರವದಿಂದ ನೋಡಲಾಗುತ್ತಿದೆ, ಯಾವತ್ತೂ ಸರ್ಕಾರಿ ಶಿಕ್ಷಕರು ಅತಿಥಿ ಶಿಕ್ಷಕರೆಂಬ ಭೇದಭಾವ ಮಾಡಿದ ನಿರ್ದೇಶನಗಳಿಲ್ಲ ಎಂದರು.ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಪ್ರಶಾಂತ ನಾಯಕ ಮಾತನಾಡಿ, ಅತಿಥಿ ಶಿಕ್ಷಕರ ನೋವು ನಲಿವುಗಳು, ಸಮಸ್ಯೆಗಳ ಪರಿಹಾರಕ್ಕಾಗಿ ನಮ್ಮ ಸಂಘವು ಸದಾ ನಿಮ್ಮೊಂದಿಗೆ ಇದೆ. ಬೆಲೆಯೇರಿಕೆಯ ಈ ಸಮಯದಲ್ಲಿ ಅತ್ಯಂತ ಕಡಿಮೆ ವೇತನದಲ್ಲಿ ಬದುಕು ನಿರ್ವಹಣೆ ಕಷ್ಟಕರವಾಗಿದೆ. ರಾಜ್ಯ ಸರ್ಕಾರ ಇನ್ನೂ ಮುಂದಿನ ದಿನಗಳಲ್ಲಿ ಶಿಕ್ಷಕರ ನೇಮಕಾತಿ ನಡೆಸುವಾಗ ಅತಿಥಿ ಶಿಕ್ಷಕರಿಗೆ ಮೊದಲ ಆದ್ಯತೆ ನೀಡಬೇಕೆಂದು ನಮ್ಮ ಸಂಘವು ಸರ್ಕಾರವನ್ನು ಆಗ್ರಹಿಸಲಿದೆ ಎಂದರು.
ಸಭೆಯಲ್ಲಿ ಅತಿಥಿ ಶಿಕ್ಷಕರ ಸಂಘದ ರಾಜ್ಯ ಸಂಚಾಲಕ ಗಂಗಾಧರ ಹಾಗೂ ತಾಲೂಕು ಸಂಘದ ಪ್ರಮುಖ ರೆಹನಾ ಶೇಖ್, ಉಮಾ ಹಾಗೂ ಮನೋಹರ ಅತಿಥಿ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.ಜಿಲ್ಲೆಯ ವಿವಿಧ ತಾಲೂಕುಗಳ ಅತಿಥಿ ಶಿಕ್ಷಕರ ಸಂಘದ ಪ್ರಮುಖರಾದ ರಾಮು ಭಜಂತ್ರಿ, ಬಂಡಿ, ಇಮ್ತಿಯಾಜ್ ಶೇಖ್, ಫಾರೂಕ ಮುಲ್ಲಾ, ಶಹನಾಜ್ ಶೇಖ್, ಮದ್ನಳ್ಳಿ ಗ್ರಾಪಂ ಅಧ್ಯಕ್ಷೆ ಮಂಜುಳಾ ಮೊರೆ, ಶ್ರೀಕಾಂತ ವಡ್ಡರ ಇದ್ದರು. ಶಿರಸಿ ಶೈಕ್ಷಣಿಕ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಅತಿಥಿ ಶಿಕ್ಷಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.