ಅತಿಥಿ ಶಿಕ್ಷಕರ ವಾರ್ಷಿಕ ಜಿಲ್ಲಾ ಸಮ್ಮೇಳನದಲ್ಲಿ ಶಾಸಕ
ಕನ್ನಡಪ್ರಭ ವಾರ್ತೆ ಶಿರಸಿಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಅತಿಥಿ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು, ಅತಿಥಿ ಶಿಕ್ಷಕರು ಮತ್ತು ಖಾಯಂ ಶಿಕ್ಷಕರು ತಾರತಮ್ಯವಿಲ್ಲದೇ ಕೆಲಸ ನಿರ್ವಹಿಸುತ್ತಿದ್ದಾರೆ. ಅತಿಥಿ ಶಿಕ್ಷಕರ ಬೇಡಿಕೆ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ಧ್ವನಿಗೂಡಿಸುತ್ತೇನೆ ಎಂದು ಶಾಸಕ ಭೀಮಣ್ಣ ನಾಯ್ಕ ಭರವಸೆ ನೀಡಿದರು.
ಭಾನುವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ ಹಮ್ಮಿಕೊಂಡಿದ್ದ ಅತಿಥಿ ಶಿಕ್ಷಕರ ವಾರ್ಷಿಕ ಜಿಲ್ಲಾ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು. ಶಿಕ್ಷಕರ ಕೊರತೆ ನೀಗಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶ್ರಮಿಸುತ್ತಿದ್ದಾರೆ. ಪ್ರಸ್ತುತ 13 ಸಾವಿರ ಶಿಕ್ಷಕರ ನೇಮಕಾತಿಗೆ ಪ್ರಯತ್ನ ನಡೆದಿದೆ. ಅತಿಥಿ ಶಿಕ್ಷಕರಿಗೆ ₹12 ಸಾವಿರ ಗೌರವಧನ ನೀಡಿದರೂ, ಅದರಿಂದ ಜೀವನ ನಡೆಸುವುದು ಕಷ್ಟವಾಗಿದೆ. ಶಿಕ್ಷಕರ ನೇಮಕಾತಿ ವಿಳಂಬವಾದ ಸಮಯದಲ್ಲಿ ವಯಸ್ಸಿನ ಸಡಿಲಿಕೆ ಮಾಡಿ ಅತಿಥಿ ಶಿಕ್ಷಕರಿಗೆ ಅವಕಾಶ ನೀಡುವ ಅಗತ್ಯವಿದೆ. ನಿಮ್ಮ ಬೇಡಿಕೆಗೆ ಪರಿಹಾರ ಹುಡುಕುವಲ್ಲಿ ಶಿಕ್ಷಣ ಮಂತ್ರಿಗಳಲ್ಲಿ ಪ್ರಸ್ತಾಪಿಸುತ್ತೇನೆ ಎಂದರು.ಕೆಪಿಸಿಸಿ ಶಿಕ್ಷಕರ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ಅತಿಥಿ ಶಿಕ್ಷಕರು ಖಾಯಂ ಶಿಕ್ಷಕರ ರೀತಿಯಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ದೇಶದಲ್ಲಿ ಅರೇಕಾಲಿಕ ಶಿಕ್ಷಕರಾಗಿ ನೇಮಕಾತಿಯ ಪಿಡುಗು ಆರಂಭವಾಗಿದೆ. ಶಿಕ್ಷಕರು ಅರೆ ಹೊಟ್ಟೆಯಲ್ಲಿ ಪರಿಣಾಮಕಾರಿ ಬೋಧನೆ ಮಾಡಲು ಸಾಧ್ಯವಿಲ್ಲ. ಸಾಮಾಜಿಕ ಸಂಘಟನೆ ಮೂಲಕ ಅತಿಥಿ ಶಿಕ್ಷಕರರನ್ನು ಖಾಯಂ ಶಿಕ್ಷಕರಾಗಿ ನೇಮಿಸಬೇಕು. ಅಂತಾರಾಷ್ಟೀಯ ಆಯೋಗದ ನಿಯಮದ ಪ್ರಕಾರ ವೇತನ ಹೆಚ್ಚಿಸಬೇಕು. ಪದೋನ್ನತಿ ನೀಡಬೇಕಾದರೆ ಟಿಇಟಿ ಉತ್ತೀರ್ಣರಾಗವೇಕು ಎಂಬುದಿದೆ. ಆದರೆ ಉಳಿದ ಇಲಾಖೆಯಲ್ಲಿ ಈ ರೀತಿ ಮಾನದಂಡ ಇಲ್ಲ. ಪದವೀಧರರು ನೋಂದಣಿ ಮಾಡಿಕೊಳ್ಳಬೇಕು. ಮುಂದಿನ ಪದವೀಧರರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ಹೊಂದಿದ್ದೇನೆ. ಎಲ್ಲರೂ ಸಹಕಾರ ನೀಡಬೇಕು ಎಂದರು.
ಕರಾಸಪ್ರಾ ಮತ್ತು ಪ್ರೌಢ ಶಾಲಾ ಅತಿಥಿ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಡಿ.ಎಸ್. ರಾಜಗೋಪಾಲ್, ಜಿಲ್ಲಾಧ್ಯಕ್ಷೆ ರೇಹನಾ ಶೇಖ್, ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮೇತ್ರಿಯಾ, ಶಿರಸಿ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕ ಡಿ.ಆರ್. ನಾಯ್ಕ, ರಾಜ್ಯ ಉರ್ದು ಒಕ್ಕೂಟದ ಅಧ್ಯಕ್ಷ ಅಬ್ದುಲ್ ರೆಹಮಾನ್, ಪ್ರಮುಖರಾದ ತುಲಸಿದಾಸ ಪಾವಸ್ಕರ ಹೊನ್ನಾವರ, ವಕೀಲ ರವೀಂದ್ರ ಕಾರವಾರ ಮತ್ತಿತರರು ಇದ್ದರು.