ಉಪ್ಪಾರ ಸಮಾಜ ಎಸ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸಿಗೆ ಒತ್ತಾಯ

KannadaprabhaNewsNetwork |  
Published : Oct 06, 2025, 01:01 AM IST
ಹರಪನಹಳ್ಳಿ: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ ಉಪ್ಪಾರ ಸಮಾಜದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಉದ್ಘಾಟಿಸಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ಅಚಲವಾದ ಗುರಿಯೊಂದಿಗೆ ಜ್ಞಾನ ಪಡೆದಾಗ ತಮ್ಮ ಸಾಧನೆ ಮಾಡಲು ಸಾಧ್ಯ.

ಹರಪನಹಳ್ಳಿ: ಜ್ಞಾನಕ್ಕಿಂತ ಮಿಗಿಲಾದ ಶಕ್ತಿ ಮತ್ತೊಂದಿಲ್ಲ. ವಿದ್ಯೆ ಸಾಧಕನ ಸ್ವತ್ತೇ ಹೊರತು, ಸೋಮಾರಿಯ ಸ್ವತ್ತಲ್ಲ ಎಂದು ಹೊಸದುರ್ಗ ಭಗೀರಥ ಪೀಠದ ಡಾ.ಪುರುಷೋತ್ತಮಾನಂದಪುರಿ ಶ್ರೀ ಹೇಳಿದರು.

ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ತಾಲೂಕು ಉಪ್ಪಾರ ನೌಕರರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಬಡ್ತಿ ಹಾಗೂ ನಿವೃತ್ತಿ ಹೊಂದಿದ ನೌಕರರಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಅಚಲವಾದ ಗುರಿಯೊಂದಿಗೆ ಜ್ಞಾನ ಪಡೆದಾಗ ತಮ್ಮ ಸಾಧನೆ ಮಾಡಲು ಸಾಧ್ಯ. ಭಗೀರಥ ಮಹರ್ಷಿಯವರು ಕಠಿಣ ತಪ್ಪಸ್ಸಿನಿಂದಾಗಿ ಗಂಗೆಯನ್ನು ಧರೆಗೆ ತಂದು ಇಡೀ ಮನುಕುಲವನ್ನು ಉದ್ದಾರಗೊಳಿಸಿದ ಮಹಾನ್ ತಪ್ಪಸ್ವಿ ಎಂದು ತಿಳಿಸಿದರು.

ಉಪ್ಪಾರ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಕಲ್ಪಿಸುವ ಸಂಬಂಧ ಈಗಾಗಲೇ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನವನ್ನು ಪೂರ್ಣಗೊಳಿಸಿದ್ದು, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಶ್ರೀಗಳು ಒತ್ತಾಯಿಸಿದರು.

ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ಜಾತಿ ಇರಲಿ ಜಾತಿಗಿಂತ ಮಾನವೀಯತೆ ಮುಖ್ಯವಾಗಿರುತ್ತದೆ. ಉಪ್ಪಾರ ಸಮುದಾಯ ಭೂಮಿಗೆ ಗಂಗೆ ತಂದ ವಂಶಸ್ಥರು, ಸಮುದಾಯದ ಮಕ್ಕಳು ವಿದ್ಯಾವಂತರಾಗಿ ಮುಖ್ಯವಾಹಿನಿಗೆ ಬರಬೇಕು, ರಾಜಕೀಯ ಸೇವೆಗಿಂತ ಸಮಾಜ ಸೇವೆ ಬಹುಮುಖ್ಯವಾಗಿದ್ದು, ಉಪ್ಪಾರ ಸಮುದಾಯ ನೌಕರರು ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸನ್ಮಾನದಂತಹ ಕಾರ್ಯಗಳು ಶ್ಲಾಘನೀಯ ಎಂದರು.

ಧಾರವಾಡದ ಸ್ಪರ್ಧಾಸ್ಫೂರ್ತಿ ಮಾಸ ಪತ್ರಿಕೆಯ ಪ್ರಧಾನ ಸಂಪಾದಕ ಲಕ್ಷ್ಮಣ್ ಉಪ್ಪಾರ ಮಾತನಾಡಿ, ಸಾಧನೆಗೆ ಬಡತನ, ಅವಮಾನಗಳೇ ಪ್ರೇರಣೆಯಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಬಡತನವನ್ನು ಲೆಕ್ಕಹಾಕದೇ ಜ್ಞಾನದ ಕಡೆಗೆ ಹೆಚ್ಚು ಗಮನಹರಿಸಿ ಎಂದು ಹೇಳಿದರು.

ಆರೋಗ್ಯ ಮತ್ತು ಜ್ಞಾನದಿಂದ ಜಗತ್ತನ್ನು ಬದಲಾಯಿಸಬಹುದು, ಅನೇಕರು ತಮ್ಮ ಸಾಧನೆಗಳನ್ನು ಮಾಡಿದ್ದು, ವಿದ್ಯಾವಂತ ಮಕ್ಕಳು ಆರಂಭದಿಂದ ತಮ್ಮ ಗುರಿ ಮುಟ್ಟುವ ತನಕ ಕನಸ್ಸುಗಳನ್ನು ಕಾಣುತ್ತಿರಬೇಕು ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಉಪ್ಪಾರ ಸಮಾಜದ ಮುಖಂಡ ಡಾ.ಉಮ್ಮೇಶಬಾಬು ಮಾತನಾಡಿ, ರಾಜ್ಯದಲ್ಲಿ ನಮ್ಮ ಸಮುದಾಯ ಸೇರಿಕೊಂಡು ಇತರೆ ಸಣ್ಣ ಸಣ್ಣ ಸಮುದಾಯಗಳನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ನಾವು ಜಾಗೃತರಾಗಬೇಕು. ರಾಜ್ಯದಲ್ಲಿ ನಮ್ಮ ಸಮುದಾಯ 15ರಿಂದ 16 ಲಕ್ಷ ಜನಸಂಖ್ಯೆ ಇದ್ದು, 8 ಜನ ಶಾಸಕರು ಆಗುವ ಅರ್ಹತೆ ಇದ್ದರು ಸಹ ಅವಕಾಶ ಸಿಗುತ್ತಿಲ್ಲ ಎಂದು ಬೆಸರ ವ್ಯಕ್ತಪಡಿಸಿದರು.

ಸಂಘದ ರಾಜ್ಯಾಧ್ಯಕ್ಷ ಎಸ್.ಎನ್.ಚಂದ್ರಪ್ಪ, ಸಮಾಜದ ಜಿಲ್ಲಾಧ್ಯಕ್ಷ ಯು.ಸೋಮಪ್ಪ ಮಾತನಾಡಿದರು.

ಸಂಘದ ತಾಲೂಕು ಅಧ್ಯಕ್ಷ ಕೆ.ಅಂಜಿನಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ವೇಳೆ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಬಡ್ತಿ ಮತ್ತು ನಿವೃತ್ತ ನೌಕರರಿಗೆ ಸನ್ಮಾನಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಪರಶುರಾಮ, ತಾಲೂಕು ಅಧ್ಯಕ್ಷ ಟಿ.ತಿಮ್ಮಪ್ಪ, ರೈತ ಮುಖಂಡ ಶಿರಾಗನಹಳ್ಳಿ ಪರಶುರಾಮ, ಕಾಂಗ್ರೆಸ್ ಮುಖಂಡ ಎಚ್.ಎಂ.ಮಲ್ಲಿಕಾರ್ಜುನಸ್ವಾಮಿ, ಸಾರಿಗೆ ಘಟಕ ವ್ಯವಸ್ಥಾಪಕಿ ಎಂ.ಮಂಜುಳಾ, ಸಾಹಿತಿ ಎಂ.ಸುಭದ್ರಮ್ಮ, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಕೆ.ತಿಮ್ಮಪ್ಪ, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಪಿ.ಅಂಜಿನಪ್ಪ, ಯು.ಕರಿಬಸಪ್ಪ, ಪಿ.ಗಣೇಶ, ಶಿವಾನಂದ, ಕಾಡಜ್ಜಿ ಮಂಜಪ್ಪ, ಡಿ.ಶಶಿಕಲಾ, ಓ.ರಾಜಪ್ಪ, ಎಂ.ಫಕ್ಕೀರಪ್ಪ, ಎಸ್.ಹನುಮಂತ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ