ಗದಗ: ಜನರಿಗೆ ನ್ಯಾಯ ಒದಗಿಸಿಕೊಡುವ ವಕೀಲ ವೃತ್ತಿ ಅತ್ಯಂತ ಪವಿತ್ರವಾಗಿದ್ದು. ಆದರ್ಶ ಸಮಾಜದ ನಿರ್ಮಾಣದಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ನಾಗವೇಣಿ ತಿಳಿಸಿದರು.ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜರುಗಿದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೊಂದು ಬೆಂದು ನ್ಯಾಯಾಲಯಕ್ಕೆ ಬಂದಿರುವ ಕಕ್ಷಿದಾರರ ರಕ್ಷಿಸುವುದು ವಕೀಲರ ಕರ್ತವ್ಯ. ಪ್ರಕರಣವನ್ನು ಆಳವಾಗಿ ಅಭ್ಯಾಸಗೈದು ಸಮರ್ಥವಾಗಿ ವಾದ ಮಂಡಿಸುವುದನ್ನು ಯುವ ವಕೀಲರು ಅಳವಡಿಸಿಕೊಳ್ಳಬೇಕು ಎಂದರು.
ಪ್ರತಿ ತೀರ್ಪಿನ ಹಿಂದೆಯೂ ಉತ್ತಮ ವಕೀಲರ ಜ್ಞಾನದಾನವಿರುತ್ತದೆ. ಹೀಗಾಗಿ ಯುವ ವಕೀಲರು ನಿರಂತರ ಅಧ್ಯಯನದಲ್ಲಿ ತೊಡಗಿಕೊಂಡು ತಮ್ಮ ಕಾನೂನು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕೆಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಮಾತನಾಡಿ, ಕಾನೂನು ಅಭ್ಯಾಸ ಇನ್ನುಳಿದ ವಿಷಯಗಳಿಗಿಂತ ಭಿನ್ನವಾಗಿದ್ದು, ಅಧ್ಯಯನ ಮಾಡುತ್ತಾ ಹೋದಂತೆ ಕಾನೂನು ಜ್ಞಾನ ಬೆಳೆಯುತ್ತಲೆ ಹೋಗುತ್ತದೆ. ವಕೀಲರು ಸಾಮಾಜಿಕ ನ್ಯಾಯವನ್ನು ಕಾಪಾಡುವಲ್ಲಿ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಅವರ ವೃತ್ತಿಯು ಅತ್ಯಂತ ಶ್ರೇಷ್ಠವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಆರ್.ಜಿ. ಕಲ್ಲೂರ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಡುವಂತೆ ಮಾಡುವುದು ವಕೀಲರ ಕರ್ತವ್ಯ. ಈ ನಿಟ್ಟಿನಲ್ಲಿ ಯುವ ವಕೀಲರು ಕಾರ್ಯ ನಿರ್ವಹಿಸಬೇಕೆಂದರು.
ಈ ವೇಳೆ ಜಿಲ್ಲೆಯ ಹಿರಿಯ ವಕೀಲರಿಗೆ, ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ನ್ಯಾಯಾಧೀಶರಿಗೆ, ಕಾನೂನು ಪದವಿಯಲ್ಲಿ ರ‍್ಯಾಂಕ್ ಪಡೆದ ಸಂಘದ ಸದಸ್ಯರನ್ನು ಸನ್ಮಾನಿಸಲಾಯಿತು. ಅಲ್ಲದೆ ವಕೀಲರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜಯಶಾಲಿಯಾದ ವಕೀಲರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸಂಘದ ಉಪಾಧ್ಯಕ್ಷ ಎಂ.ಎ. ಸಂಗನಾಳ, ಪ್ರ. ಕಾರ್ಯದರ್ಶಿ ಎಂ.ಎ. ನಾಯ್ಕರ, ಸಿ.ಬಿ. ಗೂಳರೆಡ್ಡಿ, ಎಸ್.ಬಿ. ಹಿರೇಮಠ ಸೇರಿದಂತೆ ಇತರರು ಇದ್ದರು. ವಕೀಲರಾದ ಸ್ವಾತಿ ಬಾತಾಖಾನಿ, ವಿದ್ಯಾಶ್ರೀ ಬೇವಿನಕಟ್ಟಿ ಪ್ರಾರ್ಥಿಸಿದರು. ಎಂ.ಟಿ. ಮಡ್ಡಿ ಸ್ವಾಗತಿಸಿದರು. ಹಿರಿಯ ನ್ಯಾ. ಜಿ.ಸಿ. ರೇಶ್ಮಿ ನಿರೂಪಿಸಿದರು. ನ್ಯಾ. ಬಿ.ಬಿ. ಹಾಜರಾ ವಂದಿಸಿದರು. ನಂತರ ರಸಮಂಜರಿ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.