- ದಾಸೋಹ ಸಂಸ್ಕೃತಿ ಉತ್ಸವದಲ್ಲಿ ಜನಮಾಧ್ಯಮ ಚಿಂತನಾ ಸಮಾವೇಶ ಕಾರ್ಯಕ್ರಮ - - -
ಸಮಾಜದಲ್ಲಿ ಮಾಧ್ಯಮ ಕೇತ್ರಕ್ಕೆ ತನ್ನದೇ ಆದ ಜವಾಬ್ದಾರಿ ಇದೆ. ಪತ್ರಿಕಾ ರಂಗದ ಕೆಲಸ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ ಎಂದು ಚಿತ್ರದುರ್ಗ ಶ್ರೀ ಗುರು ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ನುಡಿದರು.
ತಾಲೂಕಿನ ದೊಣೆಹಳ್ಳಿ ಗ್ರಾಮದ ಶರಣ ಬಸವೇಶ್ವರ ದಾಸೋಹ ಮಠದಲ್ಲಿ ಮೂರನೇ ವರ್ಷದ ದಾಸೋಹ ಸಂಸ್ಕೃತಿ ಉತ್ಸವ ಹಿನ್ನೆಲೆ 2ನೇ ದಿನ ಹಮ್ಮಿಕೊಂಡಿದ್ದ ಜನಮಾಧ್ಯಮ ಚಿಂತನಾ ಸಮಾವೇಶ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಸುದ್ದಿ ಪತ್ರಿಕೆ, ಟಿವಿ, ಅಂತರ್ಜಾಲ, ಸಾಮಾಜಿಕ ಜಾಲತಾಣಗಳು ಆಧುನಿಕ ಸಮಾಜದ ಅವಿಭಾಜ್ಯ ಅಂಗವಾಗಿವೆ. ಮಾಹಿತಿ, ಶಿಕ್ಷಣ ಮತ್ತು ಮನರಂಜನೆಯನ್ನು ಒದಗಿಸುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಇವು ಜಗತ್ತಿನ ವಿದ್ಯಮಾನಗಳನ್ನು ಜನರಿಗೆ ತಲುಪಿಸುತ್ತ, ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ಸಾರ್ವಜನಿಕ ಅಭಿಪ್ರಾಯ ರೂಪಿಸಲು ಸಹಕರಿಸುತ್ತವೆ. ಜವಾಬ್ದಾರಿಯುತ ಮಾಧ್ಯಮವು ಸಾಮಾಜಿಕ ಜಾಗೃತಿ ಮತ್ತು ಪಾರದರ್ಶಕತೆಗೆ ಅತ್ಯಗತ್ಯವಾಗಿದೆ ಎಂದರು.
ಕಾರ್ಯಕ್ರಮಗಳಲ್ಲಿ ಎಷ್ಟು ಸಾವಿರ ಜನ ಬಂದು ಜಾತ್ರೆ ಮಾಡಿಕೊಂಡು ಹೋಗುವುದು ಮುಖ್ಯವಲ್ಲ. ದಾಸೋಹ ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಿದರೆ ನಮಗೆ ಹೆಮ್ಮೆ ಎಂಬ ಪದ ಮುಂದಿನ ದಿನಗಳಲ್ಲಿ ಬರುತ್ತದೆ. ಪ್ರತಿಭೆ ಮತ್ತು ಅನ್ವೇಷಣೆಯ ಮಹತ್ವ ಪ್ರಥಮವಾಗಿ ತಿಳಿಯುವುದಿಲ್ಲ. ಹಾಗೆಯೇ ದಾಸೋಹ ಸಂಸ್ಕೃತಿ ಉತ್ಸವ ದೊಣೆಹಳ್ಳಿಯಲ್ಲಿ ಆರಂಭವಾಗಿದೆ. ಮುಂದೆ ರಾಜ್ಯದ ಮೂಲೆ ಮೂಲೆಗಳಲ್ಲಿ ನಡೆಯಲಿವೆ. ಇದಕ್ಕೆ ಎಲ್ಲರ ಸಹಕಾರ ಬಹಳ ಮುಖ್ಯವಾಗಿದೆ ಎಂದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ. ಕಳೆದ ಗಣೇಶ ಹಬ್ಬದಲ್ಲಿ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಡಿಜೆ ಸೌಂಡ್ಸ್ ಬ್ಯಾನ್ ಮಾಡಲಾಗಿತ್ತು. ಆ ಸುದ್ದಿ ರಾಷ್ಟ್ರಕ್ಕೇ ತಲುಪಿತ್ತು. ವಚನಗಳ ಸಂಸ್ಕೃತಿ ಜನರಿಗೆ ಬೇಕಾಗಿಲ್ಲ. ಪಾಶ್ಚಿಮಾತ್ಯದ ಸಂಸ್ಕೃತಿಯನ್ನು ಇಂದಿನ ಯುವಕರು ಅಪ್ಪಿಕೊಳ್ಳುತ್ತಿರುವುದು ಬೇಸರ ಸಂಗತಿ. ಹಂತ ಹಂತವಾಗಿ ಎಲ್ಲ ಕಡೆ ಶರಣ ಸಂಸ್ಕೃತಿ, ವಚನ ಸಂಸ್ಕೃತಿ, ಆಚಾರ- ವಿಚಾರಗಳು, ಸಮ್ಮೇಳನಗಳು, ಬಸವ ತತ್ವ ಕೇಂದ್ರಗಳು ಬೆಳೆದುಕೊಂಡು ಹೋದರೆ ಮಾತ್ರ ಸಮಾಜ ಸುಭಿಕ್ಷೆಯಾಗಿರಲು ಸಾಧ್ಯ. ಇಲ್ಲದಿದ್ದರೆ ಮುಂದಿನ ಪೀಳಿಗೆ ತುಂಬ ಕಷ್ಟವಾಗುತ್ತದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್. ವಿನಾಯಕ, ಕೂಡ್ಲಿಗಿ ತಾಲೂಕು ಅಧ್ಯಕ್ಷ ಹುಡೇಂ ಕೃಷ್ಣಮೂರ್ತಿ, ಜಗಳೂರು ತಾಲೂಕು ಅಧ್ಯಕ್ಷ ಲೋಕೇಶ್ ಎಂ. ಐಹೊಳೆ ಸೇರಿ ವಿವಿಧ ಪಾಧಿಕಾರಿಗಳಿಗೆ ಹಾಗೂ ಪಶು ವೈದ್ಯಾಧಿಕಾರಿ ಡಾ. ಕೆ.ವಿ. ವೀರೇಶ್, ಪುಣೆ ಮಣಿಪಾಲ್ ಅನೇಸ್ತೇಷಿಯಾ ಡಾ.ಜಯಶ್ರೀ ಗೋವೇರ ಅವರನ್ನು ಮಠದಿಂದ ಗೌರವ ಸಮರ್ಪಣೆ ಮಾಡಲಾಯಿತು.
- - -
ದಾಸೋಹ ಸಂಸ್ಕೃತಿ ಉತ್ಸವ ಹಿನ್ನೆಲೆ ಹಮ್ಮಿಕೊಂಡಿದ್ದ ಜನಮಾಧ್ಯಮ ಚಿಂತನಾ ಸಮಾವೇಶ ಕಾರ್ಯಕ್ರಮವನ್ನು ಚಿತ್ರದುರ್ಗ ಶ್ರೀ ಗುರು ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಉದ್ಘಾಟಿಸಿಸಿದರು.