ಹೆಣ್ಣು ಅಬಲೆಯಲ್ಲಿ ಸಬಲೆ: ಮಾಜಿ ಸಚಿವ ಆಂಜನೇಯ

KannadaprabhaNewsNetwork |  
Published : Mar 09, 2026, 01:15 AM IST
ಫೋಟೋ ಕ್ಯಾಪ್ಷನ್ಚಿತ್ರದುರ್ಗದಲ್ಲಿ ಮಹಿಳಾ ದಿನಾಚರಣೆಯನ್ನು ಜಿಲ್ಲಾಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟಿಸಿದರು | Kannada Prabha

ಸಾರಾಂಶ

ಲಿಡ್ಕರ್ ಭವನದಲ್ಲಿ ಮಹಿಳಾ ದಿನಾಚರಣೆ । ವಿವಿಧ ಕ್ಷೇತ್ರದ ಸಾಧಕಿಯರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹೆಣ್ಣು ಅಬಲೆ, ಅಶಕ್ತಳು, ಮನೆ ನಿರ್ವಹಣೆಗೆ ಸೀಮಿತವೆಂಬ ಮನೋಭಾವನೆ ಬೇರೂರಿದ್ದು, ಅದೆಲ್ಲವೂ ಸುಳ್ಳು ಎಂಬುದನ್ನು ಅನೇಕ ಬಾರಿ ಸಾಬೀತು ಮಾಡಿದ್ದಾಳೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ನಗರದ ಲಿಡ್ಕರ್ ಭವನದ ಮಾದಾರ ಚನ್ನಯ್ಯ ಸಭಾಂಗಣದಲ್ಲಿ ಕಾರ್ಣಿಕ ಫೌಂಡೇಷನ್, ಸಮರ್ಥರಾಯ್ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರದ ಸಾಧಕಿಯರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಬೈಕ್, ಕಾರು, ಲಾರಿ, ಅಷ್ಟೇ ಏಕೆ ವಿಮಾನ ಚಲಾಯಿಸುವ ಮಹಿಳೆ ಚಂದ್ರಲೋಕಕ್ಕೂ ಹೋಗಿ ಸುರಕ್ಷಿತವಾಗಿ ಹಿಂತಿರುಗಿದ್ದಾಳೆ. ಯಾವುದೇ ಕ್ಷೇತ್ರಕ್ಕೆ ಪ್ರವೇಶಿಸಿದರೆ ಬದ್ಧತೆ, ನಿಷ್ಠೆ ಶ್ರಮದಿಂದ ತೊಡಗಿಸಿಕೊಂಡು ಸಾಧನೆ

ಮಾಡುವಲ್ಲಿ ಮಹಿಳೆಯೇ ಮುಂಚೂಣಿಯಲ್ಲಿದ್ದಾಳೆ ಎಂದರು.

ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ನಾವಿನ್ನೂ ಅವಳನ್ನು ಮನೆ, ಮಕ್ಕಳು, ಗಂಡನ ಕೆಲಸಕ್ಕೆ ಸೀಮಿತ ಮಾಡಿಕೊಂಡಿದ್ದೇವೆ. ಸೌಟು ಹಿಡಿಯುವ ಕೈಗೆ ಅಧಿಕಾರ ಸಿಕ್ಕರೆ ನಾಡು ಸುಭೀಕ್ಷೆ ಆಗಲಿದೆ, ಬಡ, ಮಧ್ಯಮ ವರ್ಗದವರ ಬದುಕು ಸುಧಾರಿಸಲಿದೆ ಎಂಬುದಕ್ಕೆ ಇಂದಿರಾ ಗಾಂಧಿ ಆಡಳಿತವೇ ಸಾಕ್ಷಿ ಎಂದು ತಿಳಿಸಿದರು.

ಮಹಿಳೆಯನ್ನು ನಾವೆಲ್ಲರೂ ಗೌರವ ಭಾವನೆ ಜೊತೆಗೆ ಎಲ್ಲ ಕ್ಷೇತ್ರದಲ್ಲೂ ಅವಕಾಶ ಕಲ್ಪಿಸಿದರೆ ನಾಡು ಸಮೃದ್ಧಗೊಳ್ಳಲಿದೆ. ತಾಯಿ, ಹೆಂಡತಿ, ಮಗಳು, ಸೊಸೆ ಹೀಗೆ ವಿವಿಧ ರೀತಿ ನಮ್ಮನ್ನು ಸಲುವ ಹೃದಯವಂತೆಗೆ ಗೌರವಿಸಬೇಕಿದೆ. ಬಹಳಷ್ಟು ಮಂದಿ ಡಿಸಿ, ಎಸ್‌ಪಿ, ಅಧಿಕಾರಿ ಆಗಬೇಕೆಂದು ಬಹಳಷ್ಟು ಮಹಿಳೆಯರು ಆಸೆಪಡುತ್ತಾರೆ. ಆದರೆ ಇಲ್ಲಿನ ಯುವತಿಯೊಬ್ಬಳು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಮಹಾದಾಸೆ

ವ್ಯಕ್ತಪಡಿಸಿರುವುದು ಮಾದರಿ ಆಗಿದೆ. ಈಗಾಗಲೇ ಅನೇಕ ಮಹಿಳೆಯರು ಕೃಷಿಯಲ್ಲಿ ಮೇಲುಗೈ ಸಾಧಿಸಿದ್ದಾರೆ. ಆದ್ದರಿಂದ ನಾವೆಲ್ಲರೂ ವಿವಿಧ ಕ್ಷೇತ್ರದ ಜೊತೆಗೆ ಕೃಷಿಯ ಬಲವರ್ಧನೆಗೂ ಚಿಂತನೆ ನಡೆಸಬೇಕೆಂದು ತಿಳಿಸಿದರು.

ಬಹಳಷ್ಟು ಮಹಿಳಾ ಸಂಘಟನೆಗಳು ಸಮಾಜದಲ್ಲಿವೆ. ಅವರೆಲ್ಲರೂ ನಿಸ್ವಾರ್ಥ ಗುಣ ಬೆಳೆಸಿಕೊಳ್ಳಬೇಕು. ತಾಯಿಕರುಳು ಹೊಂದಿರಬೇಕು. ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಔದರ್ಯತೆ ತೋರಬೇಕು. ಮುಖ್ಯವಾಗಿ ಎಂತಹದ್ದೇ ಉಡುಪು ಧರಿಸಿ ಅದು ನಿಮ್ಮಹಕ್ಕು, ಅದರ ಜೊತೆಗೆ ದೇಶಿಯ ಬಟ್ಟೆ ಧರಿಸುವುದಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಒನಕೆ ಓಬವ್ವ ಹಾಗೂ ಇಂದಿರಾಗಾಂಧಿ ನಾಡಿನ ಧೈರ್ಯವಂತ ಮಹಿಳೆಯರಿಗೆ ಮಾದರಿ ಆಗಬೇಕು. ಸಾಮಾನ್ಯ ಮಹಿಳೆ ಒನಕೆ ಹಿಡಿದು ಕೋಟೆ ರಕ್ಷಿಸಿದ ಓಬವ್ವ, ಮತ್ತೊಂದೆಡೆ ಸಂಕಷ್ಟದ ಕಾಲಘಟ್ಟದಲ್ಲಿ ದೇಶದ ಚುಕ್ಕಾಣಿ ಹಿಡಿದು ಭಾರತವನ್ನು ಅತ್ಯಂತ

ಬಲಿಷ್ಠವನ್ನಾಗಿಸಿದ ಇಂದಿರಾಗಾಂಧಿ ನಮ್ಮೆಲ್ಲರಿಗೂ ಆದರ್ಶ ಎಂದು ಬಣ್ಣಿಸಿದರು.

ಆದಿಜಾಂಬವ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಈಚೆಗೆ ಎಲ್ಲೆಡೆ ಮೌಢ್ಯ, ಕಂದಾಚಾರಕ್ಕೆ ಮಹಿಳೆಯರು ಒಳಗಾಗುತ್ತಿದ್ದಾರೆ. ಪರಿಣಾಮ ಇಂತಹ ದೌರ್ಬಲ್ಯವನ್ನೇ ಅನೇಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ದೇವರನ್ನು ನಂಬಿ, ಪೂಜಿಸಿ. ಜೊತೆಗೆ ಶ್ರಮದೊಂದಿಗೆ ಬದುಕು ಕಟ್ಟಿಕೊಳ್ಳಲು ಮುಂದಾಗಿ. ಯಾವುದೇ ಕಾರಣಕ್ಕೂ ಮೂಢನಂಬಿಕೆ ಆಚರಣೆಗೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಬೇಡಿ. ವೈಜ್ಞಾನಿಕ ಚಿಂತನೆ ಬೆಳೆಸಿಕೊಂಡು, ಮಕ್ಕಳನ್ನು ವಿದ್ಯಾವಂತರನ್ನಾಗಿ ಭವಿಷ್ಯ ರೂಪಿಸಲು ಮುಂದಾಗಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಇನ್‌ಸೈಟ್ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯ್‌ಕುಮಾರ್, ಕಾರ್ಣಿಕ ಫೌಂಡೇಷನ್ ಅಧ್ಯಕ್ಷೆ ಅರ್ಪಿತಾ, ಗೀತಾನಂದಿನಿ ಗೌಡ, ಮುನಿರಾ, ಭರತನಾಟ್ಯ ಕಲಾವಿದೆ ನಂದಿನಿ ಶಿವಪ್ರಕಾಶ್, ಕೆ.ಸಿ.ವೀಣಾ, ಪುಷ್ಪಲತಾ ಬಾವಿಮಠ, ನವೀನ್ ಮಸ್ಕಲ್, ಕಿರಣ್ ಚಿಕ್ಕಜಾಜೂರು, ಎಚ್.ಸಮರ್ಥರಾಯ್, ಚೇತನ್ ಬೋರೇನಹಳ್ಳಿ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುತ್ತೂಟ್ ಫಿನ್‌ಕಾರ್ಪ್‌ನ ವಡಗಾಂವ ಶಾಖೆಯಲ್ಲಿ ಮಹಿಳಾ ದಿನಾಚರಣೆ
‘ಥ್ಯಾಂಕ್ಸ್‌ ಅಪ್ಪ’ ಕಾದಂಬರಿ ಪ್ರತಿ ಮನೆಯಲ್ಲೂ ಇರಲಿ: ನ್ಯಾ.ಸಂತೋಷ್‌