ಆಸ್ಪತ್ರೆಯಲ್ಲಿ ಶುಶ್ರೂಷಕಿಯರ ಪಾತ್ರ ಮಹತ್ವದ್ದು

KannadaprabhaNewsNetwork | Published : May 19, 2024 1:50 AM

ಸಾರಾಂಶ

ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಏರ್ಪಡಿಸಿದ್ದ ಶುಶ್ರೂಷಕರ ಹಬ್ಬ ಕಾರ್ಯಕ್ರಮವನ್ನು ಜಿಲ್ಲಾ ಸರ್ಜನ್‌ ಡಾ. ಮೋಹನ್‌ಕುಮಾರ್ ಅವರು ಉದ್ಘಾಟಿಸಿದರು. ಡಾ. ಚಂದ್ರಶೇಖರ್‌, ಡಾ. ಲೋಹಿತ್‌ಕುಮಾರ್‌, ಡಾ. ಕಲ್ಪನಾ, ಡಾ. ಲಾವಣ್ಯ ಇದ್ದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಆಸ್ಪತ್ರೆಯಲ್ಲಿ ಶುಶ್ರೂಷಕಿಯರ ಪಾತ್ರ ಮಹತ್ವದ್ದು, ದಾದಿಯರು ಯಾವಾಗಲೂ ಹಸನ್ಮುಖಿಯರಾಗಿ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಲ್ಲೇಗೌಡ ಜಿಲ್ಲಾಸ್ಪತ್ರೆ ಸರ್ಜನ್ ಡಾ. ಮೋಹನ್‌ಕುಮಾರ್ ಹೇಳಿದರು.

ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಸರ್ಕಾರಿ ಶುಶ್ರೂಷಕರ ಸಂಘದ ವತಿಯಿಂದ ಏರ್ಪಡಿಸಿದ್ದ ಪ್ಲಾರೆನ್ ನೈಟಿಂಗೇಲ್ ಜನ್ಮದಿನಾಚರಣೆ ಅಂಗವಾಗಿ ಶುಶ್ರೂಷಕರ ಹಬ್ಬ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಕೋವಿಡ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಇಡೀ ಜಗತ್ತು ಪರಿತಪಿಸುವ ಸಂದರ್ಭದ ಮಧ್ಯೆಯೂ ಕೊರೊನಾ ಯೋಧರಂತೆ ದುಡಿದ ದಾದಿಯರು ಸಾಕಷ್ಟು ಜೀವ ರಕ್ಷಿಸಿದ್ದಾರೆ. ಸಾರ್ವಜನಿಕರನ್ನು ರಕ್ಷಿಸುವ ಕಾಯಕದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟಿದ್ದಾರೆ ಎಂದು ತಿಳಿಸಿದರು.

ಸಾಮಾನ್ಯವಾಗಿ ರೋಗಿಗಳನ್ನು ಗುಣಪಡಿಸುವಲ್ಲಿ ವೈದ್ಯರು ಮಹತ್ತರವಾದ ಪಾತ್ರವನ್ನು ವಹಿಸಿದರೆ, ದಾದಿಯರು ಹಗಲು ರಾತ್ರಿ ರೋಗಿಗಳ ಸೇವಾ ಕಾಯಕದಲ್ಲಿಯೇ ತಮ್ಮ ದಿನವನ್ನು ಕಳೆಯುತ್ತಾರೆ. ಸ್ವತಃ ಕುಟುಂಬ ಸದಸ್ಯರಿಂದಲೇ ಅಂತರ ಕಾಯ್ದುಕೊಳ್ಳಬೇಕಾದ ಸವಾಲಿನ ಸಮಯದಲ್ಲೂ ಬೇರೆ ರೋಗಿಗಳಿಗಾಗಿ ತಮ್ಮ ಕುಟುಂಬವನ್ನು ದೂರವಿಟ್ಟು ಹೋರಾಡಿದರು ಎಂದರು.

ಉಪ ಜಿಲ್ಲಾ ಸರ್ಜನ್ ಡಾ.ಚಂದ್ರಶೇಖರ್ ಮಾತನಾಡಿ, ಶುಶ್ರೂಷಕಿಯರ ವೃತ್ತಿಯು ನಿಜಕ್ಕೂ ಸವಾಲೆನ್ನಿಸುವ ಕೆಲಸವಾಗಿದೆ. ಒಬ್ಬ ರೋಗಿಗೆ ವೈದ್ಯರು ದೈಹಿಕ, ಆರೋಗ್ಯ ಸುಧಾರಣೆಗೆ ಔಷಧಿಗಳನ್ನು ನೀಡಿದರೂ ಆತನನ್ನು ಮಾನಸಿಕವಾಗಿ ಸನ್ನದ್ಧಗೊಳಿಸುವಲ್ಲಿ ದಾದಿಯರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ರೋಗಿಯ ಉಪಚಾರವಷ್ಟೇ ಅಲ್ಲದೇ ಸಮಾಜದಲ್ಲಿ ರೋಗಗಳು ಉಲ್ಬಣಿಸದಂತೆ ಆರೋಗ್ಯವಂತ ನಾಗರಿಕ ಸಮಾಜ ಸೃಷ್ಟಿಸುವಲ್ಲಿ ದಾದಿಯರ ಕೊಡುಗೆ ಅಪಾರ. ವೈದ್ಯರು ರೋಗಿಯನ್ನು ತಪಾಸಣೆ ಮಾಡುವರು, ಆದರೆ ದಾದಿಯರು ರೋಗಿಯ ಆಸ್ಪತ್ರೆಗೆ ಬಂದಾಗಿನಿಂದು ಹಿಡಿದು ನಿರೋಗಿಯಾಗಿ ಹೊರ ತೆರಳುವವರೆಗೂ ಕಾಳಜಿ ತೋರಿಸುವವರು ಎಂದು ಬಣ್ಣಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ಜ್ಯೋತಿ, ವೈದ್ಯರು ರೋಗಿಯ ಪಾಲಿಗೆ ದೇವರಿದ್ದಂತೆ ನಿಜ. ಆದರೆ ಶುಶ್ರೂಷಕರು ಆ ರೋಗಿಗಳನ್ನು ತಾಯಿಯದಂತೆ ಪೋಷಿಸುವ, ಸಹೋದರಿಯಂತೆ ಪ್ರೀತಿಸುವ ದೈವ ಗುಣಗಳನ್ನು ಹೊಂದಿದ್ದಾರೆ. ಒಂದು ವೇಳೆ ದಾದಿಯರು ಇಲ್ಲದಿದ್ದರೆ ಪ್ರತಿಯೊಬ್ಬ ರೋಗಿಯ ಸ್ಥಿತಿ ಊಹಿಸಲು ಅಸಾಧ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ಲೋಹಿತ್‌ಕುಮಾರ್, ಡಾ.ಕಲ್ಪನಾ, ಡಾ.ಲಾವಣ್ಯ, ಸಂಘದ ಕಾರ್ಯದರ್ಶಿ ಕೆ.ಎಸ್.ರಂಗನಾಥ್, ಖಜಾಂಚಿ ಪದ್ಮಮ್ಮ, ಗೌರವಾಧ್ಯಕ್ಷೆ ಶಶಿಕಲಾ ಉಪಸ್ಥಿತರಿದ್ದರು.

Share this article