ಗದಗ: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕನ್ನಡ ಪತ್ರಿಕೆಗಳು ಜನರಲ್ಲಿ ಜಾಗೃತಿ ಮೂಡಿಸಲು, ಬ್ರಿಟಿಷರ ದಬ್ಬಾಳಿಕೆಯನ್ನು ಖಂಡಿಸಲು ಮತ್ತು ರಾಷ್ಟ್ರೀಯ ಭಾವನೆ ಬೆಳೆಸಲು ಪ್ರಮುಖ ಅಸ್ತ್ರವಾಗಿ ಕಾರ್ಯ ನಿರ್ವಹಿಸಿದವು ಎಂದು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರಾಜೇಂದ್ರ ಎಸ್. ಗಡಾದ ಹೇಳಿದರು.
ಸ್ವಾತಂತ್ರ್ಯ ಚಳವಳಿಯ ಸಂದೇಶ ಮತ್ತು ಗಾಂಧೀಜಿಯವರ ಕರೆಗಳನ್ನು ಹಳ್ಳಿ ಹಳ್ಳಿಗೆ ತಲುಪಿಸುವುದು ಸ್ವದೇಶಿ ವಸ್ತುಗಳ ಬಳಕೆ ಮತ್ತು ಬ್ರಿಟೀಷ್ ಕಾನೂನಿನ ವಿರುದ್ಧ ಜನರನ್ನು ಸಂಘಟಿಸುವುದು ನಿರ್ಭೀತ ವರದಿ ಮಾಡುವುದನ್ನು ಮುಖ್ಯ ಗುರಿಯಾಗಿಸಿಕೊಂಡ ಪತ್ರಿಕೆಗಳು ಭಾರತದ ಸ್ವತಂತ್ರ ಹೋರಾಟದ ಇತಿಹಾಸದಲ್ಲಿ ಅನುಪಮವಾದ ಕೊಡುಗೆ ನೀಡಿದ್ದು, ಅವುಗಳ ಪಾತ್ರ ಅತ್ಯಂತ ಸ್ಮರಣೀಯವಾಗಿದೆ ಎಂದರು.
ಗಾಯಕಿ ಡಾ. ಎಸ್. ಜಾನಕಿ ಅವರಿಗೆ ನಡೆದ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಯುವ ಗಾಯಕಿ ಅಶ್ವಿನಿ ಸೋಮನಗೌಡರ ಅವರು, ಎಸ್. ಜಾನಕಿ ಅವರ ಗೀತೆಗಳನ್ನು ಪ್ರಸ್ತುತಪಡಿಸಿದರು. ನಾರಿ ಸಮ್ಮಾನ್ ಪ್ರಶಸ್ತಿಗೆ ಭಾಜನರಾದ ಸುವರ್ಣ ಸದಾಶಿವಯ್ಯ ಮದರಿಮಠ ಅವರನ್ನು ಸನ್ಮಾನಿಸಲಾಯಿತು.ಕಾಶಿಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿಕೊಂಡು ಬಂದ ಶ್ರೀಮಠದ ಸದ್ಭಕ್ತ ದಂಪತಿಗಳಿಗೆ ಗುರುರಕ್ಷೆ ನೀಡಲಾಯಿತು. ಪ್ರಸಾದ ಸೇವೆಯನ್ನು ವಹಿಸಿಕೊಂಡ ವಿಶ್ರಾಂತ ಕೃಷಿ ಅಧಿಕಾರಿ ಪಿ.ಸಿ. ಪುರಾಣಿಕಮಠ, ರವಿ ಹುಚ್ಚಣ್ಣವರ ಹಾಗೂ ರವೀಂದ್ರ ಮಾಶಾಳ ಅವರನ್ನು ಶ್ರೀಮಠದಿಂದ ಗೌರವಿಸಲಾಯಿತು.