ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮುಧೋಳ ರನ್ನ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರನ್ನ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ರನ್ನ ವೈಭವದಿಂದ ಮುಧೋಳ ರಾಜ್ಯದಾದ್ಯಂತ ಹೆಸರು ಮಾಡಿದ್ದು, ಈ ಅಭೂತಪೂರ್ವ ಯಶಸ್ಸಿಗೆ ಜಿಲ್ಲೆಯ ಡಿ ದರ್ಜೆಯ ಸಿಬ್ಬಂದಿಯಿಂದ ಹಿಡಿದು ಡಿಸಿ, ಎಸ್.ಪಿ, ಸಿಇಒ ಹಾಗೂ ಎಸಿ ಮಟ್ಟದ ಅಧಿಕಾರಿಗಳೆಲ್ಲ ಮನೆಯ ಉತ್ಸವವೆಂಬಂತೆ ಹಗಲಿರುಳು ಶ್ರಮಿಸಿ ಅಚ್ಚುಕಟ್ಟಾದ ಕಾರ್ಯಕ್ರಮ ನಡೆಸಿದ್ದಾರೆ ಎಂದು ಬಣ್ಣಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ ತಾನು ಉನ್ನತ ಅಧಿಕಾರಿ ಎನ್ನದೇ ಪೇದೆಯಂತೆ ಕಾರ್ಯ ನಿರ್ವಹಿಸಿದರು, ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಎಸಿ ಎಂಬುದನ್ನು ಮರೆತು ಸ್ವಯಂ ಸೇವಕರಂತೆ ಕಾರ್ಯ ನಿರ್ವಹಿದ್ದು ಮರೆಯಲಾಗದ ಕ್ಷಣವಾಗಿದೆ ಎಂದು ಹೇಳಿದರು.ಕಾರ್ಯಕ್ರಮಕ್ಕೆ ಮುಧೋಳ ಜನತೆ ಹಾಗೂ ಜಿಲ್ಲೆಯ ಉದ್ಯಮಿಗಳು, ರನ್ನ ಅಭಿಮಾನಿಗಳು, ರನ್ನ ಪ್ರತಿಷ್ಠಾನ ಸದಸ್ಯರಿಗೆ, ಕನ್ನಡ ಸಂಘಟನೆಗಳಿಗೆ, ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಗೆ, ಸಾಹಿತಿ ಶಿಕ್ಷಕರು, ಸೇರಿ ಜಿಲ್ಲೆಯ ಸಮಸ್ತ ಜನತೆಗೆ ಅಭಿನಂದಿಸುವುದಾಗಿ ತಿಳಿಸಿದರು.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ ಮಾತನಾಡಿ, ಸಂಘಟನೆ ಎಂದರೇನು ಎಂಬುದನ್ನು ರನ್ನ ವೈಭವ ತಿಳಿಸಿಕೊಟ್ಟಿದೆ. ಈ ಕಾರ್ಯಕ್ರಮದ ಸಂಘಟನೆಗೆ ಒಂದು ತಿಂಗಳಿನಿಂದ ತಯಾರಿ ನಡೆದಿದ್ದು, ಪ್ರತಿಯೊಂದು ಸ್ಥಳದಲ್ಲಿ ಜನರಿಗೆ ತೊಂದರೆಯಾಗದಂತೆ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಕವಿಗೋಷ್ಠಿ, ವಿಚಾರ ಸಂಕಿರಣ ಕಾರ್ಯಕ್ರಮಗಳಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ನಡೆದಿದ್ದು ಸಂತೋಷ ತಂದಿದೆ ಎಂದರು.
ಇದೇ ವೇಳೆ ಪೌರ ಕಾರ್ಮಿಕರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟಿ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಎಸ್ ಎಚ್ ಕರಡಿಗುಡ್ಡ, ಜಿಲ್ಲಾ ವಾರ್ತಾಧಿಕಾರಿ ಕಸ್ತೂರಿ ಪಾಟೀಲ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್ ಜೈನಾಪುರ, ಜಮಖಂಡಿ ಡಿವೈಎಸ್ಪಿ ಶಾಂತಗಿರಿ ಸೇರಿದಂತೆ ಇತರರು ಇದ್ದರು. ಮುಧೋಳ ತಹಶೀಲ್ದಾರ್ ಮಹಾದೇವ ಸನಮುರಿ ಸ್ವಾಗತಿಸಿದರು.
- ಆರ್.ಬಿ. ತಿಮ್ಮಾಪೂರ ಜಿಲ್ಲಾ ಉಸ್ತುವಾರಿ ಸಚಿವರು