ಹೈವೇ ಸ್ಪೆಕ್ಟ್ರಮ್ ಶಾಲಾ ವಾರ್ಷಿಕೋತ್ಸವ ಉದ್ಘಾಟನೆ
ವಿದ್ಯಾವಂತರೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಸನ್ನಿವೇಶದಲ್ಲಿ ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ತಂದೆ, ತಾಯಿ ಮತ್ತು ಗುರುವಿನ ಪಾತ್ರ ಬಹಳ ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ತಿಮ್ಮಯ್ಯ ಅಭಿಪ್ರಾಯಿಸಿದರು..
ಕಡೂರಿನ ಹೈವೇ ಇಂಗ್ಲಿಷ್ ಸ್ಕೂಲ್‌ನಲ್ಲಿ ನಡೆದ ಹೈವೇ ಸ್ಪೆಕ್ಟ್ರಮ್ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಮನೆಯಲ್ಲಿ ಪೋಷಕರು ಮಕ್ಕಳಿಗೆ ಒತ್ತಡ ಹೇರುವ, ಅತಿ ಶಿಸ್ತು, ನಿರ್ಲಕ್ಷ್ಯ ಅಥವಾ ಅತಿ ಪ್ರೇಮ ತೋರುವ ವಾತಾವರಣದ ಬದಲಾಗಿ ಮನೆ ವ್ಯವಸ್ಥೆಯ ಮಾತುಕತೆಯಿಂದ ಹಿಡಿದು ಎಲ್ಲ ಚಟುವಟಿಕೆಗಳಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಶಿಸ್ತಿನ ಸಮಯದಲ್ಲಿ ನಿರ್ಧಾರ ತೆಗೆದು ಕೊಳ್ಳುವಲ್ಲಿ ಸಶಕ್ತರಾಗಿರಬೇಕು ಎನ್ನುವಂತೆ ಅವರನ್ನು ಬೆಳೆಸಿ. ಮೊಬೈಲ್, ಟಿ.ವಿ, ಜಾಲತಾಣಗಳಿಂದ ದೂರ ವಿಟ್ಟು ಅವರೊಂದಿಗೆ ಹೆಚ್ಚು ಸಮಯ ಕಳೆಯಿರಿ ಮತ್ತು ಕುಳಿತು ಮಾತನಾಡಿ. ಬೇರೆ ಮಕ್ಕಳೊಂದಿಗೆ ಹೋಲಿಸಿ ಫಲಿತಾಂಶಕ್ಕಾಗಿ ಆಮಿಷ ಒಡ್ಡುವುದು ಬಿಟ್ಟು, ವಾರಕ್ಕೆ ಒಂದಾದರೂ ನೀತಿಕಥೆ ಹೇಳುವ ಅಭ್ಯಾಸ ದಿಂದ ಮಕ್ಕಳನ್ನು ಗುಣವಂತರಾಗಿ ಬೆಳೆಸಿ ಎಂದು ಸಲಹೆ ನೀಡಿದರು.ಶಾಲೆಯಲ್ಲಿ ಶಿಕ್ಷಕರು ತಮ್ಮ ಮಕ್ಕಳಂತೆಯೇ ಕಂಡು ಜವಾಬ್ದಾರಿಯಿಂದ ವಿದ್ಯಾರ್ಥಿಗಳನ್ನು ತಿದ್ದಬೇಕು. ಮಕ್ಕಳಿಗೆ ಪಾಠ ಮಾತ್ರ ಕಲಿಸದೆ ಅವರಲ್ಲಿ ಇರುವ ಅದ್ಭುತ ಶಕ್ತಿ ಬಳಸಿ ಪ್ರೋತ್ಸಾಹ, ಬುದ್ಧಿ, ವಿವೇಕ, ಪ್ರೇರಣಾ ದಾಯಕ ವಿಷಯಗಳ ಕಲಿಕೆ ಮೂಲಕ ಅವರ ವ್ಯಕ್ತಿತ್ವ ರೂಪಿಸಿ. ಸೋಲು-ಗೆಲುವನ್ನು ಸಮಾನ ವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿ ಎಂದು ಕರೆ ನೀಡಿದರು. ಕಡೂರು ಅಕಾಡೆಮಿ ಆಫ್ ಎಜುಕೇಷನ್ ಅಧ್ಯಕ್ಷ ಬಿ.ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಭವಿಷ್ಯ ಉಜ್ವಲವಾಗಲು ನಡವಳಿಕೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಈ ಎಚ್ಚರ ದಿಂದ ಪೋಷಕರು ಮತ್ತು ಶಿಕ್ಷಕರು ಅವರನ್ನು ಉತ್ತಮ ಪ್ರಜೆಯಾಗಿಸಲು ಶ್ರಮ ಮತ್ತು ಕ್ರಮ ವಹಿಸಬೇಕು ಎಂದು ಕಿವಿಮಾತು ಹೇಳಿದರು. ಶಾಲೆ ಪ್ರಾಂಶುಪಾಲ ಗಣೇಶ್ ಸಾಲಿಯಾನ ವಾರ್ಷಿಕ ವರದಿ ವಾಚಿಸಿದರೆ, ನಿರ್ದೇಶಕರಾದ ಡಾ.ಎಸ್. ವಿ.ದೀಪಕ್, ಜಿ.ಎಸ್.ಗುರುಪ್ರಸಾದ್, ಡಿ.ನಾರಾಯಣ ಸ್ವಾಮಿ ಪ್ರತಿಭಾ ಪುರಸ್ಕಾರ ಮತ್ತು 2024-25ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಗಳಿಗೆ ಪ್ರಶಸ್ತಿ,ಶಾಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ನೆನಪಿನ ಕಾಣಿಕೆ ವಿತರಿಸಿದರು.ಸಾಂಸ್ಕೃತಿಕ ಕಾರ‍್ಯಕ್ರಮದಲ್ಲಿ ಮಕ್ಕಳು ಯೋಗ, ಕರಾಟೆ, ಬಂಜಾರ ನೃತ್ಯ,ವೀರ ಸೈನಿಕರಿಗೆ ನಮನ, ಮ್ಯಾಕ್ಬೆತ್ ನಾಟಕದ ದೃಶ್ಯ, ಭಕ್ತ ಪ್ರಹ್ಲಾದ, ರಕ್ತ ಬೀಜಾಸುರ, ಹುಲಿಕುಣಿತ ಮೊದಲಾದ ಸಾಂಸ್ಕೃತಿಕ ಪ್ರದರ್ಶನ ನಡೆಯಿತು. ಶಾಲೆ ಆಡಳಿತ ವಿಭಾಗದ ಮಾಲಾ, ಮಂಜುನಾಥ್ ಮತ್ತು ಪೋಷಕರು, ವಿದ್ಯಾರ್ಥಿಗಳು, ಶಾಲೆಯ ಅಧ್ಯಾಪಕ, ಕಾರ್ಯನಿರ್ವಾಹಕ ಸಿಬ್ಬಂದಿ ಇದ್ದರು. 22ಕೆಕೆಡಿಯು3.
ಕಡೂರು ಅಕಾಡೆಮಿ ಆಫ್ ಎಜುಕೇಷನ್ ಸಂಸ್ಥೆ ಹೈವೇ ಇಂಗ್ಲಿಷ್ ಸ್ಕೂಲ್‌ನಲ್ಲಿ ನಡೆದ ಹೈವೇ ಸ್ಪೆಕ್ಟ್ರಮ್ ಶಾಲಾ ವಾರ್ಷಿಕೋತ್ಸವವನ್ನು ಕಡೂರು ಬಿಇಒ ಎಂ.ಎಚ್.ತಿಮ್ಮಯ್ಯ ಉದ್ಘಾಟಿಸಿದರು.