ಕನ್ನಡಪ್ರಭ ವಾರ್ತೆ, ತುಮಕೂರುಗ್ರಾಮೀಣ ಬಡಜನತೆಯ ದುಡಿಯುವ ಹಕ್ಕನ್ನು ಕಸಿಯುವ ವಿಬಿ ಜಿ ರಾಮ್ ಜಿ ಮಸೂದೆ-2025 ಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿರುವುದನ್ನು ವಿರೋಧಿಸಿ ಹಾಗೂ ಈ ಮಸೂದೆಯನ್ನು ಕೂಡಲೇ ವಾಪಸ್ ಪಡೆಯುವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ನಗರದ ಅಶೋಕ ರಸ್ತೆಯಲ್ಲಿರುವ ಬಿ.ಎಸ್.ಎನ್.ಎಲ್. ಕಚೇರಿ ಮುಂದೆ ಜಮಾಯಿಸಿದ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಮನರೇಗಾ ಹೆಸರನ್ನು ಸಂಪೂರ್ಣವಾಗಿ ಬದಲಿಸಿ ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ವಿಬಿ ಜಿ ರಾಮ್ ಜಿ ಮಸೂದೆಯನ್ನು ಕೂಡಲೇ ವಾಪಸ್ ಪಡೆದು ದೇಶದ ಸುಮಾರು 12 ಕೋಟಿ ನರೇಗಾ ಕಾರ್ಮಿಕರ ಉದ್ಯೋಗವನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ದೇಶದ ಬಡತನ ನಿರ್ಮೂಲನೆ ಮಾಡಲು ಅಂದಿನ ಎಡಪಕ್ಷಗಳು ಹಾಗೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಗ್ರಾಮೀಣ ಜನರಿಗೆ ಉದ್ಯೋಗ ನೀಡುವ ಯೋಜನೆಯನ್ನು ಪ್ರಾರಂಭ ಮಾಡಿತ್ತು. ಇದರಿಂದ ಭಾರತದಲ್ಲಿ ಬಡತನ ನಿರ್ಮೂಲನೆ ಮಾಡಲು ಅಲ್ಪಸ್ವಲ್ಪ ಪ್ರಮಾಣದಲ್ಲಿ ಸಾಧ್ಯವಾಗಿದೆ ಎಂದರು. ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಮನರೇಗಾ ಹೆಸರು ಬದಲಿಸಲು ತೀವ್ರ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರೂ ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಮಸೂದೆಗೆ ರಾಷ್ಟ್ರಪತಿಗಳಿಂದ ಅಂಕಿತ ಹಾಕಿಸಿ ದೇಶದ ೧೪೦ ಕೋಟಿ ಜನರಿಗೆ ದ್ರೋಹ ಮಾಡಿದೆ. ಈ ಮೂಲಕ ಸುಮಾರು 12 ಕೋಟಿ ಕಾರ್ಮಿಕರ ಬದುಕನ್ನು ಬೀದಿಗೆ ತಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.