ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಮಕ್ಕಳ ಕ್ರೀಡಾ ಪ್ರತಿಭೆ ಹೊರಹಾಕಲು ದೈಹಿಕ ಶಿಕ್ಷಣ ಶಿಕ್ಷಕರು ಆತ್ಮಸಾಕ್ಷಿಯಿಂದ ಕಾರ್ಯ ಮಾಡುವಂತೆ ಹಾಸನದ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ಶಂಭುನಾಥ ಮಹಾಸ್ವಾಮೀಜಿ ಕರೆ ನೀಡಿದ್ದಾರೆ.ಪಟ್ಟಣದ ಸಮುದಾಯ ಭವನದಲ್ಲಿ ಶ್ರೀ ಆದಿಚುಂಚನಗಿರಿ, ಮಹಾಸಂಸ್ಥಾನ ಮಠದ ವತಿಯಿಂದ, ಎರಡು ದಿನಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಿಗೆ ತರಬೇತಿ ಹಾಗೂ ಕಾರ್ಯಾಗಾರ ಕಾರ್ಯಕ್ರಮದ ಉದ್ಘಾಟನೆ ಮಾಡಿ, ಸಾನ್ನಿಧ್ಯ ವಹಿಸಿ ಆಶೀರ್ವಾದ ನೀಡಿದರು. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ದೂರ ದೃಷ್ಟಿಯಿಂದ ಹಾಗೂ ಶಿಕ್ಷಣ ಹಾಗೂ ಕ್ರೀಡೆಗೆ ಮಕ್ಕಳನ್ನು ತೊಡಗಿಸಲು ಆದಿಚುಂಚನಗಿರಿ ಸಂಸ್ಥಾನದ ವತಿಯಿಂದ ರಾಜ್ಯಮಟ್ಟದ ಆದಿಚುಂಚನಗಿರಿ ಕ್ರೀಡಾಕೂಟ ನಡೆಯುತ್ತಿದೆ, ಈ ನಿಟ್ಟಿನಲ್ಲಿ, ದೈಹಿಕ ಶಿಕ್ಷಣ ಶಿಕ್ಷಕರಲ್ಲಿ, ಮತ್ತಷ್ಟು ಚೈತನ್ಯ ತುಂಬಲು, ತರಬೇತಿ ನಡೆಯುತ್ತಿದೆ ಎಂದರು.
ಸಮಯ ಪ್ರಜ್ಞೆ ಮೂಲಕ ಮಕ್ಕಳನ್ನು ಜಾಗೃತಿಗೊಳಿಸುವ ಕಾರ್ಯವಾಗಬೇಕು. ರಾಷ್ಟ್ರಮಟ್ಟದ ಕ್ರೀಡೆಗೆ ಮಕ್ಕಳು ಸಜ್ಜಾಗಬೇಕು, ಮಕ್ಕಳಲ್ಲಿ ಯಾವುದೇ ರೀತಿಯ ಸೌಲಭ್ಯದ ಕೊರತೆಯಾಗಬಾರದು, ಯುವ ಕ್ರೀಡಾಪಟುಗಳು ಹೊರಹೊಮ್ಮಲು ಪ್ರೋತ್ಸಾಹ ದೊರೆಯಬೇಕು. ಶಿಸ್ತು, ಸಂಯಮ, ಮಾನಸಿಕ ಸದೃಢತೆಗಾಗಿ ದೈಹಿಕ ಶಿಕ್ಷಣದ ಅವಶ್ಯಕತೆ ಇದೆ,. ಉತ್ತಮ ಕ್ರೀಡಾಪಟುಗಳಾಗಿ ಹೊರ ಹೊಮ್ಮಿದಾಗ ಉದ್ಯೋಗದಲ್ಲೂ ಮೀಸಲಾತಿ ದೊರೆಯುತ್ತದೆ. ಮಾತೃ ವಾತ್ಸಲ್ಯದಂತೆ ದೈಹಿಕ ಶಿಕ್ಷಣ ಶಿಕ್ಷಕರು ಕಾರ್ಯ ಮಾಡಿ, ಕ್ರೀಡಾ ಕ್ಷೇತ್ರದಲ್ಲಿ ಮಕ್ಕಳು ಬೆಳಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ನಿಮ್ಮ ಪಾತ್ರ ಹೆಚ್ಚಾಗಿದೆ ಎಂದರು.ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿಗಳಾದ ಶ್ರೀ ಮಂಗಳನಾಥ ಸ್ವಾಮೀಜಿ, ಅನುಗ್ರಹ ಸಂದೇಶ ನೀಡಿ, ಶಾಲಾ ಕಾಲೇಜುಗಳಲ್ಲಿ ದಕ್ಷತೆ ಸೃಷ್ಟಿಗೆ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಅತಿ ಮುಖ್ಯವಾಗುತ್ತದೆ, ಶಿಕ್ಷಣದ ಸಂಗಡ ಕ್ರೀಡೆಯಲ್ಲೂ ಮಕ್ಕಳ ಭವಿಷ್ಯ ಅಡಗಿದೆ. ಮಕ್ಕಳ ಹಾಗೂ ಪೋಷಕರ ಮನಸ್ಸನ್ನು ಗೆದ್ದು ಕ್ರೀಡಾ ಚಟುವಟಿಕೆಗಳಿಗೆ ಮಕ್ಕಳನ್ನು ಸಕ್ರಿಯವಾಗಿ ತೊಡಗಿಸಬೇಕು. ಆಸಕ್ತಿ ಮೂಡಿಸುವ ಕಾರ್ಯವಾಗಬೇಕು, ಭಾರತೀಯ ಸಂಸ್ಕೃತಿಯ ಮಾನವೀಯ ಮೌಲ್ಯಗಳನ್ನು ಉತ್ತೇಜಿಸಬೇಕು ಎಂದು ಮಾರ್ಗದರ್ಶನ ನೀಡಿದರು.ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಆಡಳಿತ ಅಧಿಕಾರಿ ಡಾ. ಎ ಟಿ ಶಿವರಾಮು, ಪ್ರಾಸ್ತಾವಿಕ ನುಡಿಗಳನ್ನಾಡಿ ದೈಹಿಕ ಶಿಕ್ಷಣ ಶಿಕ್ಷಕರಿಗೆ ತರಬೇತಿ ಹಾಗೂ ಕಾರ್ಯದ ಮಹತ್ವವನ್ನ ವಿವರಿಸಿ, ಮಕ್ಕಳ ಮೂಲಕ ಕ್ರೀಡಾ ಸಾಧನೆ ಆರೋಗ್ಯವಂತ ಸಮಾಜ ನಿರ್ಮಾಣದ ಧ್ಯೇಯೋದ್ದೇಶ ಮಹಾ ಸಂಸ್ಥಾನ ಮಠದ್ದಾಗಿದೆ. ಪ್ರತಿವರ್ಷ ಶ್ರೀಮಠದ ವತಿಯಿಂದ ಒಂದು ಕೋಟಿ ರು. ಹಣವನ್ನು ಕ್ರೀಡಾ ಪ್ರೋತ್ಸಾಹಕ್ಕೆ ವಿನಿಯೋಗ ಮಾಡಲಾಗುತ್ತಿದೆ ಎಂದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಆಡಳಿತ ಅಧಿಕಾರಿ ಡಾ.ಎನ್ ಶಿವರಾಮರೆಡ್ಡಿ, ಯೋಗ ಗುರು ಪ್ರಸಾದ್ ಎಸ್. ಉಪಸ್ಥಿತರಿದ್ದರು. ಕ್ರೀಡೆಯ ಸಂಪನ್ಮೂಲ ವ್ಯಕ್ತಿಗಳಾದ, ಹಾಸನದ ವಾಲಿಬಾಲ್ ತರಬೇತುದಾರ ರಮೇಶ್, ಬೆಂಗ ಳೂರಿನ ಆರ್ ವಿ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ವಿಶ್ವನಾಥ್, ಯೋಗ ಗುರು ಪ್ರಸಾದ್, ತುಮಕೂರು ಕ್ರೀಡಾ ಪ್ರಾಧಿಕಾರದ, ಅಂತರಾಷ್ಟ್ರೀಯ ಕಬ್ಬಡಿ ತರಬೇತುದಾರ ಮೊಹಮ್ಮದ್ ಇಸ್ಮಾಯಿಲ್ ಲತೀಫ್, ಅಥ್ಲೆಟಿಕ್ಸ್ ಮುಖ್ಯ ತರಬೇತಿದಾರ ಡಾ. ವಸಂತ ಕುಮಾರ್, ವಾಲಿಬಾಲ್, ಹ್ಯಾಂಡ್ ಬಾಲ್, ಕಬ್ಬಡಿ ಆಟ, ಓಟದ ಸ್ಪರ್ಧೆ ಹಾಗೂ ಯೋಗಾಸನದ ಬಗ್ಗೆ, ದೈಹಿಕ ಶಿಕ್ಷಣ ಶಿಕ್ಷಕರಿಗೆ ತರಬೇತಿ ಮಾರ್ಗದರ್ಶನ ನೀಡಲಾಯಿತು.
ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸಿ.ಸಿ ಕುಮಾರ್, ಆದಿಚುಂಚನಗಿರಿ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಭಾಸ್ಕರ್ ಪಾಲ್ಗೊಂಡಿದ್ದರು.