ಸಾಹಿತ್ಯ ಉಳಿವಿನಲ್ಲಿ ಕವಿಗಳ ಪಾತ್ರ ಮಹತ್ವದ್ದು: ಡಾ.ಮಂತರ್‌ ಗೌಡ

KannadaprabhaNewsNetwork |  
Published : Dec 18, 2023, 02:00 AM IST
ಹುತ್ತರಿ ಕವಿಗೋಷ್ಠಿ ಉದ್ಘಾಟನೆ ಸಂದರ್ಭ | Kannada Prabha

ಸಾರಾಂಶ

ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಹುತ್ತರಿ ಕವಿಗೋಷ್ಠಿ, ವಿಚಾರಗೋಷ್ಠಿ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕುಶಾಲನಗರ

ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಹುತ್ತರಿ ಕವಿಗೋಷ್ಠಿ, ವಿಚಾರಗೋಷ್ಠಿ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ ಕೂಡ್ಲೂರು ಗ್ರಾಮದಲ್ಲಿ ನಡೆಯಿತು.

ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಯ ಬೆಳವಣಿಗೆ, ಸಾಹಿತ್ಯದ ಉಳಿವಿನಲ್ಲಿ ಕವಿಗಳ ಪಾತ್ರ ಮಹತ್ವದ್ದಾಗಿದೆ. ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಹಿನ್ನಲೆಯಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ‌ ಅತ್ಯಂತ ಮಹತ್ವಪೂರ್ಣವಾಗಿದೆ. ಸಾಹಿತಿಗಳ ಕೃತಿಗಳನ್ನು ಇ-ಬುಕ್ ಮಾದರಿಯಲ್ಲಿ ಹೊರತರುವುದರಿಂದ ಮೊಬೈಲ್, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಲಭ್ಯವಾಗಲು ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಇಂತಹ ಪ್ರಯತ್ನಗಳು ನಡೆಯಲಿ. ಇದಕ್ಕೆ ಅಗತ್ಯ ಸಹಕಾರ ಒದಗಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.

ಕೊಡಗಿನ ಹಬ್ಬಗಳಲ್ಲಿ ಕೃಷಿಯೊಂದಿಗಿನ ಕಲೆಗಳು ಎಂಬ ವಿಷಯದ ಕುರಿತು ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ವಿಚಾರ ಮಂಡಿಸಿದರು. ಕೊಡಗಿನ ಸಂಸ್ಕೃತಿ, ಆಚಾರ ವಿಚಾರ, ಕಲೆಗಳ ಹಿಂದೆ ಇರುವ ವಿಜ್ಞಾನವನ್ನು ಪ್ರತಿಯೊಬ್ಬರೂ ಅರಿತುಕೊಳ್ಳುವ ಅಗತ್ಯವಿದೆ. ಕೊಡಗಿನ ಕೃಷಿಯಲ್ಲಿ ಜಾನಪದದ ಒಳನೋಟವಿದೆ. ಕೊಡಗಿನ ಪದ್ಧತಿ, ನಡೆ, ಕಲೆಗಳಲ್ಲಿ ಪ್ರಕೃತಿಯ ಪಾಠ ಅಡಗಿದೆ. ಕಲೆಯೆಂದರೆ ಕೇವಲ ಪ್ರದರ್ಶನಕ್ಕೆ ಸೀಮಿತವಾದುದಲ್ಲ. ಕೃಷಿ ಪದ್ಧತಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹಿರಿಯರು ವೈಜ್ಞಾನಿಕತೆ, ಪ್ರಕೃತಿಯ ಪಾಠ ಕಟ್ಟಿಕೊಟ್ಟಿದ್ದಾರೆ. ಅದನ್ನು ಇಂದು ಮರೆತಿರುವ ಕಾರಣ ದುರಂತಗಳು ಸಂಭವಿಸುತ್ತಿವೆ ಎಂದರು.

ಇಂದಿನ ಪೀಳಿಗೆಗೆ ಜಾನಪದ ಕಲೆ ಎಂದರೆ ಅದು ಬಡವರಿಗೆ, ಕಲಾವಿದರಿಗೆ ಮಾತ್ರ ಸೀಮಿತ ಎಂಬ ಭಾವನೆಯಿದೆ. ಈ ಮನಃಸ್ಥಿತಿ ಬದಲಾಗಬೇಕು. ಕೊಡಗಿನ ಜಾನಪದ, ಸಮಗ್ರ ಕಲೆಗಳ ಬಗ್ಗೆ ಅಧ್ಯಯನದ ಅಗತ್ಯವಿದೆ. ಅದರ ಸತ್ಯ, ಸತ್ವವನ್ನು ತಿಳಿಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸಾಹಿತ್ಯ ಅಕಾಡೆಮಿಗಳು, ಪುಸಕ್ತ ಪ್ರಾಧಿಕಾರಗಳಿಗೆ ಅರ್ಹ ಸಾಹಿತ್ಯಗಳ ನೇಮಕವಾಗಬೇಕಿದೆ. ಆಗ ಮಾತ್ರ ರಾಜಕೀಯ ರಹಿತವಾಗಿ ಒಂದಷ್ಟು ಅಧ್ಯಯನಗಳು ನಡೆಸಲು ಸಾಧ್ಯವಿದೆ ಎಂದರು. ಕನ್ನಡ ಸಿರಿ ಸ್ನೇಹ ಬಳಗದ ಲೋಕೇಶ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿ, ಇತಿಹಾಸವನ್ನು ಮುಂದಿನ ಪೀಳಿಗೆಗೆ ಪಸರಿಸುವ ಕಾರ್ಯ ಆಗಬೇಕಿದೆ. ಸುವರ್ಣ ಕರ್ನಾಟಕ ಸಂಭ್ರಮಕ್ಕೆ ಕಾರಣೀಭೂತರಾದವರನ್ನು ಸ್ಮರಿಸಿಕೊಳ್ಳುವ ಅಗತ್ಯವಿದೆ. ಈ ಸಂಬಂಧ ಅಭಿವೃದ್ಧಿ ಹಾದಿಯ ಇತಿಹಾಸದ ಗ್ರಂಥ ರಚಿಸಿ ಲೋಕಾರ್ಪಣೆಗೊಳಿಸಲಾಗುವುದು. ಸಾಹಿತಿಗಳು,‌ ಹಾಡುಗಾರರು, ಕೃತಿಕಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ‌ ಎಂದರು.

ಕಿಗ್ಗಾಲು ಗಿರೀಶ್ ರಚಿತ ನಗುವೆಂಬ ಟಾನಿಕ್ ಕೃತಿಯನ್ನು ವಿ.ಪಿ. ಶಶಿಧರ್ ಬಿಡುಗಡೆ ಮಾಡಿದರು. ಕಾಂಗ್ರೆಸ್ ಮುಖಂಡ, ಉದ್ಯಮಿ ಕೆ.ಕೆ.ಮಂಜುನಾಥ್ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು.

ಬಳಗದ ಪ್ರಮುಖರಾದ ಫಿಲಿಪ್ ವಾಸ್, ಸಿ.ಟಿ. ಸೋಮಶೇಖರ್, ಸಾಹಿತಿಗಳಾದ ಕಿಗ್ಗಾಲು ಗಿರೀಶ್, ಮಾಲಾದೇವಿ, ಜಗದೀಶ್ ಜೋಡುಬೀಟಿ, ಸಂಗೀತ ರವಿರಾಜ್, ರಾಣಿ ರವೀಂದ್ರ, ಟೋಮಿ‌ ಥಾಮಸ್, ಕುಡೆಕಲ್ ಸಂತೋಷ್, ಎಂ.ಡಿ. ರಂಗಸ್ವಾಮಿ ಮತ್ತಿತರರಿದ್ದರು.

ಮಡಿಕೇರಿ ಮಹಿಳಾ ಕಾಲೇಜು ಪ್ರಾಧ್ಯಾಪಕಿ ಕೋರನ‌ ಸರಸ್ವತಿ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಕವಿಗಳು ತಮ್ಮ ಕವನ ವಾಚಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ