ಗದಗ: ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಪಾತ್ರ ಮಹತ್ವದ್ದಾಗಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಟಿ.ಫೈಜುದ್ದೀನ್ ಹೇಳಿದರು.
ಇಲಾಖೆಯಲ್ಲಿ ಪ್ರತಿ ದಿನ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಎಲ್ಲ ನೌಕರರು ಮಾನಸಿಕ ಹಾಗೂ ದೈಹಿಕ ಸದೃಢವಾಗಿರುವುದು ಅವಶ್ಯಕವಾಗಿದೆ. ಅವರು ತಮ್ಮ ಸೇವಾ ನಿರತ ದಿನಗಳನ್ನು ಸ್ಮರಿಸಿಕೊಳ್ಳುತ್ತಾ ಪೊಲೀಸ್ ಇಲಾಖೆ ಹಾಗೂ ಮೇಲಾಧಿಕಾರಿಗಳಿಗೆ ಇನ್ನೂ ಹೆಚ್ಚಿನ ಗೌರವ ತರುವ ಕಾರ್ಯ ಮಾಡಬೇಕೆಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾತನಾಡಿ, ಹಗಲು-ರಾತ್ರಿ ಎನ್ನದೇ ಕಾನೂನು ಸುವ್ಯವಸ್ಥೆ ಹಾಗೂ ಶಾಂತತೆ ಕಾಪಾಡಲು ಪೊಲೀಸ್ ಸಿಬ್ಬಂದಿ ಸದಾ ಕಾರ್ಯನಿರತರಾಗಿರುತ್ತಾರೆ. 1965 ರಿಂದ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಗುತ್ತಿದ್ದು, ಪ್ರಸಕ್ತ ವರ್ಷವೂ ಏ.2 ರಂದು ರಾಜ್ಯದ ಎಲ್ಲ ಪೊಲೀಸ್ ಘಟಕಗಳಲ್ಲಿ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ. ಇಲಾಖೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾದ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ಈ ಸಮಯದಲ್ಲಿ ಸ್ಮರಿಸಿಕೊಳ್ಳಲು ಹಾಗೂ ನಿವೃತ್ತಿ ನಂತರ ಅವರಿಗೆ ಉತ್ತೇಜನ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಪ್ರತಿ ವರ್ಷ ಪೊಲೀಸ್ ಧ್ವಜ ದಿನಾಚರಣೆ ಸಂದರ್ಭದಲ್ಲಿ ಪೊಲೀಸ್ ಧ್ವಜ ಮಾರಾಟ ಮಾಡಿ ಬಂದ ಹಣದಲ್ಲಿ ಶೇ. 50% ರಷ್ಟು ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿಗೆ ಮತ್ತು ಶೇ. 50% ರಷ್ಟು ಹಣವನ್ನು ಕೇಂದ್ರ ನಿವೃತ್ತ ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಿ ಈ ನಿಧಿಯನ್ನು ಸೇವೆಯಲ್ಲಿರುವ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ವೈದ್ಯಕೀಯ ಚಿಕಿತ್ಸಾ ವೆಚ್ಚ ಮಂಜೂರಿಸುವ ಸಲುವಾಗಿ ವಿನಿಯೋಗಿಸಲಾಗುತ್ತದೆ.
ಪ್ರಸಕ್ತ ವರ್ಷ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮ ನಿಧಿಯಿಂದ 39 ಜನ ನಿವೃತ್ತ ಅಧಿಕಾರಿ, ಸಿಬ್ಬಂದಿಯವರಿಗೆ 127950 ಗಳ ವೈದ್ಯಕೀಯ ಧನ ಸಹಾಯ ಪಾವತಿಸಲಾಗಿದೆ ಮತ್ತು ಮರಣ ಹೊಂದಿದ 22 ಜನ ನಿವೃತ್ತ ಪೊಲೀಸ್ ಅಧಿಕಾರಿಗಳ ಅಂತ್ಯಸಂಸ್ಕಾರಕ್ಕೆ ₹220000 ಧನ ಸಹಾಯ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸೇವಾ ನಿವೃತ್ತರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಎಂ.ಬಿ. ಸಂಕದ, ಡಿಎಸ್ಪಿ ಡಿ.ಬಿ. ಇನಾಮದಾರ, ಸೇರಿದಂತೆ ಸಿಬ್ಬಂದಿ,ಗಣ್ಯರು ಹಾಜರಿದ್ದರು.ಡಿಎಸ್ ಪಿ ಡಿ.ಎಸ್ ಧನಗರ ಸ್ವಾಗತಿಸಿದರು. ಡಿಎಸ್‍ಪಿ ಪ್ರಭುಗೌಡ ಕಿರೆದಳ್ಳಿ ವಂದಿಸಿದರು. ಎಂ.ಟಿ. ಭಟ್ ನಿರೂಪಿಸಿದರು.