ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿರಿಯ ಶಿಲ್ಪಿ ವಿಶ್ವನಾಥ್ ಅವರ ಏಕವ್ಯಕ್ತಿ ಶಿಲ್ಪಕಲಾ ಕೃತಿಗಳ ಪ್ರದರ್ಶನ "ಕಲ್ಲರಳಿ ಹೂವಾಗಿ " ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಒಬ್ಬ ಶಿಲ್ಪಿ ಕೇವಲ ಕಲ್ಲು ಕೆತ್ತುವವನಷ್ಟೇ ಅಲ್ಲ, ಆತ ಅಚ್ಚುಕಟ್ಟಾದ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಾನೆ. ಹೀಗಾಗಿ ಇಂತಹ ಪ್ರತಿಭಾವಂತ ಶಿಲ್ಪಿಗಳ ನೆರವಿಗೆ ಸರ್ಕಾರಗಳು ರಾಜಾಶ್ರಯದೋಪಾದಿಯಲ್ಲಿ ಧಾವಿಸಿ ಸೂಕ್ತ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.
ಅಯೋಧ್ಯೆಯ ರಾಮಲಲ್ಲಾ ಮೂರ್ತಿ ನಿರ್ಮಾತೃ ಹಾಗೂ ಹಿರಿಯ ಶಿಲ್ಪಿ ಗಣೇಶ್ ಎಲ್. ಭಟ್ ಮಾತನಾಡಿ, ಪ್ರಾಚೀನ ಕಾಲದ ದೇವಾಲಯಗಳು ಕೇವಲ ಪೂಜಾ ಸ್ಥಳಗಳಾಗಿರದೆ ವಿಶ್ವವಿದ್ಯಾನಿಲಯಗಳ ಜೊತೆಗೆ ಪರಿಣಾಮಕಾರಿ ಮಾಧ್ಯಮಗಳಾಗಿಯೂ ಕಾರ್ಯನಿರ್ವಹಿಸಿದ್ದವು ಎಂದು ಹೇಳಿದರು. ಇಂದು ನಮ್ಮ ದೈನಂದಿನ ಜೀವನದಲ್ಲಿ ಹೆಚ್ಚು ಆಚರಣೆಯಲ್ಲಿರುವ ಸಂಸ್ಕೃತಿ ಎಂದರೆ ಅದು ಸನಾತನ ಸಂಸ್ಕೃತಿಯಾಗಿದ್ದು, ಶಿಲ್ಪಕಲೆಗಳು ಆ ಕ್ಷೇತ್ರಗಳ ಶ್ರೀಮಂತಿಕೆಯನ್ನು ಇಂದಿಗೂ ಜಗತ್ತಿಗೆ ಪರಿಚಯಿಸಲು ತಲೆಎತ್ತಿ ನಿಂತಿವೆ. ಇಂಗ್ಲಿಷ್ ಭಾಷೆಯೇ ರಾಷ್ಟ್ರಭಾಷೆಯಾಗಿ ಹೊರಹೊಮ್ಮಿದೆ ಎಂಬುದು ತಪ್ಪು ಕಲ್ಪನೆ, ಸಂಸ್ಕೃತ ಭಾಷೆ ಎಲ್ಲ ಭಾರತೀಯ ಭಾಷೆಗಳಲ್ಲಿ ಬೆರೆತುಹೋಗಿದೆ. ಅದನ್ನು ರಾಷ್ಟ್ರಭಾಷೆ ಎಂದು ಹೆಮ್ಮೆಯಿಂದ ಘೋಷಿಸಬಹುದು. ಆದರೆ ಅದನ್ನು ಹೇಳುವ ಧೈರ್ಯ ನಮ್ಮಲ್ಲಿ ಇಲ್ಲದಿರುವುದು ನಿಜಕ್ಕೂ ದುರ್ದೈವದ ಸಂಗತಿ ಎಂದು ವಿಷಾದಿಸಿದರು.ನಾಡಿಗೆ ನಮ್ಮ ರಾಜ್ಯದ ಕಲೆ ಹಾಗೂ ಶಿಲ್ಪಕಲೆಯ ಕೊಡುಗೆ ಅಪಾರವಾಗಿದ್ದು, ಆ ಕಲೆಗಳನ್ನು ರೂಪಿಸಿದ ರಾಜರ ಮತ್ತು ಶಿಲ್ಪಿಗಳ ಕುರಿತು ಆಳವಾದ ಅಧ್ಯಯನಗಳು ನಡೆಯಬೇಕು. ಭಾರತದಲ್ಲಿ ನಮ್ಮ ಕರ್ನಾಟಕ ರಾಜ್ಯದ ಶಿಲ್ಪಕಲೆ ಅತ್ಯಂತ ಶ್ರೇಷ್ಠವಾದುದು. ಇತ್ತೀಚಿನ ದಿನಗಳಲ್ಲಿ ಇಂತಹ ಶ್ರೇಷ್ಠ ಕಲೆಗಳಿಗೆ ದೊರೆಯುತ್ತಿರುವ ಸಹಕಾರ ಮತ್ತು ಪ್ರೋತ್ಸಾಹ ಕಡಿಮೆಯಾಗುತ್ತಿರುವುದು ಕಳವಳಕಾರಿ ಎಂದು ಅವರು ಹೇಳಿದರು.ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷ ರಮೇಶ್ ಎಂ.ಸಿ. ಮಾತನಾಡಿ, ಕಲೆ ಎಂದರೆ ಕೇವಲ ಕಾಗದದ ಮೇಲೆ ಚಿತ್ರ ರಚಿಸುವುದು ಅಥವಾ ಶಿಲೆಗೆ ರೂಪ ನೀಡುವುದು ಮಾತ್ರವಲ್ಲ, ನಮ್ಮ ನಡೆ, ನುಡಿ ಮತ್ತು ಆಚಾರ ವಿಚಾರಗಳ ಅರಿತು ಪಾಲಿಸುವುದೇ ನಿಜವಾದ ಕಲೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಯುವುದು ಅತ್ಯಂತ ಪ್ರಮುಖ ಎಂದು ಹೇಳಿದರು. ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಲ್.ಪಿ. ರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಶ್ವವಿದ್ಯಾಲಯದ ಸಿಂಡಿಕೆಟ್ ಸದಸ್ಯರಾದ ಶಿವಣ್ಣ ಎಂ., ಹಿರಿಯ ಪ್ರಾಧ್ಯಾಪಕರಾದ ಡಾ. ಎಂ. ಕೊಟ್ರೇಶ್, ಬೆಂಗಳೂರಿನ ಅಭಿಯಂತರರಾದ ರಮೇಶ್ ಸಿ.ಕೆ., ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಮಿರ್ಜಿ ಇದ್ದರು. ಸಂಶೋಧನಾರ್ಥಿ ನಾಗೇಂದ್ರ ಎಸ್. ನಿರೂಪಿಸಿ ವಂದಿಸಿದರು.