ಹುಬ್ಬಳ್ಳಿ: ನೇರ ಹಾಗೂ ಸ್ಪಷ್ಟ ನಿಲುವಿನ ಚುಟುಕು ಸಾಹಿತ್ಯದಿಂದ ಮಾತ್ರ ಮುರಿದ ಮನಸುಗಳ ಕಟ್ಟುವ ಕಾರ್ಯ ಸಾಧ್ಯವೆಂದು ಮೂರುಸಾವಿರಮಠ ಡಾ. ಗುರುಸಿದ್ದ ರಾಜಯೋಗೀಂದ್ರ ಶ್ರೀಗಳು ಹೇಳಿದರು.
ಬಸವಾದಿ ಶರಣರು ಕಂಡ ಕನಸನ್ನು ಕಚುಸಾಪ ಅಕ್ಷರಶಃ ಪಾಲಿಸುತ್ತಿದ್ದು ಕಳೆದ ಮೂರುವರ್ಷಗಳಲ್ಲಿ ಅದು ಅಂತರ್‌ರಾಜ್ಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಿದೆ ಎಂದರು.
ಹಿರಿಯ ಸಂಶೋಧಕರಾದ ಹನುಮಾಕ್ಷಿ ಗೋಗಿ ಅವರನ್ನು ಸರ್ವಾಧ್ಯಕ್ಷರಾಗಿ ಆಯ್ಕೆಮಾಡಿ ಸಮಸ್ತ ಮಹಿಳಾ ಕುಲವನ್ನು ಗೌರವಿಸಿದೆ. ಒಂದು ವಿಶ್ವವಿದ್ಯಾಲಯ ಮಾಡಬಹುದಾದ ಮಹತ್ಕಾರ್ಯವನ್ನು ಡಾ. ಗೋಗಿ ಮಾಡಿದ್ದಾರೆಂದು ಅಭಿನಂದಿಸಿದರು.ತಮಗೆ ಕಚುಸಾಪ ಪ್ರೀತಿ, ಗೌರವದಿಂದ ನೀಡಿದ "ಭಾವೈಕ್ಯತಾ ಮೂರ್ತಿ " ಪ್ರಶಸ್ತಿಯನ್ನು ಹೃದಯತುಂಬಿ ಸ್ವೀಕರಿಸುವುದಾಗಿ ತಿಳಿಸಿದರು.
ಶಿಕ್ಷಣ ತಜ್ಞ ಡಾ. ಆರ್.ಎಂ. ಕುಬೇರಪ್ಪ ಮಾತನಾಡಿ, ಸಾಹಿತ್ಯ ಜನಸಾಮಾನ್ಯರ ಧ್ವನಿಯಾಗಿ ಕಾರ್ಯ ಮಾಡುವ ಅಗತ್ಯವಿದೆ. ಅಂದು ಧಾರವಾಡದ ಗೆಳೆಯರ ಬಳಗ ಜನಮಾನಸದಲ್ಲಿ ಸಾಹಿತ್ಯದ ಬೇರು ನಾಟುವಂತೆ ಮಾಡಿತು. ಅದೇ ಹಾದಿಯಲ್ಲಿ ಕಚುಸಾಪ ದಿಟ್ಟ ಹೆಜ್ಜೆ ಇರಿಸಿ ಮುನ್ನಡೆಯುತ್ತಿದೆ ಎಂದರು.
ಗಣ್ಯರಾದ ಡಾ. ಶಾಂತಣ್ಣ ಕಡಿವಾಲ, ಡಾ. ಶರಣಪ್ಪ ಕೊಟಗಿ, ವಿ.ಜಿ. ಪಾಟೀಲ ಮಾತನಾಡಿದರು. ಇದೇ ಸಂದರ್ಭದಲ್ಲಿ "ಜಯಶ್ರೀ ಗೌರವ ಸಮ್ಮಾನ " ಕ್ಕೆ ಭಾಜನರಾದ ಮಂಜುಳಾ ಕುಲಕರ್ಣಿ, "ವಿಶಾಲಾಕ್ಷಿ ಪ್ರಶಸ್ತಿ ಗಳಿಸಿದ ಪ್ರಭಾವತಿ ಮುತ್ತಿನ ಅವರನ್ನು ಸರ್ವಾಧ್ಯಕ್ಷ ಡಾ. ಗೋಗಿ ದಂಪತಿಯನ್ನು "ಚುಟುಕು ಚಿನ್ಮಯಿ " ಪ್ರಶಸ್ತಿ ನೀಡಿ ಗೌರವಿಸಿತು.
ಜನಪದ ಹಿರಿಮೆ ಮೆರೆದ ತಂಡಗಳು: ಕಾರ್ಯಕ್ರಮದಲ್ಲಿ ಪಂಚಮಿ ಹಾಡಿನ ಸ್ಫರ್ಧೆ ಜರುಗಿತು. ಏಳು ತಂಡಗಳು ಪಾಲ್ಗೊಂಡು ಜನಪದ ಹಿರಿಮೆ ಮೆರೆದವು. ಡಾ. ವೆಂಕಟೇಶ್ ಕುಲಕರ್ಣಿ, ರೇಖಾ ಸುದೇಶರಾವ್, ಎಸ್.ಐ. ನೇಕಾರ ನಿರ್ಣಾಯಕರಾಗಿದ್ದರು. ನಂತರ ಪದ್ಮಜಾ ಉಮರ್ಜಿ ಅಧ್ಯಕ್ಷತೆಯಲ್ಲಿ ಹಿರಿಯ ಚಿಂತಕಿ ರೂಪಾ ಜೋಶಿ, ಮಹಿಳಾ ಶೋಷಣೆ- ಜಾಗೃತಿ, ಶಿರಸಿಯ ದಾಕ್ಷಾಯಿಣಿ ಪಿ.ಸಿ. ಮಹಿಳಾ ಆಂದೋಲನ, ಡಾ. ರತ್ನಾ ಐರಸಂಗ ಕನ್ನಡ ಮಾಧ್ಯಮ ಹೊಣೆಗಾರಿಕೆ ಕುರಿತು ಉಪನ್ಯಾಸ ನೀಡಿದರು. ಉಡುಪಿಯ ಪ್ರೇಮಾ ಬಿರಾದಾರ ನಿರೂಪಿಸಿದರು.