ಚಿತ್ರದುರ್ಗ: ಸದೃಢ ಯುವ ಪೀಳಿಗೆ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ. ಯಾವುದೇ ಕೈಗಾರಿಕೆ, ನೀರಾವರಿ ಸೌಲಭ್ಯಗಳಿಲ್ಲದ ಬರದ ನಾಡು ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿಯಾಗಬೇಕಾದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಡಿಡಿಪಿಐ ರವಿಶಂಕರರೆಡ್ಡಿ ಶಿಕ್ಷಕರಿಗೆ ಕರೆ ನೀಡಿದರು.
ಶಿಕ್ಷಣ ಇಲಾಖೆ ದೊಡ್ಡದು. ಜೀವನದಲ್ಲಿ ಪಶ್ಚಾತಾಪ ಪಟ್ಟುಕೊಳ್ಳುವಂತ ಕೆಲಸ ಯಾರು ಮಾಡಬಾರದು. ಸಕಾರಾತ್ಮಕ ಚಿಂತನೆಯಿದ್ದರೆ ಜೀವನದಲ್ಲಿ ಯಶಸ್ಸು ಕಾಣಬಹುದು. ಅಬ್ದುಲ್ ಕಲಾಂರಂತ ವ್ಯಕ್ತಿಗಳನ್ನು ಸೃಷ್ಟಿಸುವ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ. ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ರೂಢಿಸಿ ಎಂದು ಕಿವಿಮಾತು ಹೇಳಿದರು.
ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಸ್ನೇಹಜೀವಿ, ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ ರೆಡ್ಡಿ ಅವರಲ್ಲಿ ಎಲ್ಲರನ್ನು ಸಮಾನವಾಗಿ ಕಾಣುವ ಗುಣವಿರುವುದರಿಂದ ಎಲ್ಲರ ಮನಸ್ಸು ಮುಟ್ಟಿದ್ದಾರೆ. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕೆಲಸ ಮಾಡಿದ್ದಾರೆ. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಸಿದ್ದಪಡಿಸುವ ಕೆಲಸ ಶಿಕ್ಷಕರುಗಳಿಂದ ಮಾತ್ರ ಸಾಧ್ಯ ಎಂದರು.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಂತೇಶ್ ಮಾತನಾಡಿ ಎಸ್ಎಸ್ಎಲ್.ಸಿ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಯನ್ನು ಒಂದನೆ ಸ್ಥಾನಕ್ಕೆ ತರುವಲ್ಲಿ ಶ್ರಮಿಸಿ ರಾಜ್ಯದಲ್ಲಿಯೇ ಜಿಲ್ಲೆಯ ಹೆಸರನ್ನು ಮೊಳಗಿಸಿರುವ ಡಿಡಿಪಿಐ ಕೆ.ರವಿಶಂಕರ್‍ರೆಡ್ಡಿ ಶಿಕ್ಷಕರುಗಳಲ್ಲಿ ಶಿಕ್ಷಕರಾಗಿ ಮಕ್ಕಳಲ್ಲಿ ಮಕ್ಕಳಾಗಿ ಬೆರೆತಿದ್ದಾರೆ. ಶಿಕ್ಷಕರುಗಳ ಸಂಘಟನೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಪದವೀಧರ ಶಿಕ್ಷಕರುಗಳಿಗೆ ಬಡ್ತಿ, ಎನ್ ಪಿಎಸ್, ಸಹ ಶಿಕ್ಷಕರುಗಳಿಂದ ಮುಖ್ಯ ಶಿಕ್ಷಕರಿಗೆ ಬಡ್ತಿ, ಏಳನೆ ವೇತನ ಆಯೋಗ, ಉರ್ದು ಶಾಲೆಗಳಲ್ಲಿನ ಸಮಸ್ಯೆ ಇವುಗಳಿಗೆ ಪರಿಹಾರ ಕಂಡುಕೊಳ್ಳಲು ನಮ್ಮ ಹೋರಾಟ ನಿರಂತರವಾಗಿರುತ್ತದೆ. ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಶಿಕ್ಷಕರುಗಳು ಒತ್ತು ಕೊಡಬೇಕೆಂದು ತಿಳಿಸಿದರು.
ತಾಜಿರ್ ಭಾಷ, ಪರ್ವಿನ್‍ತಾಜ್, ಎಂ.ಎಸ್.ಲತ, ಉಮರ್ ಭಾಷ, ಕರ್ನಾಟಕ ರಾಜ್ಯ ಉರ್ದು ಟೀಚರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.