- ಹುಬ್ಬಳ್ಳಿಯ ಅನಂತ ಪ್ರೇರಣಾ ಕೇಂದ್ರದಲ್ಲಿ ಗ್ರಾಮ ಚೇತನ ಕಾರ್ಯಕ್ರಮ
- ಚಿಂತಕ ಡಾ.ಪ್ರಕಾಶ ಭಟ್ ಅಭಿಮತಕನ್ನಡಪ್ರಭ ವಾರ್ತೆ ಹುಬ್ಬಳ್ಳಿಗ್ರಾಮಗಳ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದ್ದು, ಪ್ರಾಮಾಣಿಕತೆ, ಸಂಘಟನೆ, ಸಹಕಾರ ಮತ್ತು ಧೈರ್ಯದಿಂದ ಮಹಿಳೆಯರು ಮುನ್ನುಗ್ಗಿದರೆ ದೇಶದ ಚಿತ್ರಣವೇ ಬದಲಾಗುತ್ತದೆ ಎಂದು ಹಿರಿಯ ಚಿಂತಕ ಡಾ.ಪ್ರಕಾಶ ಭಟ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆ, ಅನಂತಕುಮಾರ ಪ್ರತಿಷ್ಠಾನ ಇಲ್ಲಿನ ಅನಂತ ಪ್ರೇರಣಾ ಕೇಂದ್ರದಲ್ಲಿ ಶನಿವಾರ ಇಡೀ ದಿನ ಆಯೋಜಿಸಿದ್ದ ಗ್ರಾಮ ಚೇತನ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಮಹಿಳೆಯರು ಹಿಂಜರಿಕೆ, ಕೀಳರಿಮೆಯಿಂದ ಹೊರಬಂದು ತಮ್ಮ ಗ್ರಾಮಗಳ ಅಭಿವೃದ್ಧಿಯ ಹೊಣೆಗಾರಿಕೆ ವಹಿಸಿಕೊಳ್ಳಬೇಕು ಎಂದು ಕರೆನೀಡಿದರು.ಭಾರತೀಯ ಸಮಾಜದಲ್ಲಿ ಪುರುಷ ಮತ್ತು ಮಹಿಳೆಯರ ಕರ್ತವ್ಯದಲ್ಲಿ ಲಕ್ಷ್ಮಣ ರೇಖೆ ಎಳೆಯಲಾಗಿದೆ. ಹಾಗಾಗಿ ಮಹಿಳೆಯರು ಗೂಟಕ್ಕೆ ಕಟ್ಟಿದ ಆನೆಯಂತೆ ತಮ್ಮ ನೈಜ ಸಾಮರ್ಥ್ಯವನ್ನು ಅರಿಯದೇ ಗ್ರಾಮಾಭಿವೃದ್ಧಿಯ ನಾಯಕತ್ವ ವಹಿಸಿಕೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಊರ ಉಸಾಬರಿ, ಪ್ರಮುಖ ನಿರ್ಧಾರ ಪುರುಷರ ಕೆಲಸ ಎಂದು ಭಾವಿಸಿದ್ದರಿಂದ ಇಂದು ಹಳ್ಳಿಗಳು ಸಮಸ್ಯೆಗಳ ಗೂಡಾಗಿವೆ. ಗ್ರಾಮ ಪಂಚಾಯತಿಗಳು ಬಂದರೂ ಹಳ್ಳಿ ಬದುಕಿನಲ್ಲಿ ಯಾವುದೇ ಬದಲಾವಣೆ ಆಗುತ್ತಿಲ್ಲ ಎಂದು ಅವರು ವಿಷಾಧಿಸಿದರು.
ಅನಾಥ, ಅಶಕ್ತರ ರಕ್ಷಕಿ:ಪ್ರತಿ ಮಹಿಳೆಯಲ್ಲಿ ತಾಯಿಗುಣವಿದೆ. ತನ್ನ ಮಕ್ಕಳೊಂದಿಗೆ ಅನಾಥ, ಅಶಕ್ತ ಮಕ್ಕಳಿಗೂ ಮಾತೃಪ್ರೇಮ ಎರೆಯುತ್ತಾಳೆ. ಇಂಥ ಮಹಿಳೆ ಎಚ್ಚೆತ್ತುಕೊಂಡರೆ, ನನ್ನ ಗ್ರಾಮ ಎನ್ನುವ ಹೆಮ್ಮೆಯಿಂದ ಕ್ರೀಯಾಶೀಲಳಾದರೆ ಇಡೀ ಗ್ರಾಮ, ಕೃಷಿ ಬದುಕು, ಭಾರತೀಯ ಪರಂಪರೆ, ಸಂಸ್ಕೃತಿ ರಕ್ಷಣೆಯಾಗಿ ಸುಂದರ ನಾಡು ನಿರ್ಮಾಣವಾಗುತ್ತದೆ ಎಂದು ಡಾ.ಪ್ರಕಾಶ ಭಟ್ ಅಭಿಪ್ರಾಯಪಟ್ಟರು.
ಕಾರ್ಯಾಗಾರ ಉದ್ಘಾಟಿಸಿದ ಲಕ್ಷ್ಮೀಕಾಂತ ಓಕ್, ದೇಶದ ಪ್ರತಿ ಗ್ರಾಮವೂ ಅಭಿವೃದ್ಧಿ ಹೊಂದಿ ಅಲ್ಲಿನ ಜನರ ಬದುಕು ಹಸನಾಗಬೇಕು ಎನ್ನುವುದು ದಿವಂಗತ ಅನಂತಕುಮಾರ ಅವರ ಕನಸಾಗಿತ್ತು. ಇಂದು ಈ ಸಂಸ್ಥೆಯ ಮೂಲಕ ಅವರ ಕನಸು ನನಸು ಮಾಡಲು ತೇಜಶ್ವಿನಿ ಅನಂತಕುಮಾರ ಅವರ ಮಾರ್ಗದರ್ಶನದಲ್ಲಿ ಗ್ರಾಮೀಣ ಮಹಿಳೆಯರಿಗಾಗಿ ಇಂಥ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ತರಬೇತಿ ಪಡೆದವರು ತಮ್ಮ ಊರುಗಳಲ್ಲಿ ಅದನ್ನು ಅನುಷ್ಠಾನಕ್ಕೆ ತರಬೇಕು ಎಂದು ಮನವಿ ಮಾಡಿದರು.ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಮಹಿಳೆ ಅಡುಗೆ ಮನೆಗೆ ಸೀಮಿತವಾಗದೇ ಹೊರ ಜಗತ್ತಿಗೂ ಕಾಲಿಡಬೇಕಿದೆ. ಸಂಘಟನೆ, ಜಾಗೃತಿಯ ಮೂಲಕ ನೈರ್ಮಲ್ಯತೆ, ಆರೋಗ್ಯ, ಕೃಷಿ, ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಜತೆಗೆ ಸಾರಾಯಿ, ತಂಬಾಕುಗಳನ್ನು ಊರಿನಿಂದ ಹೊರ ಹಾಕುವ ಪ್ರತಿಜ್ಞೆ ಮಾಡಬೇಕು ಎಂದು ಕರೆನೀಡಿದರು.
ಅನಂತ ಪ್ರೇರಣಾ ಕೇಂದ್ರದ ಸಂಚಾಲಕ ಅರುಣಕುಮಾರ ಕೆ, ಹಿರಿಯ ಕಲಾವಿದೆ ವೀಣಾ ಅಠವಲೆ, ಸಂದ್ಯಾ ದೀಕ್ಷಿತ, ವೆಂಕಟೇಶ್, ಸ್ವಾತಿ ಪಟ್ಟೇದ, ಶ್ರೀಧರ ಮೇಟಿ, ತಿಪ್ಪವ್ವ ಮತ್ತಿತರರು ಇದ್ದರು.ಬಾಗಲಕೋಟೆ ಜಿಲ್ಲೆಯ ಹಂಗರಗಿ, ಧಾರವಾಡ ಜಿಲ್ಲೆಯ ಜೀರಗಿವಾಡ, ಕಿರೇಸೂರಿನ ಮಹಿಳಾ ಪ್ರತಿನಿಧಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.