ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ, ಭಾರತೀಯ ಕೃಷಿ ಸಂಶೋಧನಾ ಪರಿಷತ್ತು ಸಹಯೋಗದಲ್ಲಿ ಕೆವಿಕೆ ಆವರಣದಲ್ಲಿ ಶನಿವಾರ ರಾಷ್ಟ್ರೀಯ ರೈತ ದಿನಾಚರಣೆಯನ್ನು ಆಯೋಜಿಸಲಾಗಿತ್ತು.
ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ನಾಗರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ ಕೃಷಿ ಪ್ರಧಾನವಾಗಿದ್ದು, ರೈತರನ್ನು ದೇಶದ ಬೆನ್ನೆಲುಬು ಎಂದೆಲ್ಲಾ ಹೇಳುತ್ತೇವೆ. ಆದರೆ ಇಂದಿನ ಬದಲಾದ ಹವಾಮಾನ ಪರಿಸ್ಥಿತಿಯಲ್ಲಿ ಬೆಳೆ ನಷ್ಟವಾಗುತ್ತಿದ್ದು, ರೈತನ ಆರ್ಥಿಕ ಪರಿಸ್ಥಿತಿ ಕ್ಷೀಣಿಸುತ್ತಿದೆ. ಆದ್ದರಿಂದ ರೈತರು ಒಟ್ಟಿಗೆ ಸೇರಿ ರೈತ ಉತ್ಪನ್ನ ಸಂಘಗಳನ್ನು ಕಟ್ಟಿ ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಹನುಮಂತರಾಯ ಮಾತನಾಡಿ, ರೈತ ದಿನಾಚರಣೆ ಇತಿಹಾಸವನ್ನು ನೆನೆಯುತ್ತಾ, ಭಾರತ ದೇಶದ 5ನೇ ಪ್ರಧಾನ ಮಂತ್ರಿಯಾದ ಚೌದರಿ ಚರಣ್ ಸಿಂಗ್‌ರವರು ರೈತರಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಅವರ ಜನ್ಮ ದಿನದ ಜ್ಞಾಪಕಾರ್ಥ ಡಿ. 23ರಂದು ರಾಷ್ಟ್ರೀಯ ರೈತ ದಿನವೆಂದು ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದರು.
ದೇಶದ ಶೇ.60ರಷ್ಟು ಆರ್ಥಿಕತೆಯ ಮೂಲವು ವ್ಯವಸಾಯವೇ ಆಗಿದೆ. ವ್ಯವಸಾಯದಲ್ಲಿ ನೂತನ ಆವಿಷ್ಕಾರಗಳು, ಅಧಿಕ ಇಳುವರಿ ನೀಡುವ ತಳಿಗಳ ಸಂಶೋಧನೆ, ಕೃಷಿಯ ಯಾಂತ್ರೀಕರಣ ಹೀಗೆ ಹಲವಾರು ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ರೈತರು ಕೃಷಿಯಲ್ಲಿ ಸುಧಾರಣೆ ಮಾಡಿಕೊಳ್ಳಬೇಕು. ಯಾವುದೇ ಕ್ಷೇತ್ರದ ಕೆಲಸ ನಿಂತರೂ ಅಷ್ಟೇನೂ ತೊಂದರೆಯಾಗುವುದಿಲ್ಲ. ಆದರೆ ಕೃಷಿ ಕೆಲಸಗಳು ನಿಂತರೆ ಮೂರೊತ್ತು ಊಟಕ್ಕೂ ಚಿಂತೆ ಪಡುವ ಕಾಲಬರುತ್ತದೆಯೆಂದು ತಿಳಿಸಿದರು.ಇತ್ತೀಚಿನ ದಿನಗಳಲ್ಲಿ ವ್ಯವಸಾಯಕ್ಕೆ ಯೋಗ್ಯ ಭೂಮಿ ಸಹ ವಾಣಿಜ್ಯೀಕರಣಗೊಳ್ಳುತ್ತಿದೆ. ವ್ಯವಸಾಯವನ್ನೇ ಮುಖ್ಯ ಕಸುಬನ್ನಾಗಿಸಿಕೊಂಡಿರುವ ರೈತ ಕುಟುಂಬಗಳು ಕಡಿಮೆಯಾಗುತ್ತಾ ಬರುತ್ತಿವೆ. ಇದೇ ರೀತಿ ಮುಂದುವರೆದರೆ ಇಡೀ ದೇಶವೇ ತೊಂದರೆಗೆ ಸಿಲುಕುವ ಸಂಭವವಿದೆ. ಆದ್ದರಿಂದ ರೈತರು ತಮ್ಮ ಕಸುಬನ್ನು ತಮ್ಮ ಮುಂದಿನ ಪೀಳಿಗೆಯೂ ಮುಂದುವರೆಸಿಕೊಂಡು ಹೋಗುವಷ್ಟು ಸಬಲರಾಗಬೇಕು ಎಂದು ತಿಳಿಸಿದರು.
ಮಾದರಿ ರೈತರಿಗೆ ಸನ್ಮಾನ:ಇದೇ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ಜಿಲ್ಲೆಯ ನಾಲ್ಕು ಮಾದರಿ ಕೃಷಿಕರಾದ ದೇವನಹಳ್ಳಿ ತಾಲೂಕು ಸೀಕನಾಯಕಹಳ್ಳಿಯ ಶ್ರೀಧರ್, ದೊಡ್ಡಬಳ್ಳಾಪುರ ತಾಲೂಕು ಹಿರೇಮುದ್ದೇನಹಳ್ಳಿಯ ಚಿಕ್ಕಪ್ಪ, ಹೊಸಕೋಟೆ ತಾಲೂಕು ದೊಡ್ಡಕೋಲಿಗಹಳ್ಳಿಯ ರಮ್ಯಾ ಅವಿನಾಶ್, ನೆಲಮಂಗಲ ತಾಲೂಕು ಜಕ್ಕನಹಳ್ಳಿಯ ನಾಗೇಶ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಭಾಗವಾಗಿ ಕೇಂದ್ರದ ವತಿಯಿಂದ ಕೈಗೊಂಡ ಮುಂಚೂಣಿ ಪ್ರಾತ್ಯಕ್ಷಿಕೆಗಳ ರೈತರು ತಮ್ಮ ಅನುಭವ ಹಾಗೂ ತಾಂತ್ರಿಕತೆಯ ಉಪಯುಕ್ತತೆಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿಗಳಾದ ಡಾ. ವೆಂಕಟೇಗೌಡ, ಡಾ. ದರ್ಶಿನಿ, ಡಾ. ಸಾಗರ್ ಎಸ್. ಪೂಜಾರ್ ಮತ್ತು ಮೇಘನಾ, ರೈತರು ಪಾಲ್ಗೊಂಡರು.23ಕೆಡಿಬಿಪಿ2-ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ನಡೆಯಿತು.