ಸ್ವಸ್ಥ ಸಮಾಜ ನಿರ್ಮಿಸಲು ಮಹಿಳೆಯರ ಪಾತ್ರ ಬಹಳ ಮುಖ್ಯ: ನ್ಯಾ.ಎಂ.ಎಲ್.ರಘುನಾಥ್

KannadaprabhaNewsNetwork | Published : Apr 8, 2025 12:30 AM

ಸಾರಾಂಶ

ತರೀಕೆರೆ, ಉತ್ತಮ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಿಸಲು ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿರುತ್ತದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಎಲ್.ರಘುನಾಥ್ ಹೇಳಿದ್ದಾರೆ.

ವಿಶ್ವ ಅರೋಗ್ಯದ ದಿನ ಆಚರಣೆ, ಸಮರ್ಥ್ ಸಮುದಾಯ ಮಾನಸಿಕ ಆರೋಗ್ಯ ಯೋಜನೆ ಉದ್ಗಾಟನೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಉತ್ತಮ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಿಸಲು ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿರುತ್ತದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಎಲ್.ರಘುನಾಥ್ ಹೇಳಿದ್ದಾರೆ.

ಸೋಮವಾರ, ರಾಷ್ಚ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ, ಬೆಂಗಳೂರು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಚಿಕ್ಕಮಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪಟ್ಟಣದ ಡಾ.ಬಿ,ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ವಿಶ್ವ ಆರೋಗ್ಯ ದಿನ-2025, ಸಮರ್ಥ್ಯ ಸಮುದಾಯ ಮಾನಸಿಕ ಆರೋಗ್ಯ ಯೋಜನೆ ಉದ್ಘಾಟಿಸಿ ಮಾತನಾಡಿದರು.

ಮನೆಯಲ್ಲಿ ನೆಮ್ಮದಿ ಮತ್ತು ಕುಟುಂಬ ಜೀವನ ಉತ್ತಮವಾಗಿರಲು ಮಹಿಳೆಯರ ಪಾತ್ರ ಬಹಳ ಮುಖ್ಯ. ಈ ಕಾರ್ಯ ಕ್ರಮದಲ್ಲಿ ವಿವಿಧ ಇಲಾಖೆಗಳು ಭಾಗವಹಿಸಬೇಕು. ಹೆಚ್ಚಿಗೆ ಮಾತನಾಡದಿರುವುದು ಕೂಡ ಮಾನಸಿಕ ಅಸ್ವಸ್ಥತೆ, ದ್ವೇಷ, ಮತ್ಸರ, ಅಸೂಯೆ ಇದು ಒಂದೊಂದು ಮುಖಗಳು, ಹೆಚ್ಚು ಒತ್ತಡದಿಂದ ಮಾನಸಿಕ ಆರೋಗ್ಯ ಹಾಳಾಗುತ್ತದೆ. ಆರೋಗ್ಯವಂತರಿಗೆ ಇರುವ ಹಕ್ಕುಗಳು ಮಾನಸಿಕ ಅಸ್ವಸ್ಥರಿಗೂ ಇರುತ್ತದೆ. ಎಲ್ಲ ಮಹಿಳೆಯರು ಮತ್ತು ಮಕ್ಕಳು ಉಚಿತ ಕಾನೂನು ನೆರವು ಪಡೆಯಬಹುದು ಎಂದು ಹೇಳಿದರು.

ತರೀಕೆರೆ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀಕಾಂತ್ ವೈದ್ಯ ಮಾತನಾಡಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಜಿ.ಚಂದ್ರಶೇಖರ್ ಮಾತನಾಡಿ ತಾಯಂದಿರ ಮತ್ತು ಮಕ್ಕಳ ಮರಣ ಕೊನೆಗಾಣಿಸಬೇಕು. ದೇಶ ಅಭಿವೃದ್ಧಿಯಾಗಲು ಮಹಿಳೆಯರ ಕೊಡುಗೆ ಅನನ್ಯ. ಆರೋಗ್ಯವಾದ ತಾಯಿಯಿಂದ ಆರೋಗ್ಯ ವಾದ ಶಿಶು ಕೊಡಲು ಸಾಧ್ಯ, ಭವಿಷ್ಯದಲ್ಲಿ ಈ ಮಕ್ಕಳೇ ದೇಶದ ಉತ್ತಮ ಆಸ್ತಿಯಾಗುತ್ತಾರೆ. ಕಳೆದ 30 ವರ್ಷಗಳಲ್ಲಿ ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ನಮ್ಮದೇಶದಲ್ಲಿ ತಾಯಂದಿರ ಮತ್ತು ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಆದರೆ ನಾವು ಸಾಧಿಸಬೇಕಾಗಿರುವುದು ಇನ್ನು ಹೆಚ್ಚು ಇದೆ. ಎಲ್ಲರಿಗೂ ಗುಣ ಮಟ್ಟದ ಆರೋಗ್ಯ ಕೊಡಬೇಕು. ಸರ್ಕಾರದ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಮಾನಸಿಕ ಆರೋಗ್ಯ) ಉಪ ನಿರ್ದೇಶಕರಾದ ಡಾ.ಪಿ.ರಜನಿ ಮಾತನಾಡಿ ಮಾನಸಿಕ ಆರೋಗ್ಯ ತುಂಬಾ ಮುಖ್ಯವಾದುದು ತುಂಬಾ ಗಾಬರಿ ಪಡುವುದು, ಕೋಪ ಮಾಡಿಕೊಳ್ಳುವುದು ಒಂದು ಕಾಯಿಲೆಯೇ, ಸಮರ್ಥ ಸಮುದಾಯ ಮಾನಸಿಕ ಆರೋಗ್ಯ ಯೋಜನೆ ಒಂದು ವಿನೂತನ ಕಾರ್ಯಕ್ರಮ ಎಂದು ಹೇಳಿದರು.ಚಿಕ್ಕಮಗಳೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹಂತೇಶ್ ಭಜಂತ್ರಿ ಮಾತನಾಡಿ ಇದು ವಿಶೇಷ ಕಾರ್ಯಕ್ರಮ. ಸುಸ್ಥಿರ ಸಮಾಜ, ಆರೋಗ್ಯ ಸಮಾಜ ಮುಖ್ಯ ಎಂದು ತಿಳಿಸಿದರು.

ಬೆಂಗಳೂರು ನಿಮ್ಮಾನ್ಸ್ ಮನೋವೈದ್ಯ ಶಾಸ್ತ್ರ ವಿಭಾಗ ಪ್ರಾಧ್ಯಾಪಕ ಡಾ.ಜಗದೀಶ್ ತೀರ್ಥಹಳ್ಳಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ ಮಿಕ್ಕ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಿದರು.

ಚಿಕ್ಮಮಗಳೂರು ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಹನುಮಂತಪ್ಪ, ವಕೀಲರ ಸಂಘದ ಅಧ್ಯಕ್ಷ ಬಿ.ಶೇಖರ್ ನಾಯ್ಕ, ಡಾ. ನವೀನ್ ಕುಮಾರ್, ತರೀಕೆರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಅಡಳಿತಾಧಿಕಾರಿ ಡಾ.ಟಿ.ಎಂ.ದೇವರಾಜ್, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಅನುಪಮ ಮತ್ತಿತರರು ಭಾಗವಹಿಸಿದ್ದರು.7ಕೆಟಿಆರ್.ಕೆ.5ಃ

ತರೀಕೆರೆಯಲ್ಲಿ ನಡೆದ ವಿಶ್ವ ಅರೋಗ್ಯದ ದಿನ ಆಚರಣೆ, ಸಮರ್ಥ ಸಮುದಾಯ ಮಾನಸಿಕ ಆರೋಗ್ಯ ಯೋಜನೆಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್ ಉದ್ಘಾಟಿಸಿದರು. ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಮಾನಸಿಕ ಆರೋಗ್ಯ) ಉಪ ನಿರ್ದೇಶಕರಾದ ಡಾ.ಪಿ.ರಜನಿ, ಡಾ.ಬಿ.ಜಿ. ಚಂದ್ರಶೇಖರ್, ಡಾ.ಟಿ.ಎಂ. ದೇವರಾಜ್ ಮತ್ತಿತರರು ಇದ್ದರು.

Share this article