ಹಾವೇರಿ: ಪಕ್ಷದ ಬೆಳವಣಿಗೆಯಲ್ಲಿ ಕಾರ್ಯಕರ್ತರ ಪಾತ್ರ ಬಹಳ ಮುಖ್ಯ. ಒಬ್ಬ ವ್ಯಕ್ತಿ ಪಕ್ಷದ ಕಾರ್ಯಕರ್ತನಾದರೆ ಅವರನ್ನು ಗೌರವಪೂರ್ವಕವಾಗಿ ನಡೆಸಿಕೊಳ್ಳಬೇಕು. ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಆಧಾರಸ್ತಂಭವಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ ಹೇಳಿದರು. ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಏರ್ಪಡಿಸಿದ್ದ ಪಕ್ಷದ ಸಂಘಟನಾತ್ಮಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ದೇಶಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನ ಪ್ರಾರಂಭವಾಗಿದ್ದು, ಈ ಅಭಿಯಾನದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷಕ್ಕಾಗಿ ಸಮಯ ನೀಡಿ ಪ್ರತಿ ಮನೆ ಮನೆಗೆ ತೆರಳಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೊಂದಾಯಿಸಬೇಕು. ಆ ಮೂಲಕ ಬಿಜೆಪಿ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಬೇಕು ಎಂದರು. ಸದಸ್ಯತ್ವ ಅಭಿಯಾನ ಎಂಬುದು ನಮ್ಮೆಲ್ಲರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಹಾಗೂ ಜನನಾಯಕರಾಗಿ ಬೆಳೆಯಲು ಉತ್ತಮ ಅವಕಾಶ. ನಾವು ಪ್ರತಿ ಮನೆ ಮನೆಗೆ ತೆರಳಿ ಅವರನ್ನು ಪಕ್ಷದ ಸದಸ್ಯತ್ವ ತೆಗೆದುಕೊಳ್ಳಲು ಪ್ರೇರೇಪಿಸಬೇಕು ಹಾಗೂ ಸದಸ್ಯತ್ವ ತೆಗೆದುಕೊಂಡವರನ್ನು ಮುಂಬರುವ ದಿನಗಳಲ್ಲಿ ಪಕ್ಷದ ಕಾರ್ಯಕರ್ತರನ್ನಾಗಿ ನಿರ್ಮಿಸಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಪಕ್ಷ ನನಗೆ ಹಾವೇರಿ ಜಿಲ್ಲೆಯ ಸದಸ್ಯತ್ವ ಅಭಿಯಾನದ ಪ್ರಭಾರಿಯನ್ನಾಗಿ ನೇಮಿಸಿರುವುದು ಸಂತಸದ ಸಂಗತಿ. ಈ ಸದಸ್ಯತ್ವ ಅಭಿಯಾನದಲ್ಲಿ ನಾವು ಯಾವುದೇ ಸಂವಿಧಾನಿಕ ಅಧಿಕಾರ ಹೊಂದಿದ್ದರು ಪಕ್ಷ ನೀಡಿರುವ ಜವಾಬ್ದಾರಿಯನ್ನು ನಿಷ್ಠಾವಂತ ಕಾರ್ಯಕರ್ತರ ಹಾಗೆ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮವಾದ ಬೆಂಬಲವಿದೆ ಅಲ್ಲದೆ ಪಕ್ಷಕ್ಕೆ ನಿಷ್ಠೆಯಿಂದ ದುಡಿಯುವಂತ ಸಾವಿರಾರು ಕಾರ್ಯಕರ್ತರ ಪಡೆಯಿದೆ. ನಾವೆಲ್ಲರೂ ಪಕ್ಷಕ್ಕೆ ಸಮಯ ಮೀಸಲಿಟ್ಟು ಪಕ್ಷವನ್ನು ಸದೃಢಗೊಳಿಸೋಣ ಎಂದು ಕರೆ ನೀಡಿದರು. ಜಿಲ್ಲಾಧ್ಯಕ್ಷರಾದ ಅರುಣಕುಮಾರ ಪೂಜಾರ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಸದಸ್ಯತ್ವ ಅಭಿಯಾನ ಆರಂಭವಾಗಿದ್ದು, ಸ್ವಯಂ ಪ್ರೇರಿತವಾಗಿ ಈಗಾಗಲೇ ಸಾವಿರಾರು ಕಾರ್ಯಕರ್ತರು ಜಿಲ್ಲೆಯಲ್ಲಿ ನೋಂದಾವಣೆ ಮಾಡಿದ್ದಾರೆ. ಮುಂಬರುವ ದಿನದಲ್ಲಿ ನಾವೆಲ್ಲರೂ ಪ್ರತಿ ಬೂತ್‌ಗೆ ತೆರಳಿ ಸದಸ್ಯತ್ವವನ್ನು ಮಾಡಿಸುವ ಮೂಲಕ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಬೇಕು ಎಂದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಹಾವೇರಿ ವಿಧಾನಸಭಾ ಕ್ಷೇತ್ರದ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ, ರಾಷ್ಟ್ರೀಯ ಪರಿಷತ್ ಸದಸ್ಯ ಮಂಜುನಾಥ ಓಲೇಕಾರ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೋಭಾ ನಿಸ್ಸಿಮಗೌಡರ, ರಾಜ್ಯ ಪ್ರಕೋಷ್ಠಗಳ ಸಹ ಸಂಯೋಜಕ ಭೋಜರಾಜ ಕರೂದಿ, ಹಾವೇರಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ನಂಜುಂಡೇಶ ಕಳ್ಳೇರ, ಡಾ. ಸಂತೋಷ ಆಲದಕಟ್ಟಿ, ಮಂಜುನಾಥ ಓಲೇಕಾರ ಸೇರಿದಂತೆ ಇತರರು ಇದ್ದರು.