ಬಿಸಿಯೂಟ ತಯಾರಿಕೆಗೆ ಸೂರು ಕಲ್ಪಿಸಿದ ಮ-ನರೇಗಾ

KannadaprabhaNewsNetwork |  
Published : Sep 13, 2025, 02:04 AM IST
52 | Kannada Prabha

ಸಾರಾಂಶ

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಈ ಮಹತ್ತರವಾದ ಯೋಜನೆಗೆ ಯಾವುದೇ ತೊಡಕಾಗದಂತೆ ಹಾಗೂ ಮತ್ತಷ್ಟು ಸುಲಲಿತ

ಕನ್ನಡಪ್ರಭ ವಾರ್ತೆ ಮೈಸೂರುಅದೊಂದು ಪುಟ್ಟ ಸರ್ಕಾರಿ ಶಾಲೆ, ಭವ್ಯ ಭವಿಷ್ಯದ ಕನಸು ಹೊತ್ತು 67 ಮಕ್ಕಳು ವ್ಯಾಸಂಗ ಮಾಡುತ್ತಿರುವ ವಿದ್ಯಾ ದೇಗುಲ. 1 ರಿಂದ 7ನೇ ತರಗತಿಯ ಮಕ್ಕಳ ವಿದ್ಯಾಭ್ಯಾಸಕ್ಕೆ ಇದ್ದದ್ದು ನಾಲ್ಕೇ ಕೊಠಡಿ, ಈ ಪೈಕಿ ಬಿಸಿಯೂಟ ಯೋಜನೆ ಜಾರಿಯಾದಾಗ ಅಡುಗೆ ತಯಾರಿಕೆಗೆ ಅನಿವಾರ್ಯವಾಗಿ ಒಂದು ಕೊಠಡಿಯನ್ನು ಮೀಸಲಿಡಲೇಬೇಕಾಯಿತು.ಮಕ್ಕಳ ವಿದ್ಯಾಭ್ಯಾಸಕ್ಕಿದ್ದ ಕೊಠಡಿಯು ಅಡುಗೆ ತಯಾರಿಕೆಗೆ ಸೂರಾಯಿತಾದರೂ ಸುಸಜ್ಜಿತ ವ್ಯವಸ್ಥೆ ಇರಲಿಲ್ಲ, ಜೊತೆಗೆ ಮಕ್ಕಳಿಗೆ ಪಾಠ ಹೇಳಲು ಕೊಠಡಿಯ ಸಮಸ್ಯೆಯು ತಲೆದೂರಿತ್ತು. ಆದರೆ ಈ ಎಲ್ಲಾ ಸಮಸ್ಯೆಗೆ ನರೇಗಾ ಯೋಜನೆಯು ಮುಕ್ತಿ ನೀಡಿದೆ.ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಈ ಮಹತ್ತರವಾದ ಯೋಜನೆಗೆ ಯಾವುದೇ ತೊಡಕಾಗದಂತೆ ಹಾಗೂ ಮತ್ತಷ್ಟು ಸುಲಲಿತವಾಗಿ ಅನುಷ್ಟಾನಗೊಳ್ಳಲು ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷೆ ಯೋಜನೆಯಾದ ಮ-ನರೇಗಾ ಸಹಕಾರಿಯಾಗಿದೆ.ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಪಂ ವ್ಯಾಪ್ತಿಯ ಕೂಗಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 7.45 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಅಡುಗೆ ಕೋಣೆ ನಿರ್ಮಿಸಲಾಗಿದ್ದು, ಶಾಲಾ ವಿದ್ಯಾರ್ಥಿಗಳಿಗೆ ಇಲ್ಲಿ ಶುಚಿ ಹಾಗೂ ರುಚಿಯಾದ ಬಿಸಿಯೂಟ ತಯಾರಿಸಿ ಉಣ ಬಡಿಸಲು ಸಹಕಾರಿಯಾಗಿದೆ.ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ ಹಲವು ಸಮುದಾಯ ಕಾಮಗಾರಿಗಳ ಮೂಲಕ ಸಾರ್ವಜನಿಕ ಆಸ್ತಿ ಸೃಜಿಸಲಾಗುತ್ತಿದ್ದು, ಈ ಪೈಕಿ ಶಾಲಾ ಶೌಚಾಲಯ, ಶಾಲಾ ಆವರಣ ಅಭಿವೃದ್ಧಿ, ಕಾಂಪೌಂಡ್, ಪೌಷ್ಟಿಕ ಕೈತೋಟ, ಅಡುಗೆ ಕೋಣೆ, ಭೋಜನಾಲಯ ಹಾಗೂ ಕ್ರೀಡಾಂಗಣ ಅಭಿವೃದ್ಧಿ ನರೇಗಾ ಯೋಜನೆಯು ಶಾಲಾ ಅಭಿವೃದ್ಧಿ ಕಾಮಗಾರಿಗೆ ಹೆಚ್ಚು ಒತ್ತು ನೀಡುತ್ತದೆ. ಅದರಂತೆ, ಕೂಗಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಡುಗೆ ಕೋಣೆ ನಿರ್ಮಾಣ ಅವಶ್ಯಕತೆ ಇರುವುದನ್ನು ಅರಿತ ಪಿಡಿಒ ಹಾಗೂ ಗ್ರಾಪಂ ಚುನಾಯಿತ ಪ್ರತಿನಿಧಿಗಳು 2023-24ನೇ ಸಾಲಿನಲ್ಲಿ 7.45 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿ ಅಡುಗೆ ಕೋಣೆ ನಿರ್ಮಾಣಕ್ಕೆ ಮುಂದಾದರು. ಸುಸಜ್ಜಿತ ಅಡುಗೆ ಕೋಣೆಶಾಲೆಯ ಮುಂಭಾಗದಲ್ಲೇ ಕಾಂಪೌಂಡ್ ಗೆ ಅಂಟಿಕೊಂಡಂತೆ ಅಡುಗೆ ಕೋಣೆ ನಿರ್ಮಿಸಲಾಗಿದ್ದು, ದಾಸ್ತಾನುಗಳನ್ನು ಇಟ್ಟುಕೊಳ್ಳಲು 2 ವಿಶಾಲವಾದ ಕೋಣೆ ಹೊಂದಿವೆ. ಅಡುಗೆ ತಯಾರಿಕೆಗೆ ಅನುಕೂಲವಾಗುವಂತೆ ಎಲ್. ಆಕಾರದಲ್ಲಿ ಸ್ಲಾಬ್ ಹಾಕಲಾಗಿದೆ. ನೀರು ಹಾಗೂ ವಿದ್ಯುತ್ ವ್ಯವಸ್ಥೆ ಇದ್ದು, ಗಾಳಿ, ಬೆಳಕು ಉತ್ತಮವಾಗಿ ಕಟ್ಟಡದೊಳಗೆ ಪ್ರವೇಶಿಸುವಂತಿದೆ. 67 ಶಾಲಾ ಮಕ್ಕಳಿಗೆ ಬಿಸಿ ಬಿಸಿಯೂಟ ತಯಾರಿಸಲು ವಿಶಾಲವಾಗಿದ್ದು, ಅಡುಗೆ ಸಿಬ್ಬಂದಿ ಈಗ ನಿರಾಳವಾಗಿ ಶುಚಿಯಾದ ಅಡುಗೆ ತಯಾರಿಸಿ ಪ್ರೀತಿಯಿಂದ ಉಣಬಡಿಸುತ್ತಿದ್ದಾರೆ.---ಕೋಟ್ಮಹಾತ್ಮಗಾಂಧಿ ನರೇಗಾ ಯೋಜನೆ ಮೂಲಕ ವ್ಯವಸ್ಥಿತವಾದ ಅಡುಗೆ ಕೋಣೆ ನಿರ್ಮಿಸಿರುವುದು ಶಾಲೆಗೆ ಅನುಕೂಲವಾಗಿದೆ. ಈ ಮುಂಚೆ ಬಿಸಿಯೂಟ ತಯಾರಾಗುವರೆಗೂ ಆಗಾಗ್ಗೆ ಒಂದಿಲ್ಲೊಂದು ಸಮಸ್ಯೆ ಎದುರಾಗಿ ಅಡುಗೆ ಕೋಣೆಗೆ ಪದೇ ಪದೇ ಭೇಟಿ ನೀಡಬೇಕಾಗಿತ್ತು.ಸದ್ಯ ನರೇಗಾ ಯೋಜನೆ ಅಡಿಯಲ್ಲಿ ನೀರು, ವಿದ್ಯುತ್ ಸೇರಿದಂತೆ ಇತರೆ ಸೌಲಭ್ಯ ದೊರಕಿಸಿದ ಬಳಿಕೆ ಈಗ ಪದೇ ಪದೇ ಅಡುಗೆ ಮನೆಯತ್ತ ಹೋಗುವುದು ತಪ್ಪಿದೆ, ಒಮ್ಮೆ ಭೇಟಿ ನೀಡಿ ಶಾಲೆಯ ಇತರೆ ಕೆಲಸಗಳಿಗೆ ಗಮನಹರಿಸಲು ಸಹಕಾರಿಯಾಗಿದೆ. ಸಾಕಷ್ಟು ವಿಶಾಲತೆಯಾಗಿದೆ. ನಿತ್ಯ ಶಾಲಾ ಮಕ್ಕಳಿಗೆ ಶುಚಿ ಹಾಗೂ ರುಚಿಯಾದ ಬಿಸಿಯೂಟ ಬಡಿಸಲು ಅನುಕೂಲಕರವಾಗಿದೆ.- ಸುಶೀಲಮ್ಮ, ಮುಖ್ಯೋಪಾಧ್ಯಾಯಿನಿ, ಸ.ಹಿ.ಪ್ರಾ. ಶಾಲೆ, ಕೂಗಲೂರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ