ರಕ್ತಪಾತವಾದರೆ ರಾಜ್ಯ ಸರ್ಕಾರವೇ ಹೊಣೆ: ಎ.ಮಂಜುನಾಥ್

KannadaprabhaNewsNetwork |  
Published : Sep 13, 2025, 02:04 AM IST
12ಕೆಆರ್ ಎಂಎನ್ 2.ಜೆಪಿಜಿಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ನಿರ್ಮಿಸಲು ಹೊರಟಿರುವ ಬಿಡದಿ ಟೌನ್ ಶಿಪ್ ಯೋಜನೆಗೆ ರೈತರ ತೀವ್ರ ವಿರೋಧವಿದೆ. ಇದನ್ನೂ ಲೆಕ್ಕಿಸದೆ ಯೋಜನೆ ಜಾರಿಗೊಳಿಸಿದರೆ ಮುಂದಾಗುವ ರಕ್ತಪಾತಕ್ಕೆ ರಾಜ್ಯ ಸರ್ಕಾರವೇ ಹೊಣೆ ಆಗಬೇಕಾಗುತ್ತದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದರು.

ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ನಿರ್ಮಿಸಲು ಹೊರಟಿರುವ ಬಿಡದಿ ಟೌನ್ ಶಿಪ್ ಯೋಜನೆಗೆ ರೈತರ ತೀವ್ರ ವಿರೋಧವಿದೆ. ಇದನ್ನೂ ಲೆಕ್ಕಿಸದೆ ಯೋಜನೆ ಜಾರಿಗೊಳಿಸಿದರೆ ಮುಂದಾಗುವ ರಕ್ತಪಾತಕ್ಕೆ ರಾಜ್ಯ ಸರ್ಕಾರವೇ ಹೊಣೆ ಆಗಬೇಕಾಗುತ್ತದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಿಂದ ರೈತರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಪ್ರತಿ ಗ್ರಾಮದಲ್ಲೂ ಮಹಿಳೆಯರು, ಮಕ್ಕಳನ್ನು ಬೀದಿಗಿಳಿಸಿ ಹೋರಾಟ ಮಾಡಿ ಜನಾಂದೋಲನ ರೂಪಿಸುತ್ತೇವೆ. ಈಗ ಬೈರಮಂಗಲದಲ್ಲಿ ರೈತರು ಆರಂಭಿಸಿರುವ ನ್ಯಾಯ ಸಿಗುವವರೆಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರಿಯಲಿದೆ. ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಅನೇಕ ನಾಯಕರು ಚಳವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಬಿಡದಿ ಇಂಟಿಗ್ರೇಟೆಡ್ ಟೌನ್ ಶಿಪ್ ಹೆಸರಲ್ಲಿ ರೈತರ ಜಮೀನು ಕಬಳಿಸುವ ಹುನ್ನಾರ ನಡೆಯುತ್ತಿದೆ. ಈ ಯೋಜನೆ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ರೈತರೊಂದಿಗೆ ಒಂದೇ ಒಂದು ಸಭೆ ನಡೆಸಿಲ್ಲ. ಬದಲಿಗೆ ಪ್ರತಿಭಟನಾನಿರತ ರೈತರನ್ನು ಅವಹೇಳನ ಮಾಡಿದ್ದಾರೆ. ಜಿಲ್ಲೆಯ ಮಗ ಅಂದುಕೊಂಡು ರಾಜಕೀಯ ಮಾಡುತ್ತಿರುವ ನೀವು ಕಷ್ಟ ಹೇಳಿಕೊಂಡ ರೈತರನ್ನು ಬೀದಿ ನಾಯಿ ರೀತಿ ಕಾಣುತ್ತೀರಿ. ಇದೇನಾ ನೀವು ಜಿಲ್ಲೆಯ ಜನರಿಗೆ ಕೊಡುತ್ತಿರುವ ಕೊಡುಗೆ ಎಂದು ಟೀಕಿಸಿದರು.

ಸ್ಥಳೀಯ ಶಾಸಕ ಬಾಲಕೃಷ್ಣ ಬಹಳಷ್ಟು ಬಾರಿ ಸಭೆ ಮಾಡಿರುವುದಾಗಿ ಹೇಳುತ್ತಾರೆ. ಎಷ್ಟು ಸಭೆಗಳನ್ನು ಎಲ್ಲಿ, ಯಾವಾಗ ಮಾಡಿದ್ದೀರಿ ಎಂದು ರೈತರ ಪ್ರಶ್ನೆಗಳಿಗೆ ಉತ್ತರ ನೀಡಲಿ. ಡಿ.ಕೆ.ಶಿವಕುಮಾರ್ ಒಂದು ಕ್ಷಣವೂ ರೈತರ ಬಗ್ಗೆ ಯೋಚನೆ ಮಾಡಿಲ್ಲ. ಮಾತೆತ್ತಿದರೆ ಇದು ಕುಮಾರಸ್ವಾಮಿಯವರ ಕನಸಿನ ಕೂಸು ಅನ್ನುತ್ತಾರೆ. ಆಗ ಯೋಜನೆಗೆ ವಿರೋಧ ಮಾಡಿದ್ದ ಕೆಲ ರೈತರು ಈಗ ಸ್ವಾಗತಿಸುತ್ತಿದ್ದಾರೆ. ಇದರ ಒಳಮರ್ಮ ಏನೆಂದು ಪ್ರಶ್ನಿಸಿದರು.

ರೈತರ ಸಮಾಧಿ ಮೇಲೆ ಟೌನ್ ಶಿಪ್ ನಿರ್ಮಾಣ:

ಬಿಡದಿ ಟೌನ್ ಶಿಪ್ ಅನ್ನು ದೇಶದ ಮೊದಲ ಎಐ ನಗರ ಅಂತ ಬಿಂಬಿಸುತ್ತಿದ್ದಾರೆ. ಇದು ಜನರಿಗೆ ಹೂವು ಮುಡಿಸುವ ಯೋಜನೆಯಾಗಿದ್ದು, ನ್ಯಾವ್ಯಾರು ಹೂವು ಮುಡಿದುಕೊಳ್ಳಲು ಸಿದ್ದರಿಲ್ಲ. ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳನ್ನು ಕೈಗೊಂಬೆಗಳನ್ನಾಗಿ ಮಾಡಿಕೊಂಡಿದ್ದೀರಿ. ಇದನ್ನು ಎಷ್ಟು ದಿನ ನಡೆಸಿತ್ತೀರೊ ನೋಡುತ್ತೇನೆ ಎಂದರು.

ಕತ್ತಲೆ ಕೋಣೆಯಲ್ಲಿ ಕುಳಿತು ರೈತರಿಗೆ 2.50 ರಿಂದ 3 ಕೋಟಿ ರುಪಾಯಿ ಕೊಡುತ್ತೇವೆಂದು ಮಂಕು ಬೂದಿ ಎರಚುತ್ತಿದ್ದೀರಿ. ಯೋಜನೆಯಿಂದ ರಾಜಕೀಯ ಉತ್ತುಂಗಕ್ಕೆ ಹೋಗುತ್ತೇನೆ ಎನ್ನುವ ಭ್ರಮೆಯಲ್ಲಿ ಡಿ.ಕೆ.ಶಿವಕುಮಾರ್ ಇದ್ದಾರೆ. ಸರ್ಕಾರ ಬಿದ್ದು ಹೋದರೆ ರೈತರು ಬೀದಿ ಪಾಲಾಗುತ್ತಾರೆ. ಆಗ ಅವರ ನೆರವಿಗೆ ಯಾರು ಬರುತ್ತಾರೆ. ನೀವು ಜಿಲ್ಲೆಯ ಜನರ ಋಣ ತೀರಿಸಬೇಕಾದರೆ ಬಿಡದಿ ಟೌನ್ ಶಿಪಿ ಯೋಜನೆ ಕೈಬಿಡಿ ಎಂದು ಸಲಹೆ ನೀಡಿದರು.

ಪರ-ವಿರೋಧ ರೈತರು ಎಷ್ಟಿದ್ದಾರೆ ನೋಡೋಣ:

ಸರ್ಕಾರ ರೈತರ ಎದೆ ಮೇಲೆ ಮಣ್ಣು ಹಾಕಿ ಟೌನ್ ಶಿಪ್ ನಿರ್ಮಿಸಲು ಮುಂದಾಗಿದೆ. ಶೇಕಡ 80ರಷ್ಟು ರೈತರು ಯೋಜನೆಗೆ ಒಪ್ಪಿಗೆ ಕೊಟ್ಟಿದ್ದಾರೆಂದು ಸುಳ್ಳು ಹೇಳುತ್ತಿದ್ದಾರೆ. ಹಾಗಾದರೆ ಬೈರಮಂಗಲ ಸರ್ಕಲ್ ನಲ್ಲಿ ಯೋಜನೆಗೆ ಒಪ್ಪಿಗೆ ಇರುವ ರೈತರನ್ನು ಕರೆಸಿ, ವಿರೋಧವಿರುವ ರೈತರನ್ನು ನಾವು ಕರೆಸುತ್ತೇವೆ ನೋಡೋಣ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಎ.ಮಂಜುನಾಥ್ ಸವಾಲು ಹಾಕಿದರು.

ಕುಮಾರಸ್ವಾಮಿರವರು ಬಿಡದಿ ಸೇರಿ ಐದು ಟೌನ್ ಶಿಪ್ ಗಳನ್ನು ಘೋಷಣೆ ಮಾಡಿದ್ದರು. ನಿಮಗೆ ತಾಕತ್ತಿದ್ದರೆ ಸಾತನೂರಿನಲ್ಲಿ ಟೌನ್ ಶಿಪ್ ಮಾಡಿ ತೋರಿಸಿ ನೋಡೋಣ. ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರಿಟ್ಟರು ಏನು ಪ್ರಯೋಜನವಾಗಲಿಲ್ಲ. 10 ರುಪಾಯಿಗಳಷ್ಟು ದರ ಹೆಚ್ಚಾಗಿಲ್ಲ. ಹುಡ್ಕೊದಿಂದ 20 ಸಾವಿರ ಸಾಲ ಮಾಡಿ ಟೌನ್ ಶಿಪ್ ಮಾಡಲು ಹೊರಟಿದ್ದಾರೆ. ಟೌನ್ ಶಿಪ್ ನಿರ್ಮಾಣವೇ ಸರ್ಕಾರದ ನಿಲುವು ಅನ್ನುವುದಾದರೆ ನಾವು ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಎ.ಮಂಜುನಾಥ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯರಾದ ರಮೇಶ್, ಸೋಮಶೇಖರ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಮುಖಂಡರಾದ ಸೋಮೇಗೌಡ, ಚಂದ್ರು, ಚಿಕ್ಕಣ್ಣ, ಪುಟ್ಟಣ್ಣ, ನರಸಿಂಹಯ್ಯ, ಖಲೀಲ್, ಬಸವರಾಜು, ಅಬ್ಬನಕುಪ್ಪೆ ಚಂದ್ರಶೇಖರ್, ಗೋವಿಂದರಾಜು, ಚನ್ನಕೇಶವ ರೆಡ್ಡಿ, ಷಣ್ಮುಖ ಇದ್ದರು.

ಬಾಕ್ಸ್‌...........

ಚೈಲ್ಡ್ ಅಧ್ಯಕ್ಷನ ತೆಗೆದು ಸಿಎಂ, ಐಎಎಸ್ ಅಧಿಕಾರಿನ ಕೂರಿಸಿ:

ಬಿಡದಿ ಟೌನ್ ಶಿಪ್ ಬಹುದೊಡ್ಡ ಯೋಜನೆಯಾಗಿದ್ದು, ಇಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವುದು ಮುಖ್ಯ. ಆದರೆ, ರಾಜ್ಯ ಸರ್ಕಾರ ಒಬ್ಬ ಚೈಲ್ಡ್ ನನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಹಾಸ್ಯಾಸ್ಪದ ಎಂದು ಮಾಜಿ ಶಾಸಕ ಎ.ಮಂಜುನಾಥ್ ವ್ಯಂಗ್ಯವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ , ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅಥವಾ ಹಿರಿಯ ಐಎಎಸ್ ಅಧಿಕಾರಿಗಳು ಪ್ರಾಧಿಕಾರದ ಅಧ್ಯಕ್ಷರಾಗಿರಬೇಕು. ಅವರೆಲ್ಲರನ್ನು ಹೊರತು ಪಡಿಸಿ ಒಬ್ಬ ಚೈಲ್ಡ್ ನನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಪ್ರಾಧಿಕಾರದ ನಿರ್ದೇಶಕರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಆದರೆ, ಹಾಲಿ ಸಂಸದರನ್ನು ಏಕೆ ನಿರ್ದೇಶಕರನ್ನಾಗಿ ಮಾಡಿಕೊಂಡಿಲ್ಲ. ರಾಜ್ಯ ಸರ್ಕಾರಕ್ಕೆ ಪಾರದರ್ಶಕವಾಗಿ ಕೆಲಸ ಮಾಡುವ ಇಚ್ಛಾಸಕ್ತಿ ಇಲ್ಲದಿರುವುದು ಇದರಿಂದಲೇ ಗೊತ್ತಾಗುತ್ತದೆ ಎಂದು ಟೀಕಿಸಿದರು.

ಮಾಜಿ ಶಾಸಕಿ ಅನಿತಾ ಮತ್ತು ನಿಖಿಲ್ ಕುಮಾರಸ್ವಾಮಿ ಪರಿಹಾರಕ್ಕೆ ಅರ್ಜಿ ಹಾಕಿದ್ದಾರೆಂದು ಸುಳ್ಳು ಹೇಳುತ್ತಿದ್ದಾರೆ. ಭೂಮಿ ಕೊಡುವುದಿಲ್ಲ ಎಂದು ಅವರಿಬ್ಬರು ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸುತ್ತಾರೆ. ಪತ್ರ ವ್ಯವಹಾರ ತಮ್ಮೊಂದಿಗೆ ಮಾಡುವಂತೆ ಅವರು ಕೇಳಿದ್ದಾರೆಯೇ ಹೊರತು ಪರಿಹಾರ ಕೇಳಿಲ್ಲ. ಅದನ್ನು ಸಾಬೀತು ಮಾಡಲಾಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎಂದು ಮಂಜುನಾಥ್ ವಾಗ್ದಾಳಿ ನಡೆಸಿದರು.

12ಕೆಆರ್ ಎಂಎನ್ 2.ಜೆಪಿಜಿ

ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ