ಕುದೂರು: ಮಾಗಡಿ ತಾಲೂಕು ಕುದೂರು ಗ್ರಾಮದಿಂದ ಹುಲಿಕಲ್ಲು ಗ್ರಾಮದವರೆವಿಗೆ 4 ಕಿಮೀ ದೂರದವರೆವಿಗೆ 294 ಆಲದ ಗಿಡಗಳನ್ನು ನೆಟ್ಟು ಅವುಗಳನ್ನು ಮರವಾಗುವ ತನಕ ಜತನದಿಂದ ಕಾಪಾಡುವ ಮೂಲಕ ಸಾಲುಮರದ ತಿಮ್ಮಕ್ಕ ಪರಿಸರ ಲೋಕಕ್ಕೆ ಅತಿದೊಡ್ಡ ಕೊಡುಗೆ ನೀಡಿದವರು.
ತಿಮ್ಮಕ್ಕ ಮತ್ತು 294 ಮಕ್ಕಳು:ಸಾಲುಮರದ ತಿಮ್ಮಕ್ಕ ಹುಲಿಕಲ್ಲು ಗ್ರಾಮದ ಚಿಕ್ಕಯ್ಯ ಅವರನ್ನು ಮದುವೆಯಾದರು. ಪತಿ ಚಿಕ್ಕಯ್ಯ ಮಾತನಾಡುವಾಗ ಬಿಕ್ಕುತ್ತಿದ್ದ ಕಾರಣ ಅವರನ್ನು ಬಿಕ್ಕಲು ಚಿಕ್ಕಯ್ಯ ಎಂದೇ ಕರೆಯುತ್ತಿದ್ದರು.
ಬಡತನದಲ್ಲಿದ್ದ ಚಿಕ್ಕಯ್ಯ ಜೀವನೋಪಾಯಕ್ಕಾಗಿ ಲೋಕೋಪಯೋಗಿ ಇಲಾಖೆಯಲ್ಲಿ ದಿನಕೂಲಿ ನೌಕರರನಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಕೆಲಸಗಳಲ್ಲಿ ಗಿಡಮರಗಳನ್ನು ನೆಡುವುದು ಕೂಡಾ ಒಂದಾಗಿತ್ತು. ಮದುವೆಯಾಗಿ ವರ್ಷಗಳು ಉರುಳಿದರು ತಿಮ್ಮಕ್ಕ ದಂಪತಿಗಳಿಗೆ ಮಕ್ಕಳಾಗಲಿಲ್ಲ ಎಂಬ ಕೊರಗು ಕಾಡುತ್ತಿತ್ತು. ಇದರ ಜೊತೆಗೆ ಜನರ ನಿಂದನೆಗಳು ತಿಮ್ಮಕ್ಕನನ್ನು ಸಂಕಟದ ಗೂಡಿಗೆ ನೂಕುತ್ತಿತ್ತು.ಬಂಜೆ ಎಂಬ ಬಂಧುಗಳ ಬೈಗುಳಕ್ಕೆ ಬೇಸತ್ತು ನಿತ್ಯ ಕಣ್ಣೀರಲ್ಲಿ ಕೈತೊಳೆಯುವಂತಾಯಿತು. ಆಗ ಅನಿವಾರ್ಯವಾಗಿ ಪತಿ ನಿರ್ವಹಿಸುತ್ತಿದ್ದ ಗಿಡ ನೆಡುವ ಕೆಲಸಕ್ಕೆ ಕೈಜೋಡಿಸಿದರು. ಮಣ್ಣಿನ ಮಡಕೆಯಲ್ಲಿ ಹೊಂಡಗಳಲ್ಲಿ ನೀರು ತುಂಬಿಕೊಂಡು ಬಂದು ಗಂಡ ಹೆಂಡತಿ ರಸ್ತೆ ಬದಿಯಲ್ಲಿ ನೆಟ್ಟಿದ್ದ ಆಲದ ಗಿಡಗಳಿಗೆ ನೀರು ಹಾಕುತ್ತಾ ಬಂದರು.
ಆಲದ ಕಡ್ಡಿಗಳು ಚಿಗುರೊಡೆದ ಮರವಾಗಿ ಬೆಳಯುತ್ತಿರುವುದನ್ನು ನೋಡಿದ ತಿಮ್ಮಕ್ಕನಿಗೆ ಮಕ್ಕಳಿಲ್ಲ ಎಂಬ ಕೊರಗು ನಿಧಾನವಾಗಿ ಮಾಯವಾಗಿ ಈ ಆಲದ ಮರಗಳೇ ನನ್ನ ಮಕ್ಕಳು ಎಂದು ಭಾವಿಸಿ ಗಿಡಗಳನ್ನು ಪೋಷಣೆ ಮಾಡಿದರು. ಇದರಿಂದ ತಿಮ್ಮಕ್ಕನವರಿಗೆ ಒಟ್ಟು 294 ಮಕ್ಕಳು ಎಂದು ಜರಿದ ಜನರೇ ಅಭಿಮಾನದಿಂದ ಮಾತನಾಡುವಂತಾಯಿತು.ಅನಾರೋಗ್ಯದ ಕಾರಣ ಗ್ರಾಮ ತೊರೆದರು:
ಹುಲಿಕಲ್ಲು ಗ್ರಾಮದಲ್ಲಿ ಸರ್ಕಾರ ನಿರ್ಮಿಸಿಕೊಟ್ಟಿದ್ದ ಮನೆಯಲ್ಲಿ ವಾಸವಾಗಿದ್ದ ತಿಮ್ಮಕ್ಕರವರು 10 ವರ್ಷಗಳ ಹಿಂದೆಯೇ ಅನಾರೋಗ್ಯದ ಕಾರಣದಿಂದಾಗಿ, ಆಗಾಗ್ಗೆ ಆಸ್ಪತ್ರೆಗೆ ತೋರಿಸಿಕೊಳ್ಳಬೇಕಾಗುತ್ತದೆ.ಹುಲಿಕಲ್ಲಿನಲ್ಲಿ ದಿಢೀರ್ ವೈದ್ಯಕೀಯ ಸೌಲಭ್ಯ ಸಿಗುವುದಿಲ್ಲ ಎಂಬ ಕಾರಣಕ್ಕೆ ಸಾಲುಮರದ ನೆರಳಿನಿಂದ ಬೆಂಗಳೂರಿನ ಕಾಂಕ್ರಿಟ್ ಕಾಡಿನಲ್ಲಿ ದತ್ತುಮಗ ಉಮೇಶ್ ರವರೊಂದಿಗೆ ಬಾಡಿಗೆ ಮನೆ ಮಾಡಿಕೊಂಡಿದ್ದರು.
ಬಾಕ್ಸ್.............ರೆಂಬೆ ಕಡಿದಿದ್ದಾಗ ಗಂಡನ ಬಂಧನ
ಸಾಲುಮರದ ತಿಮ್ಮಕ್ಕ ಮತ್ತು ಗಂಡ ಚಿಕ್ಕಯ್ಯ ನೆಟ್ಟ ಆಲದ ಮರಗಳು ಬೆಳೆದು ದೊಡ್ಡದಾಗಿ ರೆಂಬೆಕೊಂಬೆಗಳನ್ನು ಚಾಚಿಕೊಂಡಿದ್ದವು. ಯಾವುದೋ ಒಂದು ಕಾರಣಕ್ಕೆ ತಾನೇ ನೆಟ್ಟಿದ್ದ ಆಲದ ಮರದ ರೆಂಬೆಯನ್ನು ತಿಮ್ಮಕ್ಕನ ಗಂಡ ಚಿಕ್ಕಯ್ಯ ಕಡಿದುಬಿಟ್ಟಿದ್ದರು. ಈ ವಿಷಯ ತಿಳಿದು ಸ್ಥಳೀಯ ಪೋಲೀಸರು ಚಿಕ್ಕಯ್ಯನನ್ನು ಬಂಧಿಸಿದ್ದರು. ಇದರಿಂದ ತಿಮ್ಮಕ್ಕ ಗಾಬರಿಯಾಗಿ ಠಾಣೆಗೆ ಹೋಗಿ ಗಂಡನನ್ನು ಬಿಡಿ ಎಂದು ಬೇಡಿಕೊಂಡಿದ್ದರು. ಆದರೆ ಠಾಣೆಯವರು ಲೋಕೋಪಯೋಗಿ ಇಲಾಖೆ ನೆಟ್ಟ ಗಿಡವನ್ನು ನೀವೇ ನೆಟ್ಟಿದ್ದರೂ ಕೂಡಾ ಅದು ಸರ್ಕಾರದ ಆಸ್ತಿ. ಹಾಗಾಗಿ ಅದನ್ನು ಕಡಿದ ಕಾರಣದಿಂದಾಗಿ ಬಂಧಿಸಿದ್ದೇವೆ ಎಂದು ಹೇಳಿ ಒಂದು ದಿನ ಠಾಣೆಯಲ್ಲಿರಿಸಿಕೊಂಡು ನಂತರ ಇನ್ನು ಮುಂದೆ ಮರ ಕಡಿಯುವುದಿಲ್ಲ ಎಂಬ ಮುಚ್ಚಳಿಕೆ ಬರೆದುಕೊಟ್ಟ ನಂತರ ಬಿಡುಗಡೆ ಮಾಡಿದ್ದರು.