ರಾಮಕೃಷ್ಣ ದಾಸರಿ
ಶ್ರೀರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ಜರುಗಿತು. ಮಂತ್ರಾಲಯ ಮಠದಲ್ಲಿ ವಸಂತೋತ್ಸವ, ಪ್ರಹ್ಲಾದ ರಾಜರ ಉತ್ಸವ ಮೂರ್ತಿ ಮೆರವಣಿಗೆ, ಪೀಠಾಧಿಪತಿಗಳ ಅನುಗ್ರಹ ಸಂದೇಶ, ಮಹಾರಥೋತ್ಸವ ಸೇರಿ ಮೊದಲಾದ ಧಾರ್ಮಿಕ ವಿಧಿವಿಧಾನಗಳು, ಸಾಂಸ್ಕೃತಿಕ ಸಮಾರಂಭಗಳು ಅತ್ಯಂತ ವೈಭವೋಪೇತವಾಗಿ ಸೋಮವಾರ ನಡೆದವು.
ಉತ್ತರಾರಾಧನೆ ನಿಮಿತ್ತ ಪ್ರಾತಃಕಾಲದಲ್ಲಿ ನೈರ್ಮಾಲ್ಯ ವಿಸರ್ಜನೆ, ಉತ್ಸವ ರಾಯರ ಪಾದಪೂಜೆ ಮತ್ತು ಪಂಚಾಮೃತ ಅಭಿಷೇಕ, ಬಳಿಕ ಶ್ರೀರಂಗಂನ ವಿದ್ವಾನ್ ರಾಮಾಚಾರ್ ಅವರಿಂದ ಪ್ರವಚನ, ಗ್ರಂಥಗಳ ಪಾರಾಯಣ ಮತ್ತು ದಾಸವಾಣಿ ನಡೆದವು. ಇದೇ ವೇಳೆ ಶ್ರೀಗಳು ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ನವರತ್ನ ಖಚಿತ ಚಿನ್ನದ ಹೊದಿಕೆಯ ಅಲಂಕಾರವು ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು.ವಸಂತೋತ್ಸವದ ಸಂಭ್ರಮ: ಚಿನ್ನಾಭರಣ, ತರಹೇವಾರಿ ಪುಷ್ಪಗಳಿಂದ ಅಲಂಕೃತಗೊಂಡ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಶ್ರೀಮಠದಿಂದ ಗುರುಸಾರ್ವಭೌಮ ವಿದ್ಯಾಪೀಠಕ್ಕೆ ಕರೆದೊಯ್ದು, ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಅಲ್ಲಿಂದ ಮಧ್ವಮಾರ್ಗದ ಮೂಲಕ ಶ್ರೀಮಠಕ್ಕೆ ಮೆರವಣಿಗೆ ಸಾಗಿತು.
ನಂತರ ಸಕಲಾಲಂಕೃತ ರಥದಲ್ಲಿ ಉತ್ಸವಮೂರ್ತಿಯನ್ನಿಟ್ಟು ಉತ್ಸವ ಆಚರಿಸಲಾಯಿತು.
ಮಂತ್ರಾಲಯದಲ್ಲಿ ರಥೋತ್ಸವ ಸಾಗುವ ವೇಳೆ ಕರ್ನೂಲು ಜಿಲ್ಲೆಯ ಎಮ್ಮಿಗನೂರು ದೇವ ಎಂಬುವರು ಡ್ರೋನ್ ಬಳಸಿ ರಾಯರ ಚಿತ್ರ ಪ್ರದರ್ಶಿಸಿ, ರಥೋತ್ಸವದ ಮೇಲೆ ಪುಷ್ಪವೃಷ್ಠಿ ನೆರವೇರಿಸಿದರು. ರಥೋತ್ಸವ ಸಾಗುತ್ತಿದ್ದಾಗ ಶ್ರೀಗಳು ಹೆಲಿಕಾಪ್ಟರ್ ಆಗಮಿಸಿ ರಥದ ಮೇಲೆ ಪುಷ್ಪವೃಷ್ಠಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀಮಠದ ಪಂಡಿತರು, ವಿದ್ವಾಂಸರು ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತಸಾಗರವೇ ಸೇರಿತ್ತು.