ಕೆ. ಫಣಿರಾಜ್ ಕಳವಳ, 10ನೇ ಮೇ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ಗೋಷ್ಠಿಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ಶಿವಶಾಂತ ಮಂಗಲಭವನದಲ್ಲಿ ಹಮ್ಮಿಕೊಂಡಿದ್ದ 10ನೇ ಮೇ ಸಾಹಿತ್ಯ ಸಮ್ಮೇಳನದಲ್ಲಿ ಸಂವಿಧಾನ ಚಿಂತನೆಗಳು ಎನ್ನುವ ಮೊದಲ ಗೋಷ್ಠಿಯಲ್ಲಿ ಕೋಮುರಾಜಕಾರಣ ವಿಷಯದ ಕುರಿತು ಮಾತನಾಡಿದರು. ಸಂಘ ಪರಿವಾರವು ಎಲ್ಲ ವಲಯವನ್ನೂ ವ್ಯಾಪಿಸಿದ್ದು, ಈ ವರೆಗೆ ಆರೆಸ್ಸೆಸ್ 75 ಸಂಘಟನೆಗಳನ್ನು ಸ್ಥಾಪಿಸಿದೆ. ಇದರ ಪರಿಣಾಮವಾಗಿ ಹಿಂದೂ ರಾಷ್ಟ್ರವಾದದ ಪರಿಕಲ್ಪನೆ ಎಲ್ಲೆಡೆ ಬೇರೂರುತ್ತಿದೆ ಎಂದರು.
ಮತೀಯ ಮತ್ತು ಜಮೀನ್ದಾರಿ ವ್ಯವಸ್ಥೆ ಪರ ಇರುವ ಸಂಘ ಪರಿವಾರ, ಆರಂಭದಿಂದಲೇ ಸಂವಿಧಾನದ ವಿರೋಧಿ ಆಶಯಗಳನ್ನು ಹೊಂದಿದೆ. ಮುಸ್ಲಿಂ, ಕ್ರಿಶ್ಚಿಯನ್ನರ ಬಗ್ಗೆ ಸಮಾಜದಲ್ಲಿ ಭಯ ಮೂಡಿಸಿ, ಹಿಂದೂಗಳನ್ನು ಒಗ್ಗೂಡಿಸುವ ತಂತ್ರಗಾರಿಕೆಯನ್ನು ಮಾಡುವಲ್ಲಿ ಯಶಸ್ವಿಯಾದ ಪರಿಣಾಮ ಇಂದು ಬೆಳೆಯುತ್ತಿದೆ. 1940ರಲ್ಲಿ ಕೇವಲ ನೂರು ಶಾಖೆಗಳನ್ನು ಹೊಂದಿದ್ದ ಆರೆಸ್ಸೆಸ್, 2015ರ ಹೊತ್ತಿಗೆ 55,000 ಶಾಖೆಗಳನ್ನು ತೆರೆದಿದೆ. ನಿರಂತರವಾಗಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ವಿರುದ್ಧ ವಿದ್ರೋಹದ ಹೋರಾಟ ನಡೆಸುತ್ತಿರುವ ಕೆಳ ಮಟ್ಟದ ಸಂಘ ಪರಿವಾರದ ಕೆಲಸಗಳು ಮೇಲ್ನೋಟಕ್ಕೆ ಕಾಣುವುದಿಲ್ಲ. ಅದು ತಳಮಟ್ಟದಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ವಿಶ್ಲೇಷಿಸಿದರು.ದಲಿತ, ಬೌದ್ಧ, ಮುಸ್ಲಿಂ ಘಟಕಗಳನ್ನು ಸ್ಥಾಪಿಸಿರುವ ಆರೆಸ್ಸೆಸ್, ಕಾರ್ಮಿಕ ಹಾಗೂ ಶಿಕ್ಷಣ ವಲಯಕ್ಕೂ ಪ್ರವೇಶಿಸಿದೆ. ಅದರಲ್ಲೂ ಕೆಳವರ್ಗದ ಯುವಪೀಳಿಗೆಯ ತಲೆಯಲ್ಲಿ ಹಿಂದೂ ರಾಷ್ಟ್ರವಾದಿ ಯೋಚನಾಲಹರಿಯನ್ನು ತುಂಬಿ, ಹೋರಾಟಕ್ಕೂ ಆ ವರ್ಗದ ಯುವಕ- ಯುವತಿಯರನ್ನೇ ಕಳಿಸುವ ತಂತ್ರಗಾರಿಕೆ ಸಂಘ ಪರಿವಾರದ್ದು ಎಂದು ಹೇಳಿದ ಫಣಿರಾಜ್, ತಳಸಮುದಾಯದ ಯುವಕನೊಬ್ಬನನ್ನು ಹೋರಾಟಕ್ಕೆ ಹಚ್ಚುವ ಮೂಲಕ ಹಿಂದೂ ರಾಷ್ಟ್ರವಾದವನ್ನು ಮತ್ತಷ್ಟು ಪ್ರಖರಗೊಳಿಸುವ ಹುನ್ನಾರವು ‘ಕಾಂತಾರ’ ಚಿತ್ರದ ಮೂಲಕ ಕಾಣಬಹುದಾಗಿದೆ ಎಂದು ಕಿಡಿಕಾರಿದರು.
ಭಾರತದ ಸಂವಿಧಾನದಲ್ಲಿ ಒಬಿಸಿ ಅಥವಾ ದಲಿತರಿಗೆ ಸವಲತ್ತು ಕೊಟ್ಟಿರದಿದ್ದರೆ, ಹಿಂದೂ ಧರ್ಮ ಉಳಿಯುತ್ತಿರಲಿಲ್ಲ ಎನ್ನುವುದು ಬಿಜೆಪಿಗೆ ಗೊತ್ತಿಲ್ಲ. ನಿಖರವಾಗಿ ಹೇಳಬೇಕು ಎಂದರೆ ಹಿಂದೂ ಧರ್ಮದ ಬಗ್ಗೆ ಬಿಜೆಪಿಗೆ ಒಲವೇ ಇಲ್ಲ. ಅದೊಂದು ಮತಗಳಿಕೆಯ ಅಸ್ತ್ರವನ್ನಾಗಿ ಮಾಡಿಕೊಂಡು, ಅಧಿಕಾರಕ್ಕೆ ಬರುತ್ತಿದೆ ಎಂದರು.