ಹೊಸಕೋಟೆ: ದೇಶ ಸೇವೆ ಮಾಡುವ ಭಾರತೀಯ ಯೋಧರ ತ್ಯಾಗ ಹಾಗೂ ಬಲಿದಾನಕ್ಕೆ ನಾವು ಎಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರು ಮತ್ತು ಅವರ ಕುಟುಂಬಕ್ಕೆ ಗೌರವ ಸಮರ್ಪಣೆ ನಮ್ಮ ಕರ್ತವ್ಯ ಎಂದು ವಹ್ನಿಕುಲ ತಿಗಳ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ.ಸಿ.ಜಯರಾಜ್ ತಿಳಿಸಿದರು.
ತಂದೆ-ತಾಯಿ ಕುಟುಂಬದ ಸದಸ್ಯರನ್ನು ಬಿಟ್ಟು ದೇಶದ ಗಡಿ ಕಾಯುವ ಪ್ರತಿಯೊಬ್ಬ ಯೋಧ ಕೂಡ ನಮಗೆ ದೇವರ ಸಮಾನ. ದೇಶದ ಅಸಂಖ್ಯಾತ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ದೇಶ ಸೇವೆಗೆ ಕಳುಹಿಸಿ ಅವರನ್ನು ಕಳೆದುಕೊಂಡಿದ್ದಾರೆ. ಅವರೆಲ್ಲರನ್ನು ಗೌರವಿಸಬೇಕು. ಸಮಾಜದಲ್ಲಿ ಸ್ಥಿತಿವಂತರು ದುಂದುವೆಚ್ಚ ಮಾಡಿ ಆಚರಣೆ ಮಾಡುವ ಬದಲು ಮೃತ ಯೋಧರ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಹೂಡಿ ವಿಜಯ್ ಕುಮಾರ್ ಮಾತನಾಡಿ, ಗಾಳಿ ಮಳೆ ಲೆಕ್ಕಿಸದೆ ದೇಶ ಭಕ್ತಿಯನ್ನೆ ಉಸಿರಾಗಿಸಿಕೊಂಡು ಎದುರಾಳಿಗಳ ವಿರುದ್ದ ಹೋರಾಡಿ ಇತಿಹಾಸ ಸೃಷ್ಠಿಸುವ ವೀರ ಯೋಧರ ಸ್ಮರಣೆ ನಿತ್ಯ ನಿರಂತರವಾಗಬೇಕು. ಅವರ ಕುಟುಂಬಗಳಿಗೆ ಆತ್ಮಸ್ಥೆರ್ಯತುಂಬಬೇಕು. ಡಾ.ಸಿ.ಜಯರಾಜ್ ಅವರ ಕಾರ್ಯ ಇತರರಿಗೆ ಪ್ರೇರಣೆಯಾಗಿದೆ ಎಂದರು.ಇದೇ ಸಂಧರ್ಭದಲ್ಲಿ ಜಯರಾಜ್ ಪತ್ನಿ ಲಕ್ಷ್ಮೀ, ಪುತ್ರ ಸಚಿನ್, ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿವಿ.ಭೈರೇಗೌಡ, ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ ಎಚ್.ಎಂ.ಸುಬ್ಬರಾಜ್, ಉದ್ಯಮಿ ಸುಬಾಷ್ ಗೌಡ, ಯುವ ಬ್ರಿಗೇಡ್ ಸಂಚಾಲಕ ಆನಂದ್ ಮರಿಗೌಡ ಇತರರು ಹಾಜರಿದ್ದರು.
ಹೊಸಕೋಟೆಯಲ್ಲಿ ವಹ್ನಿಕುಲ ತಿಗಳ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ.ಸಿ.ಜಯರಾಜ್ ಹುಟ್ಟುಹಬ್ಬದ ಪ್ರಯುಕ್ತ ಹುತಾತ್ಮ ವೀರ ಯೋಧರ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಗೌರವಿಸಿದರು.