- ಸ್ವಾಮಿ ವಿವೇಕಾನಂದ ಮತ್ತು ನೇತಾಜಿ ಸುಭಾಷ್‌ಚಂದ್ರ ಬೋಸ್ ಜಯಂತ್ಯುತ್ಸವ
ವಿವೇಕಾನಂದರು ಮತ್ತು ಸುಭಾಷ್‌ಚಂದ್ರ ಬೋಸ್‌ರವರ ತ್ಯಾಗ, ಬಲಿದಾನದ ಪರಿಣಾಮ ಇಂದಿನ ಯುವ ಜನತೆ ಸನ್ನಡತೆ ದಾರಿಯಲ್ಲಿ ಸಾಗುತ್ತಿದೆ. ಅವರ ಆದರ್ಶಗಳು ಸಮಾಜದ ಒಳಿತಿಗೆ ಸ್ಪೂರ್ತಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ. ಹನುಮಂತಪ್ಪ ಹೇಳಿದರು. ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ಭೂಮಿಕಾ ಎಂಟರ್ ಟೈನರ್ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಸ್ವಾಮಿ ವಿವೇಕಾನಂದ ಮತ್ತು ನೇತಾಜಿ ಸುಭಾಷ್‌ಚಂದ್ರ ಬೋಸ್ ಜಯಂತ್ಯುತ್ಸವ ಹಾಗೂ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರದ ಹಿತ ಚಿಂತನೆಗಾಗಿ ತಮ್ಮ ಸರ್ವಸ್ವ ಜೀವನವನ್ನು ಮುಡಿಪಿಟ್ಟ ವಿವೇಕಾನಂದ, ಸುಭಾಷ್‌ಚಂದ್ರ ಬೋಸ್ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿ ದೇಶದ ಉಜ್ವಲ ಭವಿಷ್ಯಕ್ಕೆ ತಮ್ಮದೇ ಶೈಲಿಯಲ್ಲಿ ಹೋರಾಡಿದವರು. ಇವರ ತ್ಯಾಗ, ಬಲಿದಾನ ಇಂದಿನ ಯುವ ಜನತೆಗೆ ಆದರ್ಶವಾಗಿದ್ದು ಈ ಮಹಾನೀಯರ ಸಿದ್ದಾಂತ ಪ್ರೇರಣೆಯಾಗಬೇಕು ಎಂದರು.ದೇಶದ ನಾಲ್ಕನೇ ಅಂಗ ಪತ್ರಿಕಾರಂಗ. ಈ ಕ್ಷೇತ್ರ ಜನಸಾಮಾನ್ಯರಿಗೆ ಸ್ಪಂದಿಸಲು ಪ್ರಾಮಾಣಿಕ, ನಿಷ್ಟೆಯಿಂದ ಕರ್ತವ್ಯ ನಿರ್ವಹಿಸಬೇಕು. ಆದರೆ, ಕೆಲವು ಮಾಧ್ಯಮಗಳು ಒಂದು ಪಕ್ಷ, ಧರ್ಮ ಹಾಗೂ ಸಮುದಾಯಕ್ಕೆ ಸೀಮಿತವಾಗಿವೆ. ಈ ಹೊರತಾಗಿ ಜನರ ಕಷ್ಟ ಸುಖಗಳಿಗೆ ಸಹಕರಿಸಲು ನೈಜ ಸುದ್ದಿ ಪ್ರಸಾರಗೊಳಿಸಿ ನ್ಯಾಯ ಒದಗಿಸುವುದು ಪತ್ರಿಕಾಧರ್ಮ ಎಂದು ಹೇಳಿದರು.ಪತ್ರಿಕಾ ವೃತ್ತಿಯಲ್ಲಿ ಕಾರ್ಯನಿರ್ವಹಿಸುವವರು ಜನರ ಸಮಸ್ಯೆಗೆ ಗಮನ ಸೆಳೆಯಬೇಕು. ಸಾಮಾನ್ಯರ ಕುಂದು ಕೊರತೆ ಗಳನ್ನು ನ್ಯಾಯಬದ್ಧವಾಗಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನವಿರಬೇಕು. ಸಮಾಜವನ್ನು ತಿದ್ದುವ ಪತ್ರಕರ್ತರು ಆಮಿಷಕ್ಕೆ ಒಳಗಾಗದೇ ನ್ಯಾಯ ಸಮಂಜಸವಾಗಿ ಪರಿಶೀಲಿಸಿ ನೊಂದವರ ಪಾಲಿಗೆ ನ್ಯಾಯ ಒದಗಿಸಿ ಇತ್ಯರ್ಥಗೊಳಿಸಬೇಕು ಎಂದರು.ಜಿಲ್ಲಾಸ್ಪತ್ರೆ ಸರ್ಜನ್ ಡಾ. ಚಂದ್ರಶೇಖರ್ ಮಾತನಾಡಿ, ವಿವೇಕಾನಂದರು ಮತ್ತು ಸುಭಾಶ್‌ಚಂದ್ರ ಅಗರ್ಭ ಶ್ರೀಮಂತಿಕೆ ಕುಟುಂಬದಲ್ಲಿ ಜನಿಸಿದರೂ ರಾಷ್ಟ್ರದ ಏಕತೆಗಾಗಿ ಶ್ರೀಮಂತ ಜೀವನ ತ್ಯಜಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಶ್ರೇಷ್ಟಮಾನ್ಯರು ಎಂದು ಬಣ್ಣಿಸಿದರು.ಹದಿನೆಂಟನೇ ಶತಮಾನದಲ್ಲಿ ವಿವೇಕಾನಂದರು ಅಮೇರಿಕದ ಸರ್ವಸಮ್ಮೇಳನಕ್ಕೆ ತೆರಳಿ ಭಾರತೀಯ ಧರ್ಮ ಪರಂಪರೆ ಇಡೀ ಜಗತ್ತಿಗೆ ಪರಿಚಯಿಸಿದರು. ಸುಭಾಶ್‌ಚಂದ್ರ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಸೈನಿಕ ತಂಡವನ್ನು ಕಟ್ಟಿಕೊಂಡು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ ಅಪರೂಪದ ನಾಯಕ ಎಂದು ತಿಳಿಸಿದರು.ತಾಲೂಕು ಆರೋಗ್ಯಾಧಿಕಾರಿ ಡಾ. ಸೀಮಾ ಮಾತನಾಡಿ, ಆರೋಗ್ಯ ತಪಾಸಣೆ ಪ್ರತಿ ವ್ಯಕ್ತಿಗೂ ಅತ್ಯವಶ್ಯಕ. ಕನಿಷ್ಠ ಆರು ತಿಂಗಳಿಗೊಮ್ಮೆ ಮಧುಮೇಹ ತಪಾಸಣೆ, ಮೂರು ತಿಂಗಳಿಮ್ಮೆ ಆರೋಗ್ಯವಂತರು ರಕ್ತದಾನ ಮಾಡಿದರೆ, ಶರೀರ ಹಲವು ರೋಗರುಜಿನಗಳನ್ನು ತಡೆಗಟ್ಟಿ ರಕ್ತದಾನಿಗಳು ಆರೋಗ್ಯ ಜೀವನ ಡೆಸಬಹುದು ಎಂದು ಕಿವಿಮಾತು ಹೇಳಿದರು.ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಎನ್.ಕೆ.ಭಾಗ್ಯಲಕ್ಷ್ಮೀ ಮಾತನಾಡಿ, ಮಾನವ ಜೀವನ ಒಂದಿಲ್ಲೊಂದು ಒತ್ತಡದಿಂದ ಬಳಲಿ ಆರೋಗ್ಯ ಹದಗೆಡಿಸಿಕೊಂಡಿದ್ದಾನೆ. ಉತ್ತಮ ಆರೋಗ್ಯ ಮತ್ತು ಒತ್ತಡ ನಿವಾರಣೆಗೆ ವ್ಯಾಯಾಮ ಜೊತೆಗೆ ಆಧಾತ್ಮಕ ಜ್ಞಾನ ಬೆಳೆಸಿಕೊಳ್ಳಬೇಕು. ಇದು ಮನುಷ್ಯನ ಮಾನಸಿಕ ಖಿನ್ನತೆಯಿಂದ ಹೊರತರಲಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭೂಮಿಕಾ ಸಂಸ್ಥೆ ಸಂಸ್ಥಾಪಕ ಅನಿಲ್‌ಆನಂದ್ ಅವರು, ರಾಷ್ಟ್ರದ ಮಹಾನೀಯರ ಜಯಂತಿಯಂದು ಸಾರ್ವಜನಿಕರಿಗೆ ಅನುಕೂಲವಾಗಲು ಉಚಿತ ಆರೋಗ್ಯ ತಪಾಸಣೆ, ನೇತ್ರದಾನ, ದೇಹದಾನ ನೋಂದಣಿ, ರಕ್ತದಾನ ಶಿಬಿರ ಹಾಗೂ ಉಚಿತ ಕನ್ನಡ ಮತ್ತು ಔಷಧಿ ವಿತರಣೆ ನಡೆಸಿ ಸಾಮಾಜಿಕ ಕಾರ್ಯಕ್ರಮವನ್ನು ಕಳೆದ ನಾಲ್ಕು ವರ್ಷಗಳಿಂದ ನಡೆಸಲಾಗುತ್ತಿದೆ ಎಂದು ಹೇಳಿದರು.ಇದೇ ವೇಳೆ ವಿವಿಧ ಆರೋಗ್ಯ ತಪಾಸಣೆಯಲ್ಲಿ 250ಕ್ಕೂ ಮಂದಿ ಭಾಗವಹಿಸಿದ್ದರು. ಬಳಿಕ ಅವಶ್ಯವುಳ್ಳ ದೃಷ್ಟಿ ದೋಷದವರಿಗೆ ಕನ್ನಡಕ ವ್ಯವಸ್ಥೆ ಕಲ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿ ಡಾ. ಹರೀಶ್‌ಬಾಬು, ಪ್ರೆಸ್ ಕ್ಲಬ್ ಅಧ್ಯಕ್ಷ ಸಿ.ಡಿ. ಚಂದ್ರೇಗೌಡ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಮೋಹನ್, ಮಹಾಲಕ್ಷ್ಮೀ ಮಂಜಪ್ಪ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮಂಜುನಾಥ್, ರಮೇಶ್, ಮುಖಂಡರಾದ ಕುಮಾರ್‌ಶೆಟ್ಟಿ, ಹುಣಸೇಮಕ್ಕಿ ಲಕ್ಷ್ಮಣ್, ಪೂರ್ಣಿಮಾ, ಅನ್ವರ್, ಕಬ್ಬಿಕೆರೆ ಮೋಹನ್‌ಕುಮಾರ್, ಅಂಬುಲೆನ್ಸ್ ಪುನೀತ್, ಸತೀಶ್ ಉಪಸ್ಥಿತರಿದ್ದರು. 5 ಕೆಸಿಕೆಎಂ 1ಚಿಕ್ಕಮಗಳೂರಿನ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ವಿವೇಕಾನಂದ ಮತ್ತು ನೇತಾಜಿ ಸುಭಾಷ್‌ಚಂದ್ರ ಬೋಸ್ ಜಯಂತ್ಯೋತ್ಸವ ಹಾಗೂ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ನ್ಯಾ. ವಿ. ಹನುಮಂತಪ್ಪ ಉದ್ಘಾಟಿಸಿದರು. ಅನಿಲ್‌ಆನಂದ್, ಚಂದ್ರೇಗೌಡ, ಡಾ. ಚಂದ್ರಶೇಖರ್, ಡಾ. ಸೀಮಾ ಇದ್ದರು.