ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಗ್ರಾಮದ ಬಳಿಯ ಆನೆಮಡುವಿನ ಕೆರೆ ಪ್ರದೇಶದ ಗುಂದಿ ತೋಟ ಪ್ರದೇಶದ ಎನ್. ಜಿ. ಪ್ರಶಾಂತ್ ಎಂಬ ರೈತರ ಜಮೀನಿನಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಶುಕ್ರವಾರ ರಾತ್ರಿ ಐದು ಹುಲಿಗಳು ಒಂದರ ಹಿಂದೆ ಒಂದರಂತೆ ಹಾದು ಹೋಗುವ ದೃಶ್ಯ ಸೆರೆಯಾಗಿದೆ, ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಹುಲಿಗಳನ್ನು ಸೆರೆ ಹಿಡಿದು ಕಾಡಿಗೆ ಬಿಡಬೇಕೆಂದು ಅರಣ್ಯಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಈ ಪ್ರದೇಶದಲ್ಲಿ ಕರಿಕಲ್ಲು ಗಣಿಗಾರಿಕೆ ನಡೆಸಿದ ಕ್ವಾರಿಗಳಿದ್ದು, ಪಕ್ಕದಲ್ಲೇ ಆನೆಮಡುವಿನ ಕೆರೆಯಿದೆ. ಕುರುಚಲು ಪ್ರದೇಶ ಇರುವುದರಿಂದ ಹುಲಿಗಳ ವಾಸಕ್ಕೆ ಯೋಗ್ಯ ಸ್ಥಳವಾಗಿದ್ದರು, ಆಗಾಗ ಕಾಣಿಸಿಕೊಳ್ಳುತ್ತಿವೆ. ಗ್ರಾಮಸ್ಥರು ಅನೇಕ ಬಾರಿ ಹುಲಿಗಳ ಸೆರೆಗೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಇಲಾಖೆ ಅಧಿಕಾರಿಗಳು ಹುಲಿಗಳ ಸೆರೆಗೆ ಯಾವುದೇ ಕ್ರಮ ವಹಿಸಿಲ್ಲ ಎಂದು ರೈತರು ಆರೋಪ ಮಾಡಿದ್ದಾರೆ.ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಹುಲಿ ಚಿರತೆ ಹಗಲು ಹಾಗೂ ರಾತ್ರಿ ಎನ್ನದೆ ಸಾಕು ಪ್ರಾಣಿಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿರುವ ಬಗ್ಗೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ನಂಜೇದೇವನಪುರ, ವೀರನಪುರ, ತಮ್ಮಡಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಉಡಿಗಾಲ, ಕಲ್ಪುರ, ದೇಶಿಗೌಡನಪುರ, ಕಾಳನಹುಂಡಿ, ಹಳೆಪುರ ಹಾಗೂ ಹರವೆ ಗ್ರಾಮದ ಸುತ್ತಮುತ್ತಲಿನಲ್ಲಿ ನಿರಂತರ ದಾಳಿ ಆಗುತ್ತಿದೆ ಎಂದಿದ್ದಾರೆ.
ಇತ್ತೀಚಿನ ಎರಡು ತಿಂಗಳಿಂದ ನಂಜೇ ದೇವನಪುರ ಗ್ರಾಮ ಹಾಗೂ ಜಮೀನಿನಲ್ಲಿ ಹುಲಿಯ ಹೆಜ್ಜೆಗುರುತು, ಚಲನವಲನ ಚಿತ್ರೀಕರಣವನ್ನು ಖಾಸಗಿ ಹಾಗೂ ಅರಣ್ಯ ಅಧಿಕಾರಿಗಳ ಸಮಕ್ಷಮದಲ್ಲಿ ನಿರಂತರವಾಗಿ ದಾಖಲಾತಿ ಆಗುತ್ತಿತ್ತು ಅದರಂತೆ ಜಿಲ್ಲಾಡಳಿತ ಹಾಗೂ ಬಿ ಆರ್ ಟಿ ಸಂರಕ್ಷಣಾಧಿಕಾರಿಗಳಿಗೆ ಲಿಖಿತವಾಗಿ ಹಾಗೂ ದೂರವಾಣಿ ಮುಖಾಂತರ ತಿಳಿಸಲಾಗುತ್ತಿತ್ತು. ಆದರೂ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ರೈತರು ಆರೋಪಿಸಿದ್ದಾರೆ,ಶುಕ್ರವಾರ ರಾತ್ರಿ ೭:೩೦ಕ್ಕೆ ದೂರವಾಣಿ ಮುಖಾಂತರ ಉಪ ಸಂರಕ್ಷಣಾಧಿಕಾರಿಗಳಿಗೆ ತಕ್ಷಣಕ್ಕೆ ಮಾಹಿತಿ ನೀಡಲಾಗಿತ್ತು ಅವರು ತುಂಬಾ ವಿಳಂಬವಾಗಿ ರಾತ್ರಿ ೧೧: ೩೦ ರ ಸಮಯದಲ್ಲಿ ಗ್ರಾಮಕ್ಕೆ ಆಗಮಿಸಿದ್ದಾರೆ ಎಂದು ರೈತ ಜಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಡ್ರೋನ್ ಕ್ಯಾಮೆರಾದ ಮುಖಾಂತರ ತಕ್ಷಣಕ್ಕೆ ಹುಲಿ ಸೆರೆ ಹಿಡಿಯಲು ಸ್ಥಳ ಹಾಗೂ ಸಂಖ್ಯೆಯನ್ನು ಪತ್ತೆ ಮಾಡುವುದು. ತಾತ್ಕಾಲಿಕ ಅರಣ್ಯ ಸಂರಕ್ಷಣಾ ಠಾಣೆಯನ್ನು ಗ್ರಾಮದಲ್ಲಿ ಸ್ಥಾಪಿಸುವುದು. ರೈತಾಪಿ ಹಾಗೂ ಜನಸಾಮಾನ್ಯರ ಜೀವನ ನಿರ್ವಹಣೆಗೆ ಅಗತ್ಯ ವಸ್ತುಗಳನ್ನು ಜಿಲ್ಲಾ ಆಡಳಿತದಿಂದ ಪೂರೈಕೆ ಮಾಡುವುದು, ರೈತಾಪಿ ಸಾಕುಪ್ರಾಣಿಗಳಿಗೆ ಮೇವು ಪೂರೈಕೆ ಹಾಗೂ ನಿರ್ವಹಣೆ. ಪ್ರತಿ ತಿಂಗಳಿಗೊಮ್ಮೆ ಗ್ರಾಮ ಸಭೆಗೆ ಬಿ ಆರ್ ಟಿ ಸಂರಕ್ಷಣಾಧಿಕಾರಿಗಳೇ ಗ್ರಾಮ ಸಭೆಯಲ್ಲಿ ಖುದ್ದು ಹಾಜರಾತಿ. ಅರಣ್ಯ ಕಾಯ್ದೆಯಲ್ಲಿ ರೈತಾಪಿ ಹಾಗೂ ಜನಸಾಮಾನ್ಯರಿಗೆ ವಿನಾಯಿತಿ. ರೈತಾಪಿ ಜನರು ಜಮೀನಿನ ಕೆಲಸ ನಿರ್ವಹಣೆಯಲ್ಲಿ ದಾಳಿಯಾದರೆ ಅಗತ್ಯ ರಕ್ಷಣೆಗೆ ಬಂದೂಕಿಗೆ ಅನುಮತಿ ನೀಡಬೇಕೆಂದು ಕುಮಾರಸ್ವಾಮಿ, ಶಿವು ಹಾಗೂ ಇತರ ರೈತರು ಒತ್ತಾಯಿಸಿದ್ದಾರೆ.ಬೇಡರಪುರದಲ್ಲಿ ಹುಲಿ ದಾಳಿಗೆ ಹಸು ಬಲಿ:
ತಾಲೂಕಿನ ಬೇಡರಪುರ ಗ್ರಾಮದ ಬಸವಣ್ಣ ಎಂಬುವರ ಜಮೀನಿನಲ್ಲಿ ಹುಲಿ ದಾಳಿಯಿಂದ ಹಸು ಸಾವಿಗೀಡಾಗಿದೆ. ಶುಕ್ರವಾರ ತಡರಾತ್ರಿ ಹುಲಿ ದಾಳಿ ನಡೆಸಿ ಹಸುವನ್ನು ಕೊಂದಿದೆ.