ಶಾಲೆ ಪ್ರಾರಂಭೋತ್ಸವ । ಮಕ್ಕಳ ಶೈಕ್ಷಣಿಕ ವರ್ಷದ ಆರಂಭ । ಪಠ್ಯ ಪುಸ್ತಕ, ಶಾಲಾ ಸಮವಸ್ತ್ರ ವಿತರಣೆ
ಪಿಎಂಶ್ರೀ ಯೋಜನೆ ಶಾಲೆಗಳನ್ನು ಮೇಲ್ದರ್ಜೆಗೇರಿಸುವ ಮತ್ತು ಅತ್ಯಾಧುನಿಕ ಮಾದರಿಯಲ್ಲಿ ಮಕ್ಕಳಿಗೆ ಬೋಧನಾ ಸೌಲಭ್ಯ ಕಲ್ಪಿಸುವುದು ಇದರ ಆಶಯವಾಗಿದ್ದು, ಈ ಯೋಜನೆ ಮೂಲಕ ಶಾಲೆಗೆ ಹಲವು ಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪುಷ್ಪಾ ಹೇಳಿದರು.
ಪಟ್ಟಣದ ಹಳೇಸೊರಬ ಗ್ರಾಮದ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೨೦೨೫-೨೬ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಮಕ್ಕಳಿಗೆ ಪುಸ್ತಕ ಮತ್ತು ಸಮವಸ್ತ್ರ ವಿತರಿಸಿ ಮಾತನಾಡಿದರು.ತಾಲೂಕಿನಲ್ಲಿ ಹಳೇಸೊರಬ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಎಣ್ಣೆಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಪಿಎಂಶ್ರೀ ಯೋಜನೆಗಳಿಗೆ ಒಳಪಡುತ್ತವೆ. ಕಳೆದ ೨ ವರ್ಷಗಳಿಂದ ಪ್ರಾರಂಭವಾದ ಈ ಯೋಜನೆಗೆ ಪ್ರತಿ ವರ್ಷ ೨೦ ರಿಂದ ೨೫ ಲಕ್ಷ ರೂ. ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುತ್ತದೆ. ಇದನ್ನು ಶಾಲಾ ನಿರ್ವಹಣೆ ಸೇರಿದಂತೆ ಹಲವು ಮೂಲ ಸೌಲಭ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದ ಅವರು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಇದರ ಆಶಯವಾಗಿದೆ ಎಂದು ಹೇಳಿದರು.
ತಾಲೂಕಿನ ಎಲ್ಲಾ ಶಾಲೆಗಳಲ್ಲೂ ಶಾಲಾ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಎರಡು ತಿಂಗಳ ರಜೆ ಬಳಿಕ ಮಕ್ಕಳು ಶಾಲೆಗೆ ಆಗಮನದ ವೇಳೆ ಹೊಸ ಉಡುಪುಗಳನ್ನು ತೊಟ್ಟು ಉತ್ಸಾಹದಿಂದ ಆಗಮಿಸಿದ್ದರು. ಶಿಕ್ಷಕರು ಮಕ್ಕಳಿಗೆ ಹೂ ಮತ್ತು ಸಿಹಿ ನೀಡಿ ಸ್ವಾಗತಿಸಿದರು. ಶಾಲಾಭಿವೃದ್ಧಿ ಸಮಿತಿಯವರು ಉತ್ತಮ ಸಹಕಾರ ನೀಡಿದರು.