ಸಮಾಜ ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಸೇವೆ ಅನನ್ಯ: ಪ್ರಶಾಂತ ಶೆಟ್ಟಿ ಮೆಚ್ಚುಗೆ

KannadaprabhaNewsNetwork |  
Published : Sep 24, 2025, 01:00 AM IST
ನರಸಿಹಂರಾಜಪುರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರ ದಂಪತಿಗಳನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ನರಸಿಂಹರಾಜಪುರ, ಸಮಾಜದ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅನನ್ಯವಾಗಿದೆ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

- ಪಟ್ಟಣ ಪಂಚಾಯಿತಿಯಲ್ಲಿ ಪೌರ ಕಾರ್ಮಿಕರ ದಿನಾಚರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಸಮಾಜದ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅನನ್ಯವಾಗಿದೆ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣ ಪಂಚಾಯಿತಿಯಲ್ಲಿ ಮಂಗಳವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿ ಕಳೆದ 15 ವರ್ಷ ಗಳಿಂದ ಪೌರಕಾರ್ಮಿಕರ ದಿನಾಚರಣೆ ಆಯೋಜಿಸುವ ಮೂಲಕ ಪೌರಕಾರ್ಮಿಕರ ಸೇವೆ, ಸಮಾಜಕ್ಕೆ ಅವರ ಕೊಡುಗೆ ಗುರುತಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು.

ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ, ಜನರಿಗೆ ಅಗತ್ಯ ಮೂಲ ಸೌಲಭ್ಯವಾಗಿರುವ ಕುಡಿಯುವ ನೀರಿನ ಸರಬರಾಜು ಮಾಡುವಲ್ಲಿ ಪೌರಕಾರ್ಮಿಕರು ಮತ್ತು ನೀರು ಸರಬರಾಜುದಾರರ ಕೊಡುಗೆ ಅಪಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2 ಬಾರಿ ಪೌರ ಕಾರ್ಮಿಕರ ಸೇವೆಯನ್ನು ಕಾಯಂ ಮಾಡಿದೆ. ಉಳಿದ ಪೌರ ಕಾರ್ಮಿಕರ ಸೇವೆಯನ್ನು ಕಾಯಂ ಮಾಡುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಮಾತನಾಡಿ, ಪಟ್ಟಣದ ಸ್ವಚ್ಛತೆ ಕಾಪಾಡಿ ಸಮಾಜದ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರ ತ್ಯಾಗ ಪರಿಶ್ರಮ ಗುರುತಿಸಲು ಕಳೆದ 15 ವರ್ಷಗಳಿಂದ ರಾಜ್ಯದಾದ್ಯಂತ ಸೆ.23 ರಂದು ಪೌರಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತಿದೆ. ಸರ್ಕಾರ ಪೌರ ಕಾರ್ಮಿಕರ ಸೇವೆಯನ್ನು ಹಂತಹಂತವಾಗಿ ಕಾಯಂ ಮಾಡಿದೆ. ಆಶ್ರಯ ಬಡಾವಣೆಗಳಲ್ಲಿ ಪೌರಕಾರ್ಮಿಕರಿಗೆ ನಿವೇಶನ ಮೀಸಲಿಡುವ ಸೌಲಭ್ಯ, ಗೃಹ ಭಾಗ್ಯ ಯೋಜನೆ ಯಡಿ ಮನೆ ನಿರ್ಮಿಸಿಕೊಳ್ಳಲು 7 ಲಕ್ಷ ನೀಡುವ ಯೋಜನೆ ಜಾರಿಗೆ ತಂದಿದೆ. ಪೌರ ಕಾರ್ಮಿಕರಿಗೆ ಜೀವ ವಿಮಾ ಸೌಲಭ್ಯ, ಬೆಳಗಿನ ಉಪಹಾರ ಸೌಲಭ್ಯ, 7 ಸಾವಿರ ವಿಶೇಷ ಭತ್ಯೆ ಸೌಲಭ್ಯವಿದೆ. ಉಚಿತ ಆರೋಗ್ಯ ತಪಾಸಣಾ ಸೌಲಭ್ಯ, ಜ್ಯೋತಿ ಸಂಜೀವಿನಿ ಯೋಜನೆ, ಗುಂಪು ವಿಮಾ ಸೌಲಭ್ಯಗಳು ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪಪಂ ಅಧ್ಯಕ್ಷೆ ಜುಬೇದಾ ಮಾತನಾಡಿ, ಪೌರಕಾರ್ಮಿಕರು ಸ್ವಚ್ಛತಾ ಯೋಧರಾಗಿ ಕಾರ್ಯ ನಿರ್ವಹಿಸು ತ್ತಿದ್ದಾರೆ. ಮಳೆ,ಚಳಿ, ಬಿಸಿಲು ಲೆಕ್ಕಿಸದೆ ಪಟ್ಟಣದ ಸ್ವಚ್ಛತೆಯಲ್ಲಿ ಪ್ರತಿನಿತ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಕಸಮುಕ್ತ ನಗರ ಗಳಲ್ಲಿ ನರಸಿಂಹರಾಜಪುರ ರಾಜ್ಯದಲ್ಲಿಯೇ 67 ನೇ ಸ್ಥಾನ ಪಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ 11 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರ ಸೇವೆಯನ್ನು ಕಾಯಂ ಮಾಡಿದ್ದಾರೆ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಮುಕುಂದ ಮಾತನಾಡಿ, ಇಡೀ ಪಟ್ಟಣ ಮಲಗಿರುವ ಸಮಯದಲ್ಲಿ ಪೌರಕಾರ್ಮಿಕರು ತಮ್ಮ ಕೆಲಸ ಪ್ರಾರಂಭ ಮಾಡುತ್ತಾರೆ. ಕೋವಿಡ್ ಸಂದರ್ಭದಲ್ಲಿ ಪೌರ ಕಾರ್ಮಿಕರು ಸಲ್ಲಿಸಿದ ಸೇವೆ ಮರೆಯುವಂತಿಲ್ಲ ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಉಮಾಕೇಶವ್, ಸದಸ್ಯರಾದ ಪಿ.ಜೆ.ಶೋಜಾ, ಕುಮಾರಸ್ವಾಮಿ, ಸುರಯ್ಯಬಾನು, ರೇಖಾ, ರೀನಾ, ಸೈಯದ್ ವಸೀಂ, ಪೌರನೌಕರರ ಸಂಘದ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಶ್ರೀನಿವಾಸ್, ರಕ್ಷಿತಾ, ಲಕ್ಷಣಗೌಡ, ಚಂದ್ರಶೇಖರ್ ಇದ್ದರು.

ಎಲ್ಲಾ ಪೌರಕಾರ್ಮಿಕ ದಂಪತಿಗಳನ್ನು ಸನ್ಮಾನಿಸಲಾಯಿತು. ಪೌರ ಕಾರ್ಮಿಕ ದಿನಾಚರಣೆ ಪ್ರಯುಕ್ತ 2 ದಿನಗಳ ಕಾಲ ಆಯೋಜಿಸಿದ್ದ ಆಟೋಟ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಂಗಳವಾರ ಬೆಳಿಗ್ಗೆ ಪೌರ ಕಾರ್ಮಿಕರು ಹಾಗೂ ಕುಟುಂಬದವರಿಗೆ ಸರ್ಕಾರಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸಿದರು.

PREV

Recommended Stories

ಪರ್ವ ಅಂತ್ಯ - ಎಸ್.ಎಲ್. ಭೈರಪ್ಪ ನಿಧನ । ಬೆಂಗಳೂರಲ್ಲಿ ಮಧ್ಯಾಹ್ನವರೆಗೆ ಅಂತಿಮ ದರ್ಶನ
ಬ್ಯಾಂಕರ್‌ಗಳು ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳಿ