ಕನ್ನಡಪ್ರಭ ವಾರ್ತೆ ಹಾಸನ
ಕೆಡಿಪಿ ಸಭೆ ಎಂದರೆ ಕೇವಲ ಅಂಕಿ ಅಂಶಗಳ ಲೆಕ್ಕಾಚಾರವಲ್ಲ. ಕಾರ್ಯಕ್ರಮಗಳಿಂದ ಜನರಿಗೆ ನಿಜವಾಗಿಯೂ ಪ್ರಯೋಜನ ಆಗುತ್ತಿದೆಯೇ ಅನ್ನೋದೇ ಮುಖ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅಧಿಕಾರಿಗಳಿಗೆ ಎಚ್ಚರಿಸಿದರು.ಜಿಲ್ಲಾ ಪಂಚಾಯ್ತಿಯ ಹೊಯ್ಸಳ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಸುತ್ತಿ-ಬಳಸಿ ಉತ್ತರ ಕೊಡಬೇಡಿ. ನೇರ ಪ್ರಶ್ನೆಗೆ ನೇರ ಉತ್ತರ ಕೊಡಿ. ಪುಸ್ತಕದಲ್ಲಿ ಎಷ್ಟು ಹಣ ಬಿಡುಗಡೆ ಆಯ್ತು, ಎಷ್ಟು ಖರ್ಚಾಯ್ತು ಅಷ್ಟೇ ಬರೆದರೆ ಅದೇ ಅಭಿವೃದ್ಧಿ ಅಂತಲ್ಲ. ತೆರಿಗೆದಾರ ಜನರಿಗೆ ಎಷ್ಟು ಲಾಭವಾಯ್ತು ಅನ್ನೋ ಕಲ್ಪನೆಯೇ ಅಧಿಕಾರಿಗಳಿಗೆ ಇಲ್ಲ ಎಂದು ಬೈರೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯ ಪ್ರಮುಖ ತಿರುವು ಕೃಷಿ ಇಲಾಖೆಯ ವರದಿಯಲ್ಲಿ ಕಂಡುಬಂತು. ೫೬೫೫ ಹೆಕ್ಟೇರ್ ಮೆಕ್ಕೆಜೋಳ ಬೆಳೆಗೆ ವ್ಯಾಪಿಸಿರುವ ಬಿಳಿ ಸುಳಿ ರೋಗದ ಬಗ್ಗೆ ಅಧಿಕಾರಿಗಳು ಕೇವಲ ಅಂಕಿ ಅಂಶ ಮಂಡಿಸಿದ್ದಕ್ಕೆ ಸಚಿವರು ಗರಂ ಆಗಿ, “ಇಷ್ಟು ಕೃಷಿ ವಿಶ್ವವಿದ್ಯಾಲಯಗಳು, ತಂತ್ರಜ್ಞಾನ ಇರುವಾಗಲೂ ರೋಗಕ್ಕೆ ಕಾರಣ ತಿಳಿದಿಲ್ಲ ಅಂದ್ರೆ ಏನರ್ಥ, ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೆ ವರದಿ ಕೊಟ್ಟರೆ ರೈತರಿಗೆ ಪ್ರಯೋಜನವಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.ಬ್ಯಾನರ್ ಹಿಡಿದು ಫೋಟೋ ತೆಗೆಯೋದನ್ನೇ ಅರಿವು ಅಂದುಕೊಳ್ಳಬೇಡಿ. ರೈತರ ಹೊಲಕ್ಕೆ ಹೋಗಿ ಬೀಜೋಪಚಾರ, ಬೆಳೆ ಪರಿವರ್ತನೆ ಬಗ್ಗೆ ನೇರವಾಗಿ ಮಾಹಿತಿ ನೀಡಿ ಎಂದು ಸ್ಪಷ್ಟ ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ೧೮,೦೦೦ ಕುಟುಂಬಗಳ ಹೆಸರಲ್ಲಿ ಬಿಪಿಎಲ್ ಪಡಿತರ ಚೀಟಿಗಳು ಇದ್ದರೂ ಸತತ ಮೂರು ತಿಂಗಳಿಂದ ರೇಷನ್ ಸಿಗದೇ ಇದ್ದ ವಿಚಾರದ ಮೇಲೂ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಫೀಲ್ಡ್ ವೆರಿಫಿಕೇಶನ್ ಏಕೆ ಮಾಡಿಲ್ಲ? ಜನರಿಗೆ ಆಹಾರ ಸಿಗದೇ ಇದ್ದಾಗ ಅಧಿಕಾರಿಗಳು ಏನು ಮಾಡ್ತಾ ಇದೀರಾ? ಎಂದು ಪ್ರಶ್ನಿಸಿದರು. ಪಶುಸಂಗೋಪನಾ ಇಲಾಖೆಯ ಮೇಲೂ ಸಚಿವ ಬೈರೇಗೌಡರ ಅಸಮಾಧಾನ ವ್ಯಕ್ತವಾಯಿತು. “ಖಾಸಗಿ ಕಂಪೆನಿಗಳು ೫ ರು. ಲಾಭದಲ್ಲಿ ಹಾಲು ಖರೀದಿಸುತ್ತವೆ. ಆದರೆ ಸರ್ಕಾರಿ ಡೇರಿಗಳು ೨೦ ರು. ಮಾರ್ಜಿನ್ ಇಟ್ಟರೂ ನಷ್ಟದಲ್ಲಿ ಇವೆ ಅಂದ್ರೆ ಏನರ್ಥ? ಸರ್ಕಾರದ ಸಬ್ಸಿಡಿ ರೈತರಿಗೆ ಹೋಗ್ತಿಲ್ಲ, ನಿಮ್ಮ ಖರ್ಚಿಗೆ ಹೋಗ್ತಿದೆ ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಆರೋಗ್ಯ ಇಲಾಖೆಗೆ ಸೂಚನೆ:ಆರೋಗ್ಯ ಇಲಾಖೆ ವರದಿ ಪಡೆದುಕೊಂಡ ಸಚಿವರು, ಸಾಂಕ್ರಾಮಿಕ ರೋಗಗಳಿಗಷ್ಟೇ ಸೀಮಿತವಾಗಬೇಡಿ. ಹೃದಯಾಘಾತ ಪ್ರಕರಣಗಳ ಅಂಕಿಅಂಶ ತಿಳಿದುಕೊಳ್ಳಿ. ನಿಮ್ಮ ಗಮನ ಕೇವಲ ಡೆಂಘೀ, ಮಲೇರಿಯಾ ತಡೆಗಟ್ಟುವಿಕೆಗೆ ಸೀಮಿತವಾಗಬಾರದು. ಕ್ಯಾನ್ಸರ್, ಹೃದ್ರೋಗ, ಯಕೃತ್ ಕಾಯಿಲೆ ಹೀಗೆ ಜೀವನಶೈಲಿ ರೋಗಗಳಿಗೂ ಸಮಾನ ಪ್ರಾಮುಖ್ಯತೆ ಕೊಡಿ ಎಂದು ಸ್ಪಷ್ಟ ನಿರ್ದೇಶನ ನೀಡಿದರು.ವೈದ್ಯಕೀಯ ವ್ಯವಸ್ಥೆಯಲ್ಲಿ ನಿರ್ಲಕ್ಷ್ಯ ಅಸಹ್ಯ:
ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ನಡೆದ ಶಸ್ತ್ರಚಿಕಿತ್ಸೆಯ ಎಡವಟ್ಟಿನ ಘಟನೆ ಜಿಲ್ಲಾ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಕಡು ಬಡತನದ ಕೂಲಿ ಕಾರ್ಮಿಕ ಮಹಿಳೆ ಚಿಕಿತ್ಸೆ ವೇಳೆ ಎದುರಿಸಿದ ಸಮಸ್ಯೆಯನ್ನು ಶಾಸಕ ಸಿಮೆಂಟ್ ಮಂಜು ಸಭೆಯಲ್ಲಿ ಪ್ರಸ್ತಾಪಿಸಿ, ಎಡಗಾಲಿಗೆ ಶಸ್ತ್ರಚಿಕಿತ್ಸೆ ನಡೆಯಬೇಕಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಲಗಾಲಿಗೂ ಸಣ್ಣ ಗಾಯವಾದ ಬಗ್ಗೆ ಸಭೆಯಲ್ಲಿ ಬಹಿರಂಗವಾಯಿತು. ವೈದ್ಯಕೀಯ ಅಧೀಕ್ಷಕ ಡಾ. ರಾಘವೇಂದ್ರ ಪ್ರಸಾದ್ ಅವರು ಸ್ಪಷ್ಟನೆ ನೀಡುತ್ತಾ,“ಶಸ್ತ್ರಚಿಕಿತ್ಸೆ ಎಡಗಾಲಿಗೇ ನಡೆದಿದೆ. ಬಲಗಾಲಿಗೆ ಕೇವಲ ಸಣ್ಣ ಪ್ರಮಾಣದ ಗಾಯವಾಗಿದೆ. ತಪ್ಪಾಗಿ ಬಲಗಾಲಿಗೆ ಶಸ್ತ್ರಚಿಕಿತ್ಸೆ ನಡೆದಿಲ್ಲ. ನಾವು ಈಗಾಗಲೇ ರೋಗಿಯನ್ನು ಭೇಟಿಯಾಗಿ ಮಾತನಾಡಿದ್ದೇವೆ” ಎಂದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಎಡವಟ್ಟು ಬೇಜವಾಬ್ದಾರಿ ಕಾರ್ಯವಿಧಾನದ ನಿದರ್ಶನ. ವೈದ್ಯಕೀಯ ವ್ಯವಸ್ಥೆಯಲ್ಲಿ ನಿರ್ಲಕ್ಷ್ಯ ಅಸಹ್ಯ” ಎಂದು ಅಧಿಕಾರಿಗಳ ವಿರುದ್ಧ ಗರಂ ಆದರು.ಶಾಸಕ ಸಿಮೆಂಟ್ ಮಂಜು, ಕಡು ಬಡತನದಲ್ಲಿ ಬದುಕುತ್ತಿರುವ ಕೂಲಿ ಮಾಡುವ ಈ ರೋಗಿಗೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ಸರ್ಕಾರ ಮತ್ತು ಆಸ್ಪತ್ರೆ ಆಡಳಿತಕ್ಕೆ ಒತ್ತಾಯಿಸಿದರು. ಘಟನೆ ಕುರಿತಂತೆ ಸಂಪೂರ್ಣ ಪರಿಶೀಲನೆಗಾಗಿ ವಿಶೇಷ ತನಿಖಾ ಸಮಿತಿ ರಚಿಸಲಾಗಿದೆ. ಇಂದು ಮಂಗಳವಾರ ಸಂಜೆ ವೇಳೆಗೆ ವರದಿ ಸಲ್ಲಿಕೆ ಆಗಲಿದೆ. ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಾ. ರಾಘವೇಂದ್ರ ಪ್ರಸಾದ್ ಮಾಹಿತಿ ನೀಡಿದರು.
ಸಭೆಯಲ್ಲಿ ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕ ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ಶಾಸಕರಾದ ಎಚ್.ಪಿ. ಸ್ವರೂಪ್, ಸಿ.ಎನ್. ಬಾಲಕೃಷ್ಣ, ಎಚ್.ಕೆ. ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.***ಬಾಕ್ಸ್: ಬಡವರ ತೆರಿಗೆ ಹಣ ವ್ಯರ್ಥ ಮಾಡೋ ಮನೋಭಾವ ಬಿಡಿಸರ್ಕಾರಿ ಶಾಲೆಗಳ ಹಾಜರಾತಿ ಕುಸಿತಕ್ಕೂ ಸಚಿವರು ತರಾಟೆ ತೆಗೆದುಕೊಂಡರು. ಖಾಸಗಿ ಶಾಲೆ ೧೫ ಸಾವಿರ ಸಂಬಳ ಕೊಟ್ಟು ಶಿಕ್ಷಕರಿಂದ ಮಕ್ಕಳನ್ನು ಸೆಳೆಯುತ್ತವೆ. ಸರ್ಕಾರ ೫೦-೭೦ ಸಾವಿರ ಸಂಬಳ ಕೊಟ್ಟು, ಹಾಲು, ಮೊಟ್ಟೆ, ಪುಸ್ತಕ, ಬ್ಯಾಗ್ ಕೊಟ್ಟರೂ ಮಕ್ಕಳು ಶಾಲೆಗೆ ಬರ್ತಿಲ್ಲ ಅಂದ್ರೆ ಅಧಿಕಾರಿಗಳು ಏನು ಮಾಡ್ತಾ ಇದೀರಾ? ಸರ್ಕಾರ ಹಣ ಮುದ್ರಣ ಯಂತ್ರವಲ್ಲ, ಬಡವರ ತೆರಿಗೆ ಹಣ ವ್ಯರ್ಥ ಮಾಡೋ ಮನೋಭಾವ ಬಿಡಿ ಎಂದು ಗರಂ ಆದರು. ಸಭೆಯ ಕೊನೆಯಲ್ಲಿ ಸಚಿವರು ಮತ್ತೊಮ್ಮೆ ಸ್ಪಷ್ಟ ಸಂದೇಶ ನೀಡಿ, "ಕಾರ್ಯಕ್ರಮಗಳಿಂದ ಜನರಿಗೆ ಸಾಸಿವೆ ಕಾಳಿನಷ್ಟಾದ್ರೂ ಪ್ರಯೋಜನವಾಯ್ತಾ ಅನ್ನೋ ಮಾಹಿತಿಯೇ ನನಗೆ ಮುಖ್ಯ. ಇಲ್ಲದಿದ್ದರೆ ಎಲ್ಲ ಯೋಜನೆಗಳೂ ಕೇವಲ ತೌಡು ಕುಟ್ಟುವ ಕೆಲಸವಾಗಿಬಿಡುತ್ತವೆ " ಎಂದು ಎಚ್ಚರಿಸಿದರು.