ಪೌರಕಾರ್ಮಿಕರ ಸೇವೆ ಸಮಾಜಕ್ಕೆ ಅಮೂಲ್ಯ

KannadaprabhaNewsNetwork |  
Published : Oct 02, 2026, 01:45 AM IST
1ಎಚ್ಎಸ್ಎನ್8: ಪೌರಕಾರ್ಮಿಕರ ಸೇವೆ ಸಮಾಜಕ್ಕೆ ಅಮೂಲ್ಯ: ಎಚ್.ಎಂ. ವಿಶ್ವನಾಥ್ರಾಜಮ್ಮ ಜನಸ್ಪಂದನ ವೇದಿಕೆಯಿಂದ ಪೌರಕಾರ್ಮಿಕರ ದಿನಾಚರಣೆ, ಬಾಗಿನ ವಿತರಣೆ ಹಾಗೂ ಸನ್ಮಾನ | Kannada Prabha

ಸಾರಾಂಶ

ದೇಶದಲ್ಲಿ ಶತಮಾನಗಳಿಂದ ತಳ ಸಮುದಾಯಗಳನ್ನು ಶೋಷಣೆಗೆ ಒಳಪಡಿಸಲಾಗಿದ್ದು, ಶಿಕ್ಷಣ ಮತ್ತು ಅಧಿಕಾರದಿಂದ ದೂರವಿಡಲಾಗಿದೆ. ಮೇಲ್ವರ್ಗದ ಜನರು ಶಿಕ್ಷಣದ ಜತೆಗೆ ಅಧಿಕಾರದಲ್ಲಿಯೂ ಹೆಚ್ಚಿನ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಇಂತಹ ಅಸಮಾನತೆಗಳು ದೂರವಾಗಿ, ಪೌರಕಾರ್ಮಿಕರು, ಕೂಲಿ ಕಾರ್ಮಿಕರು ಹಾಗೂ ರೈತಾಪಿ ವರ್ಗದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆದು ಉನ್ನತ ಸ್ಥಾನಮಾನಗಳನ್ನು ಅಲಂಕರಿಸಬೇಕು ಎಂದು ಆಶಿಸಿದರು. ರೈತರು, ಕೂಲಿ ಕಾರ್ಮಿಕರು, ಶ್ರಮಿಕರು ಹಾಗೂ ಪೌರಕಾರ್ಮಿಕರ ಪರಿಶ್ರಮದ ಮೇಲೆ ಇಡೀ ದೇಶ ನಿಂತಿದೆ. ಸಮಾಜದ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಪೌರಕಾರ್ಮಿಕರನ್ನು ಗುರುತಿಸಿ, ಗೌರವಿಸುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ ಎಂದು ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ ಆಲೂರು

ರೈತರು, ಕೂಲಿ ಕಾರ್ಮಿಕರು, ಶ್ರಮಿಕರು ಹಾಗೂ ಪೌರಕಾರ್ಮಿಕರ ಪರಿಶ್ರಮದ ಮೇಲೆ ಇಡೀ ದೇಶ ನಿಂತಿದೆ. ಸಮಾಜದ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಪೌರಕಾರ್ಮಿಕರನ್ನು ಗುರುತಿಸಿ, ಗೌರವಿಸುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ ಎಂದು ಪ್ರಗತಿಪರ ಚಿಂತಕ ಹಾಗೂ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ರಾಜಮ್ಮ ಜನಸ್ಪಂದನ ವೇದಿಕೆ ವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ, ಬಾಗಿನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಶತಮಾನಗಳಿಂದ ತಳ ಸಮುದಾಯಗಳನ್ನು ಶೋಷಣೆಗೆ ಒಳಪಡಿಸಲಾಗಿದ್ದು, ಶಿಕ್ಷಣ ಮತ್ತು ಅಧಿಕಾರದಿಂದ ದೂರವಿಡಲಾಗಿದೆ. ಮೇಲ್ವರ್ಗದ ಜನರು ಶಿಕ್ಷಣದ ಜತೆಗೆ ಅಧಿಕಾರದಲ್ಲಿಯೂ ಹೆಚ್ಚಿನ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಇಂತಹ ಅಸಮಾನತೆಗಳು ದೂರವಾಗಿ, ಪೌರಕಾರ್ಮಿಕರು, ಕೂಲಿ ಕಾರ್ಮಿಕರು ಹಾಗೂ ರೈತಾಪಿ ವರ್ಗದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆದು ಉನ್ನತ ಸ್ಥಾನಮಾನಗಳನ್ನು ಅಲಂಕರಿಸಬೇಕು ಎಂದು ಆಶಿಸಿದರು.

ಪೌರಕಾರ್ಮಿಕರು ಸೇರಿದಂತೆ ಸಮಾಜದ ತಳಮಟ್ಟದ ಜನರಲ್ಲಿ ಅನೇಕರು ಸ್ವಂತ ಮನೆ ಹಾಗೂ ಜಮೀನು ಹೊಂದಲು ಸಾಧ್ಯವಾಗದೆ, ದುಡಿಮೆಯನ್ನೇ ಅವಲಂಬಿಸಿ ಜೀವನ ಸಾಗಿಸುವ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಸಾಮಾಜಿಕ ಅಸಮಾನತೆಗಳಿಗೆ ಶೋಷಣೆಯ ವ್ಯವಸ್ಥೆಯೇ ಕಾರಣವಾಗಿದೆ. ಪ್ರತಿನಿತ್ಯ ಪಟ್ಟಣದ ರಸ್ತೆಗಳು, ಬಡಾವಣೆಗಳು ಹಾಗೂ ಸಾರ್ವಜನಿಕ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಪೌರಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದೆ. ಅವರ ಶ್ರಮವನ್ನು ಗುರುತಿಸುವುದರ ಜತೆಗೆ, ಅವರ ಕಷ್ಟ-ಸುಖಗಳಿಗೆ ಸ್ಪಂದಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ, ಪ್ರತಿನಿತ್ಯ ನಗರವನ್ನು ಸ್ವಚ್ಛವಾಗಿಡುವ ಮೂಲಕ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ. ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಸಮಾಜದ ಆರೋಗ್ಯಕ್ಕಾಗಿ ದುಡಿಯುವ ಇಂತಹ ಕಾರ್ಮಿಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಜನಸ್ಪಂದನ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಹೇಮಂತ್ ಕುಮಾರ್‌ ಮಾಡುತ್ತಿರುವುದು ಇತರ ಸಂಘಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು. ಸಮಾಜದ ಕಟ್ಟಕಡೆಯ ವ್ಯಕ್ತಿಗಳ ನೆರವಿಗೆ ಧಾವಿಸುವುದರ ಜತೆಗೆ, ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಜನಸ್ಪಂದನ ವೇದಿಕೆಯ ಸೇವೆ ಪ್ರಶಂಸನೀಯ. ಇಂತಹ ಕಾರ್ಯಗಳಿಗೆ ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸಿದಾಗ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಪೌರಕಾರ್ಮಿಕರಿಗೆ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಕೆಲಸ ಕಾರ್ಯಗಳಿದ್ದರೂ ತಮ್ಮಿಂದ ಸಾಧ್ಯವಾದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕಾಂಗ್ರೆಸ್ ಮುಖಂಡ ಹಾಗೂ ಸಕಲೇಶಪುರ ಗ್ಯಾರಂಟಿ ಸಮಿತಿ ಅಧ್ಯಕ್ಷ ಮುರಳಿ ಮೋಹನ್ ಮಾತನಾಡಿ, ಪೌರಕಾರ್ಮಿಕರು ಒಂದು ದಿನ ಕೆಲಸ ಮಾಡದಿದ್ದರೂ ಇಡೀ ಪಟ್ಟಣದ ಸ್ವಚ್ಛತೆಯ ಮೇಲೆ ಅದರ ಪರಿಣಾಮ ಗೋಚರಿಸುತ್ತದೆ. ನಗರವನ್ನು ಸ್ವಚ್ಛವಾಗಿಟ್ಟು, ಜನರು ಆರೋಗ್ಯಕರ ವಾತಾವರಣದಲ್ಲಿ ಬದುಕಲು ಕಾರಣವಾಗುವ ಪೌರಕಾರ್ಮಿಕರ ಸೇವೆ ಅನನ್ಯ. ಇಂತಹ ಶ್ರಮಜೀವಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಿಳಾ ಪೌರಕಾರ್ಮಿಕರಿಗೆ ಬಾಗಿನ ವಿತರಿಸುವ ಮೂಲಕ ಅವರ ಸೇವೆಗೆ ಕೃತಜ್ಞತೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜನಸ್ಪಂದನ ವೇದಿಕೆಯ ಅಧ್ಯಕ್ಷ ಹೇಮಂತ್ ಕುಮಾರ್, ವೀರಶೈವ ಸಮಾಜದ ಮುಖಂಡ ರೇಣುಕಾ ಪ್ರಸಾದ್, ಕದಾಳು ಲೋಕೇಶ್, ರುದ್ರೇಗೌಡ, ಸಂದೇಶ್, ಧರಣೀಂದ್ರ, ಲೋಕೇಶ್, ಶ್ರೀಕಾಂತ್, ರಾಜಶೇಖರ್‌, ಮಲ್ಲೇಶ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯಗೊಳ್ಳಬೇಕು: ಕಾವೇರಿ
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಕ್ರೀಡಾಕೂಟ..!