ಮಂಜುನಾಥ ಕೆ.ಎಂ.
ಜುಲೈ ಅಂತ್ಯ ಸಮೀಪಿಸುತ್ತಿದ್ದರೂ ಜಿಲ್ಲೆಯ ಅನೇಕ ಭಾಗಗಳಲ್ಲಿ ಸಮರ್ಪಕ ಮಳೆಯಾಗಿಲ್ಲ. ಮಳೆಯಾಶ್ರಿತ ಪ್ರದೇಶಗಳಲ್ಲಿ ಬಿತ್ತನೆ ಕಾರ್ಯ ಬಹುತೇಕ ಸ್ಥಗಿತಗೊಂಡಿದ್ದು, ಕೆಲವು ಕಡೆ ಬಿತ್ತನೆ ಮಾಡಿದ ಬೆಳೆಗಳೂ ಮಳೆಯ ಕೊರತೆಯಿಂದ ಒಣಗುವ ಸ್ಥಿತಿಗೆ ತಲುಪಿವೆ. ಮತ್ತೊಂದೆಡೆ, ತುಂಗಭದ್ರಾ ಜಲಾಶಯದಿಂದ ನೀರು ದೊರೆಯುವ ನಿರೀಕ್ಷೆಯಲ್ಲಿದ್ದ ರೈತರೂ ಜಲಾಶಯದ ನೀರಿನ ಮಟ್ಟ ಏರಿಳಿತವಾಗುತ್ತಿರುವ ಕಾರಣ ಆತಂಕದಲ್ಲಿದ್ದಾರೆ. ಜಲಾಶಯದ ಒಳ ಹರಿವು ಒಂದಷ್ಟು ಹೆಚ್ಚುತ್ತಿದೆಯಾದರೂ ಬೆಳೆಗಳಿಗೆ ನೀರು ಕೊಡುವ ಸ್ಥಿತಿಯಿಲ್ಲ.
ಬಿರುಕುಬಿಟ್ಟ ಭೂಮಿ: ಸಾಮಾನ್ಯವಾಗಿ ಈ ವೇಳೆಗೆ ಭತ್ತ, ಹತ್ತಿ, ಮೆಣಸಿನಕಾಯಿ, ಜೋಳ, ಸಜ್ಜೆ, ತೊಗರಿ ಸೇರಿದಂತೆ ವಿವಿಧ ಮುಂಗಾರು ಬೆಳೆಗಳ ಬಿತ್ತನೆ ಚುರುಕುಗೊಳ್ಳಬೇಕಿತ್ತು. ಆದರೆ ಈ ಬಾರಿ ಹೊಲಗಳು ಖಾಲಿಯಾಗಿದ್ದು, ಬಿರುಕು ಬಿಟ್ಟ ಭೂಮಿಗಳು ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಢಾಳಾಗಿ ಕಂಡು ಬರುತ್ತಿದೆ. ಬೋರ್‌ವೆಲ್‌ಗಳು ಇರುವ ಕಡೆ ಒಂದಷ್ಟು ಹಸಿರು ಕಂಡು ಬಂದರೆ ಉಳಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಬರದ ಛಾಯೆ ಮೂಡಿದೆ. ಮಳೆಯ ನಿರೀಕ್ಷೆಯಲ್ಲಿದ್ದ ರೈತರು ಬಿತ್ತನೆಗೆ ಬೇಕಾದ ಬೀಜ, ಗೊಬ್ಬರ ಹಾಗೂ ಕೃಷಿ ಸಲಕರಣೆಗಳನ್ನು ಖರೀದಿಸಿದ್ದರು. ಬಿತ್ತನೆ ಮುನ್ನದ ಕೃಷಿ ಚಟುವಟಿಕೆ ಪೂರ್ಣಗೊಳಿಸಿದ್ದರು. ಆದರೆ, ಈಗ ಮಳೆಯ ಅಭಾವ ತೀವ್ರಗೊಂಡಿದ್ದು ಮುಂದೇನು ಎಂಬ ಚಿಂತೆ ರೈತರದ್ದು. ಇನ್ನು ಕೃಷಿ ಸಂಪೂರ್ಣ ಸ್ಥಗಿತಗೊಂಡಿರುವ ಅನೇಕ ಗ್ರಾಮಗಳಲ್ಲಿ ಜೀವನೋಪಾಯವೇ ದೊಡ್ಡ ಪ್ರಶ್ನೆಯಾಗಿದೆ. ಕೃಷಿ ಕೂಲಿಯನ್ನು ನಂಬಿದ್ದ ಸಾವಿರಾರು ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದ್ದು, ಹೊಟ್ಟೆಪಾಡಿಗಾಗಿ ಬೆಂಗಳೂರು, ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಕುಟುಂಬ ಸಮೇತರಾಗಿ ಊರು ತೊರೆಯುತ್ತಿರುವ ದೃಶ್ಯಗಳು ಗ್ರಾಮೀಣ ಬದುಕಿನ ದುಸ್ಥಿತಿಯನ್ನು ಬಿಂಬಿಸುತ್ತಿವೆ. ಮಳೆಯ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆಯೂ ಉಲ್ಬಣಗೊಳ್ಳುತ್ತಿದೆ. ಗ್ರಾಮಗಳ ಕೆರೆ-ಕಟ್ಟೆಗಳು ಬತ್ತುತ್ತಿದ್ದು, ಕೊಳವೆಬಾವಿಗಳ ನೀರಿನ ಮಟ್ಟವೂ ಗಣನೀಯವಾಗಿ ಕುಸಿದಿದೆ. ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಹಸಿ ಮೇವು ಸಿಗದೆ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಮೇವು ಖರೀದಿಸುವ ಸ್ಥಿತಿಯೂ ಇಲ್ಲದ ಕಾರಣ ಅನೇಕರು ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ.
ಬರಗಾಲ ಘೋಷಣೆ ಮಾಡಿ: ಬಳ್ಳಾರಿ ಜಿಲ್ಲೆಯಲ್ಲಿ ಮಳೆಯಾಶ್ರಿತ ಶೇ. 20ರಷ್ಟು ಮಾತ್ರ ಬಿತ್ತನೆಯಾಗಿದೆ. ನೀರಾವರಿ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾತ್ರ ಮಾಡಿದ್ದಾರೆ. ದೀರ್ಘಾವಧಿ ಬೆಳೆಯಲು ಸಮಯ ಮುಗಿದಿದೆ. ಅಲ್ಪಾವಧಿ ಬೆಳೆಗಳಿಗೆ ಮಾತ್ರ ಒಂದಷ್ಟು ಅವಕಾಶವಿದೆ. ಬಳ್ಳಾರಿ-ವಿಜಯನಗರ ಅವಳಿ ಜಿಲ್ಲೆಯನ್ನು ಬರಗಾಲ ಜಿಲ್ಲೆ ಎಂದು ಘೋಷಣೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಬಳ್ಳಾರಿ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ದರೂರು ಹೇಳಿದರು.