ಚಿತ್ರದುರ್ಗ ನಗರದ ಮುರುಘಾ ಮಠದಲ್ಲಿ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾದ ವಿಚಾರ ಗೋಷ್ಠಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಜಸ್ಟಿಸ್ ಎಚ್.ಬಿಲ್ಲಪ್ಪರವರು ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಾಡಿನ ಶಿವಶರಣರು ಮನುಷ್ಯರು ಮನುಷ್ಯರನ್ನಾಗಿ ನೋಡುವಂತಹ ದೃಷ್ಟಿಕೋನವನ್ನು ಸಮಾಜಕ್ಕೆ ಕೊಟ್ಟಿದ್ದಾರೆ. ಅವರ ಆಚಾರ, ವಿಚಾರ ಜೀವನ ವಿಧಾನವೇ ಸಾಮಾಜಿಕ ನ್ಯಾಯದ ಪರವಾಗಿದ್ದು, ಸಂವಿಧಾನದ ಬಹುದೊಡ್ಡ ಆಶಯವೂ ಕೂಡ ಆಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಜಸ್ಟಿಸ್ ಎಚ್.ಬಿಲ್ಲಪ್ಪನವರು ಹೇಳಿದರು.
ನಗರದ ಮುರುಘಾ ಮಠದಲ್ಲಿ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ನಿಮಿತ್ತ ನಡೆದ ‘ಶರಣ ಸ್ಥಲದ ನೆಲೆಯಲ್ಲಿ ಬಸವಣ್ಣ ವಚನ ಸಾಹಿತ್ಯ ಮತ್ತು ಭಾರತೀಯ ಸಂವಿಧಾನದ ವಿಚಾರ ಗೋಷ್ಠಿ’ ಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಮನುಷ್ಯ ಯಾವುದೇ ಕೆಲಸ ಮಾಡಿದರು ಸುಖ ದುಃಖಗಳ ನಡುವೆ ಸಂತೋಷ ಬರುವಂತಿರಬೇಕು. ಒಬ್ಬ ಸಂತನು ಕೂಡ ಸಂತೋಷವಾಗಿ ಇರಬೇಕೆಂದು ಜಗತ್ತಿನ ಎಲ್ಲಾ ವ್ಯಾಪಾರಗಳನ್ನು ತೊರೆದು ಭಗವಂತನ ಕಡೆ ಸಾಗುತ್ತಾನೆ. ಸದಾ ಕಾಯಕ ನಿಷ್ಠೆಯನ್ನು ಪ್ರತಿಪಾದಿಸುತ್ತಾ 12ನೇ ಶತಮಾನದಲ್ಲಿ ಶರಣರು ಜಗತ್ತಿಗೆ ಸಾರಿದರು. ನಮ್ಮ ಸಂವಿಧಾನದ ಬಹುದೊಡ್ಡ ದಾಖಲೆ ಸಮಾನತೆಯ ಸಾಮಾಜಿಕ ನ್ಯಾಯವನ್ನು ಕೊಡುವಂತದ್ದು ಎಂದು ನುಡಿದರು.
ನೀವು ಸ್ವಾತಂತ್ರ‍್ಯವಾಗಿದ್ದಾಗ ಮಾತ್ರ ನಿಮ್ಮ ಆಲೋಚನೆಗಳನ್ನು ಬಲವಾಗಿ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಶರಣ, ಕಾಯಕ, ದಾಸೋಹ, ಮರಣವೇ ಮಹಾನವಮಿ ಎಂಬ ಶರಣರ ಈ ನಾಲ್ಕು ಮಾತುಗಳನ್ನು ಅರ್ಥಮಾಡಿಕೊಂಡರೆ ಸಾಕು ಜೀವನದ ಪರಿಪೂರ್ಣ ಸತ್ಯ ನಮಗೆ ಅರಿವಾಗುತ್ತದೆ.
ಮನುಷ್ಯನಾಗಿ ಬದುಕಬಹುದು, ಮೃಗವಾಗಿ ಬದುಕಬಹುದು, ಮಹಾದೇವನಾಗಿ ಬದುಕಬಹುದು ಎಂಬುದು ಶರಣರ ಬದುಕು ನಮಗೆ ಕಲಿಸಿಕೊಡುತ್ತದೆ. ನಮ್ಮೆಲ್ಲರ ಮುಂದೆ ಇರುವುದು ಮಾಲೀಕತ್ವ ಮತ್ತು ಸ್ವಾಧೀನವಾಗಿದ್ದರೆ, ಶರಣರ ಮುಂದೆ ಪ್ರಕೃತಿಯಲ್ಲಿರುವ ಎಲ್ಲವೂ ಕೂಡ ಭಗವಂತನವೇ ಆಗಿದೆ. ನಾವು ಬದುಕುವುದಷ್ಟೇ ಮುಖ್ಯ ಅಲ್ಲ ಇನ್ನೊಬ್ಬರನ್ನು ಬದುಕುವುದಕ್ಕೆ ಬಿಡುವುದು ತುಂಬಾ ಮುಖ್ಯ. ಎಂಬುದನ್ನು ಶರಣರ ಬದುಕು ಸಾಕ್ಷಿಕರಿಸಿದೆ.
ಆಧುನಿಕ ಜಗತ್ತಿನ ವಿಪರೀತ ಬಯಕೆಗಳು, ಆಸೆಗಳು ಮಾನವನ ದುಃಖಕ್ಕೆ ಕಾರಣವಾಗುತ್ತದೆ. ಆಸೆಯೇ ದುಃಖಕ್ಕೆ ಮೂಲ ಎಂದು ಹೇಳಿದ ಬುದ್ಧನ ವಿಚಾರ ವಚನಕಾರರ ಬದುಕು ಅತ್ಯಂತ ಸಾಮ್ಯತೆಯಿಂದ ಇರುವುದನ್ನು ನಾವು ಕಾಣುತ್ತೇವೆ ಬಸವಣ್ಣನವರು ಕಾರ್ಮಿಕರ ಜನಕ ಎಂಬುದನ್ನು ನಾವು ಮರೆತಿದ್ದೇವೆ. ಇಷ್ಟಲಿಂಗ ಪೂಜೆ ಜಗತ್ತಿನ ಅತ್ಯಂತ ಶ್ರೇಷ್ಠ ವೈಚಾರಿಕ ಪೂಜಾ ವಿಧಾನವಾಗಿದೆ ಜಾತಿಯನ್ನು ಹೋಗಲಾಡಿಸಲು ಅತಿ ಶ್ರೇಷ್ಠವಾದದ್ದು ಇಷ್ಟ ಲಿಂಗಪೂಜೆ. ಈ ಪೂಜೆಯನ್ನು ಬಸವಣ್ಣನವರು ಸಮಾಜಕ್ಕೆ ನೀಡಿದರು ಎಂದು ತಿಳಿಸಿದರು.
ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ಅವರು ಮಾತನಾಡಿ, ಶ್ರೀಮಠ ಹಿಂದಿನಿಂದ ಮಾಡಿಕೊಂಡು ಬರುತ್ತಿದ್ದ ಮುಖ್ಯ ಕಾರ್ಯಕ್ರಮಗಳ ಜೊತೆ ವಿನೂತನವಾದ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರಲಾಗುತ್ತಿದೆ. ಶ್ರೀಮಠ ಬಸವಾದಿ ಶರಣರ ಪರಂಪರೆಯ ಜೊತೆಗೆ ನಡೆದು ಬರುತ್ತಿದೆ. ಈ ಕಾರಣದಿಂದ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವುದು ಶ್ರೀಮಠದ ಆದ್ಯ ಕರ್ತವ್ಯ ಕೂಡ ಆಗಿದೆ ಎಂದರು.ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮಿಜಿ, ಡಾ.ಬಸವಪ್ರಭು ಸ್ವಾಮೀಜಿ, ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಮ್.ಕೆ.ತಾಜ್ ಪೀರ್, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಮಹಡಿ ಶಿವಮೂರ್ತಿ, ಉದ್ಯಮಿ ಹನುಮಲಿ ಷಣ್ಮುಖಪ್ಪ, ವೀರಶೈವ ಸಮಾಜದ ಅಧ್ಯಕ್ಷ ಎಚ್.ಎಂ.ತಿಪ್ಪೇಸ್ವಾಮಿ (ಎಸ್ಎಂಎಲ್), ಚಿತ್ರದುರ್ಗ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಶಿವಪ್ರಕಾಶ್, ವರ್ತಕರಾದ ಎಸ್.ವಿ ನಾಗರಾಜಪ್ಪ, ಅಖಿಲ ಭಾರತ ವೀರಶೈವ ಲಿಂಗಾಯತ ತಾಲೂಕು ಘಟಕದ ಅಧ್ಯಕ್ಷ ಸಿದ್ದಪ್ಪ, ಜಂಗಮ ಸಮಾಜದ ಕಾರ್ಯದರ್ಶಿ ಎಸ್ ಷಡಕ್ಷರಯ್ಯ, ಗಾಣಿಗ ಮಹಿಳಾ ಸಮಾಜದ ಅಧ್ಯಕ್ಷ ಪುಷ್ಪ ಬಾಬಣ್ಣ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.