- ಆರ್.ಎಲ್.ಉಮಾಶಂಕರ್ ಅಭಿಮತ । ಕಮ್ಲ್ ಸ್ಕಾನ್-2026 34ನೇ ವಾರ್ಷಿಕ ಸಮ್ಮೇಳನ
ಕನ್ನಡಪ್ರಭ ವಾರ್ತೆ ದಾವಣಗೆರೆ
ವಿಧಿವಿಜ್ಞಾನ ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಬಳಕೆಯು ಸಾಕ್ಷ್ಯಾಧಾರಗಳ ಪರಿಶೀಲನೆ, ದಾಖಲೀಕರಣ ಹಾಗೂ ವಿಶ್ಲೇಷಣೆ ವಿಧಾನಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರುತ್ತಿದೆ. ವೈದ್ಯಕೀಯ ಕ್ಷೇತ್ರದ ಭವಿಷ್ಯದ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಆರ್.ಎಲ್. ಉಮಾಶಂಕರ್ ಅಭಿಪ್ರಾಯಪಟ್ಟರು.ನಗರದ ಹೊರ ವಲಯದ ಎಸ್.ಎಸ್. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್‌ನ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ಮೆಡಿಕೋ- ಲೀಗಲ್ ಸೊಸೈಟಿ ಹಾಗೂ ದಾವಣಗೆರೆಯ ಎಸ್.ಎಸ್. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್ ಸಹಯೋಗದಲ್ಲಿ ಆಯೋಜಿಸಿದ್ದ 2ನೇ ದಿನದ ಕಮ್ಲ್ ಸ್ಕಾನ್-2026 34ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಕೃತಕ ಬುದ್ಧಿಮತ್ತೆ ಮತ್ತು ಆಧುನಿಕ ತಂತ್ರಜ್ಞಾನಗಳು ವಿಧಿವಿಜ್ಞಾನ ವೈದ್ಯಕೀಯ ಅಭ್ಯಾಸದ ಸ್ವರೂಪವನ್ನೇ ಬದಲಾಯಿಸುತ್ತಿವೆ. ಸಾಕ್ಷ್ಯಾಧಾರಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸುವುದು, ಅವುಗಳನ್ನು ಸಮರ್ಪಕವಾಗಿ ದಾಖಲಿಸುವುದು, ದತ್ತಾಂಶಗಳ ವಿಶ್ಲೇಷಣೆ ಹಾಗೂ ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿ ವ್ಯವಸ್ಥಿತವಾಗಿ ನಿರ್ವಹಿಸುವಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದೆ. ಇಂತಹ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಕರು, ವೈದ್ಯಕೀಯ ವೃತ್ತಿನಿರತರು ಮತ್ತು ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಬೆಳವಣಿಗೆಗಳ ಬಗ್ಗೆ ನಿರಂತರ ಜ್ಞಾನ ವೃದ್ಧಿಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನವನ್ನು ವೃತ್ತಿಪರ ಜ್ಞಾನ ಮತ್ತು ನೈತಿಕ ಜವಾಬ್ದಾರಿಗಳೊಂದಿಗೆ ಸಮನ್ವಯಗೊಳಿಸುವುದು ಕಾಲದ ಅಗತ್ಯವಾಗಿದೆ ಎಂದು ತಿಳಿಸಿದರು.
ಎಸ್.ಎಸ್. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್‌ನ ಪ್ರಾಂಶುಪಾಲ ಡಾ. ಬಿ.ಎಸ್.ಪ್ರಸಾದ್, ಉಪ ಪ್ರಾಂಶುಪಾಲೆ ಡಾ.ಶಶಿಕಲಾ ಕೃಷ್ಣಮೂರ್ತಿ, ಕರ್ನಾಟಕ ನ್ಯಾಯ ವೈದ್ಯಕೀಯ ಸೊಸೈಟಿ ಅಧ್ಯಕ್ಷ ಡಾ.ವಿಜಯಕುಮಾರ್ ಜತ್ತಿ, ಡಾ.ಪ್ರವೀಣ್, ಡಾ.ರಾಕೇಶ್, ಡಾ.ದೊಡ್ಡಬಸಪ್ಪ, ಹಲವು ವೈದ್ಯಕೀಯ ತಜ್ಞರು, ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಗಣ್ಯರು ಉಪಸ್ಥಿತರಿದ್ದರು.
-20ಕೆಡಿವಿಜಿ40: ಕಮ್ಲ್ ಸ್ಕಾನ್-2026 34ನೇ ವಾರ್ಷಿಕ ಸಮ್ಮೇಳನವನ್ನು ಆರ್.ಎಲ್. ಉಮಾಶಂಕರ್ ಉದ್ಘಾಟಿಸಿದರು.