ಶಿವಾನಂದ ಪಿ.ಮಹಾಬಲಶೆಟ್ಟಿ
ಜನರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಕೋಟ್ಯಂತರ ರೂ. ಹಣ ವಿನಿಯೋಗಿಸಿದೆ. ಆದರೆ ನಗರಸಭೆ ವ್ಯಾಪ್ತಿಯ ಹಲವಾರು ಶುದ್ಧ ನೀರಿನ ಘಟಕಗಳು ಸ್ತಬ್ಧವಾಗಿ ಹಲವು ತಿಂಗಳು ಕಳೆದರೂ ಕೇಳುವವರೇ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದ್ದು, ಜನತೆ ಶುದ್ಧ ಕುಡಿಯುವ ನೀರಿಗಾಗಿ ಖಾಸಗಿ ಘಟಕಗಳನ್ನೇ ಅವಲಂಬಿಸುವ ಸ್ಥಿತಿ ಬಂದಿದೆ.ರಬಕವಿ ಹೊಸೂರ ರಾಮಪುರ ಸೇರಿ ೫ ಘಟಕಗಳಲ್ಲಿ ಕೇವಲ ರಬಕವಿ ಬಸ್ ನಿಲ್ದಾಣ ರಸ್ತೆಯಲ್ಲಿ ಒಂದು ಘಟಕದಲ್ಲಿ ಮಾತ್ರ ನೀರು ಬರುತ್ತದೆ. ಹೊಸೂರ ಸಿರಾಸಾಬ ಮುರಾದಸಾಬ ದರ್ಗಾ ಪಕ್ಕದಲ್ಲಿನ, ರಾಮಪುರನೀಲಕಂಠೇಶ್ವರ ಮಠದ ಆವರಣ, ರಬಕವಿ ಕುಂಬಾರ ಓಣಿಯಲ್ಲಿನ ಪರಪ್ಪ ಉರಭಿನವರ ಮನೆಯ ಪಕ್ಕದಲ್ಲಿ ಒಂದು ಹೀಗೆ ೪ ಘಟಕಗಳು ಸಂಪೂರ್ಣ ಬಂದ್ ಆಗಿ ಹಲವು ತಿಂಗಳುಗಳೇ ಕಳೆದಿವೆ.
ಬನಹಟ್ಟಿಯಲ್ಲಿ ೯ ಘಟಕಗಳ ಪೈಕಿ ಮೂರು ಮಾತ್ರ ಚಾಲು ಹಂತದಲ್ಲಿವೆ. ಶರಣ್ಯಾರ ಭಾವಿ, ಬಾಲಾಜಿ ದೇವಸ್ಥಾನ ಎದುರಿನ ಘಟಕಗಳು ಮಾತ್ರ ಚಾಲೂ ಇದ್ದು, ಉಳಿದೆಲ್ಲವುಗಳು ಬಂದ್ ಆಗಿವೆ.ನೀರು ಶುದ್ಧೀಕರಣ ಘಟಕಗಳು ಸ್ಥಗಿತಗೊಂಡಿರುವ ಪರಿಣಾಮ ಅವಳಿ ನಗರ ಜನರಿಗೆ ಅಶುದ್ಧ ನೀರೇ ಗತಿಯಾಗಿದೆ. ಅದರಲ್ಲೂ ಈಗ ನದಿಯಲ್ಲಿ ನಿಂತ ನೀರು ಇರುವುದರಿಂದ ಕಾಯಿಸಿ ಆರಿಸಿ ಕುಡಿಯುವಂತಾಗಿದೆ. ಕೆಲವು ಘಟಕಗಳನ್ನು ಅವೈಜ್ಞಾನಿಕ ರೀತಿಯಲ್ಲಿ ಸ್ಥಾಪನೆ ಮಾಡಿದ್ದು, ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ಸ್ತಬ್ಧವಾಗಿವೆ ಎನ್ನುತ್ತಾರೆ ಸಾರ್ವಜನಿಕರು. ಆದರೆ ಶುದ್ಧನೀರಿನ ಘಟಕಗಳು ಹೆಸರಿಗೆ ಮಾತ್ರ ಉಳಿದುಕೊಂಡಿದ್ದು, ನಾಗರಿಕರಿಗೆ ಹನಿ ನೀರು ದಕ್ಕದಂತಾಗಿದೆ.
ಘಟಕ ಸ್ಥಾಪಿಸುವಾಗ ಏನಾದರೂ ತೊಂದರೆ ಆದರೆ ಯಾವ ಏಜೆನ್ಸಿ ಟೆಂಡರ್ ಪಡೆದುಕೊಂಡಿದೆಯೋ ಅವರೇ ನಿರ್ವಹಣೆ ಮಾಡಬೇಕು ಎಂಬ ಷರತ್ತು ಸಹ ಇದೆ. ಆದರೆ, ಇದನ್ನು ಯಾರೂ ಪಾಲನೆ ಮಾಡುತ್ತಿಲ್ಲ. ಅಧಿಕಾರಿಗಳೂ ಸಹ ಇವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಇದರ ಪರಿಣಾಮವಾಗಿ ಆರ್‌ಒ ಪ್ಲಾಂಟ್‌ಗಳು ಅವಳಿ ನಗರದ ಪ್ರದೇಶ ಜನರಿಗೆ ಶುದ್ಧ ನೀರು ಕೊಡದೆ ಪಾಳು ಬಿದ್ದಿವೆ. ಶುದ್ಧ ಕುಡಿಯುವ ನೀರು ಸಿಗದಿದ್ದರಿಂದ ಜನರು ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ. ಸಂಬಂಧಿಸಿದ ಅಧಿಕಾರಿಗಳು ಗಾಢ ನಿದ್ರೆಯಿಂದ ಎಚ್ಚೆತ್ತು ಪುನಃ ನೀರಿನ ಘಟಕ ಪ್ರಾರಂಭಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
- ಚಿದಾನಂದ ಸೊಲ್ಲಾಪೂರ. ಕನ್ನಡಪರ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ರಬಕವಿ
- ಗೋಪಾಲ ಕಾಸೆ ಪೌರಾಯುಕ್ತರು. ನಗರಸಭೆ ರಬಕವಿ-ಬನಹಟ್ಟಿ