ನೀಟ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷೆ ರದ್ದು ಖಂಡಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಎನ್‌ಎಸ್‌ಯುಐ ವತಿಯಿಂದ ನಗರದ ದೇಸಾಯಿ ವೃತ್ತದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಜಮಖಂಡಿ

ನೀಟ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷೆ ರದ್ದು ಖಂಡಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಎನ್‌ಎಸ್‌ಯುಐ ವತಿಯಿಂದ ನಗರದ ದೇಸಾಯಿ ವೃತ್ತದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾದ್ಯಕ್ಷ ವಿಜಯ ತಿಪ್ಪರಡ್ಡಿ ಮಾತನಾಡಿ, ನೀಟ ಹಗರಣ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುವ ಪರೀಕ್ಷಾ ವ್ಯವಸ್ಥೆಯಾಗಿದೆ. 2024ರಲ್ಲಿ ಸಮಿತಿ ರಚನೆ ಮಾಡಿದ್ದರು. ಅದರ ವರದಿ ಕೇಂದ್ರ ಸರ್ಕಾರ ಜಾರಿಗೆ ತರಲಿಲ್ಲ, ಇದೇ ನಿರ್ಲಕ್ಷ್ಯದಿಂದ ಈ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಬಡ ವಿದ್ಯಾರ್ಥಿಗಳ ಪೋಷಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ವರ್ಷಗಟ್ಟಲೇ ಓದಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ತಿಳಿಸಿದರು.

ರಮೇಶ ಅಮಾತಿ ಮಾತನಾಡಿ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. 2024ರಲ್ಲಿ ನೇಮಿಸಿದ ಸಮಿತಿ ವರದಿ ಕೂಡಲೇ ಜಾರಿಗೆ ತರಬೇಕು. ವಿದ್ಯಾರ್ಥಿಗಳಿಗೆ ಅನ್ಯಾಯ ಆಗದಂತೆ ಕೇಂದ್ರ ಸರ್ಕಾರ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳಿಂದ ಪಾರ್ಲಿಮೆಂಟ್‌ ಚಲೋ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಅನೇಕ ವಿದ್ಯಾರ್ಥಿಗಳು ಭಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಗ್ರೇಡ್-2 ತಹಶೀಲ್ದಾರ್‌ ಬಸವರಾಜ ಸಿಂಧೂರ ಅವರ ಮುಖಾಂತರ ಮನವಿ ಸಲ್ಲಿಸಲಾಯಿತು. ರಾಯಲ್‌ ಪ್ಯಾಲೇಸ್, ಬಿ.ಎಲ್.ಡಿ.ಇ, ಸಾಯಿನಿಕೇತನ, ಜ್ಞಾನ ಗಂಗೋತ್ರಿ ಸಂಸ್ಥೆ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಿದ್ದು ಧನಗರ, ಅವಿನಾಶ ಚಿನಗುಂಡಿ, ಆನಂದ ಕಾಂಬಳೆ, ವಿಜಯ ಮಾಂಗ, ವಿಕಾಸ ಬೆಳಗಲಿ, ಶಿವರಾಜ ಮಂಟೂರ, ಅರ್ಪೀತಾ ಪಾಟೀಲ, ವರದಾ ಕುಲಕರ್ಣಿ, ವಿನೋದ ನಾವಿ, ಸಂಗಮೇಶ ಹೊಸಕೋಟಿ, ಪೂಜಾ ಹವಾಲ್ದಾರ ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.