ಬೆಳೆ ಹಾನಿ ಪರಿಹಾರ ಸಿಗುವರೆಗೆ ಧರಣಿ ಕೈ ಬಿಡುವದಿಲ್ಲ

KannadaprabhaNewsNetwork | Published : May 24, 2024 12:46 AM

ಸಾರಾಂಶ

ಸರ್ಕಾರ ಕೇವಲ 12992 ರೈತರಿಗೆ ಮಾತ್ರ ಪರಿಹಾರ ನೀಡಿ ಕೈ ತೊಳೆದು ಕೊಂಡಿದೆ. ಈ ತಾರತ್ಯಮ ಸರಿಪಡಿಸುವರೆಗೆ ಹೋರಾಟ ಕೈ ಬಿಡುವದಿಲ್ಲ

ನರಗುಂದ: ತಾಲೂಕಿನ ರೈತ ಸಮುದಾಯಕ್ಕೆ ಬೆಳೆ ಹಾನಿ ವಿತರಣೆಯಲ್ಲಿ ರಾಜ್ಯ ಸರ್ಕಾರ ಅನ್ಯಾಯ ಮಾಡಿದ್ದು, ಈ ತಾರತಮ್ಯ ಸರಿಪಡಿಸಿ ಪರಿಹಾರ ವಿತರಣೆ ಮಾಡುವರೆಗೆ ಧರಣಿ ಕೈ ಬಿಡುವುದಿಲ್ಲ ಎಂದು ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಬಸವರಾಜ ಸಾಬಳೆ ಎಚ್ಚರಿಸಿದ್ದಾರೆ.

ಅವರು ಗುರುವಾರ ಪಟ್ಟಣದ ಮಿನಿ ವಿಧಾನ ಸೌಧದ ಮುಂದೆ ಬೆಳೆ ಹಾನಿ ಪರಿಹಾರ ವಿತರಣೆ ತಾರತಮ್ಯ ಖಂಡಿಸಿ ನಡೆದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2023-24ನೇ ಸಾಲಿನಲ್ಲಿ ತಾಲೂಕಿನ ರೈತರು ಅಲ್ಪಸ್ವಲ್ಪ ಮಳೆಯಾದ ಹಿನ್ನೆಲೆ ಹೆಸರು, ಗೋವಿನ ಜೋಳ, ಬಿ.ಟಿ. ಹತ್ತಿ, ಸೂರ್ಯಕಾಂತಿ, ತೊಗರಿ, ಈರಳ್ಳಿ, ಮೆಣಸನಕಾಯಿ ಸೇರಿದಂತೆ ಇತರ ಬೆಳೆಗಳನ್ನು ಎಕರೆಗೆ ₹ 20 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿದ್ದರು, ಆದರೆ ಸಮಯಕ್ಕೆ ಸರಿಯಾಗಿ ಮಳೆಯಾಗದ ಹಿನ್ನೆಲೆ ಬೆಳೆಗಳು ತೇವಾಂಶ ಕೊರತೆಯಿಂದ ಒಣಗಿದವು. ಸರ್ಕಾರ ಬೆಳೆ ಹಾನಿಯಾದ 10 ತಿಂಗಳ ನಂತರ ಸರ್ಕಾರ 12992 ರೈತರಿಗೆ ಮಾತ್ರ ಬೆಳೆ ಹಾನಿ ಪರಿಹಾರ ಕೊಟ್ಟು ಕೈ ತೊಳೆದುಕೊಂಡಿದೆ ಎಂದು ಆರೋಪಿಸಿದರು.ಸರ್ಕಾರ ಇನ್ನೂ 12105 ರೈತರಿಗೆ ಬೆಳೆ ಹಾನಿ ವಿತರಣೆ ಮಾಡದೇ ದ್ರೋಹ ಮಾಡಿದೆ. ನಾವು ಈ ಹಿಂದೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಬೆಳೆ ಹಾನಿ ವಿತರಣೆಯಲ್ಲಿ ತಾರತಮ್ಯವಾಗಿದ್ದು, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲ ರೈತರಿಗೆ ಪರಿಹಾರ ನೀಡಲು ಕ್ರಮಕೈಗೊಳ್ಳುವಂತೆ ತಿಳಿಸಿದ್ದೇವು. ಆದರೆ ತಹಸೀಲ್ದಾರ್‌ರು ಸಮಸ್ಯೆ ಕುರಿತು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸದ ಕಾರಣ ಪರಿಹಾರ ಸಿಗುವರೆಗೆ ನಿರಂತರ ಧರಣಿ ಹಮ್ಮಿಕೊಂಡಿದ್ದೇವೆ ಎಂದರು.

ಕನ್ನಡ ಪರ ಒಕ್ಕೂಟಗಳ ಸಂಘಟನೆ ಮುಖಂಡ ಚನ್ನು ನಂದಿ ಮಾತನಾಡಿ, ರಾಜ್ಯ ಸರ್ಕಾರ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಿದ್ದು,ಬಿತ್ತನೆ ಮಾಡದ ರೈತರಿಗೆ ಪರಿಹಾರ ವಿತರಣೆ ಮಾಡಿದೆ ಎಂದು ದೂರಿದರು.

ರೈತ ಸಂಘ ಹಾಗೂ ಹಸಿರು ಸೇನೆ ಶಹರ ಘಟಕದ ಅಧ್ಯಕ್ಷ ವಿಠಲ ಜಾಧವ ಮಾತನಾಡಿ, ತಾಲೂಕಿನಲ್ಲಿ ಒಟ್ಟು 25667 ರೈತರು ಬೆಳೆ ಹಾನಿ ಮಾಡಿಕೊಂಡಿದ್ದಾರೆ, ಆದರೆ ಸರ್ಕಾರ ಕೇವಲ 12992 ರೈತರಿಗೆ ಮಾತ್ರ ಪರಿಹಾರ ನೀಡಿ ಕೈ ತೊಳೆದು ಕೊಂಡಿದೆ. ಈ ತಾರತ್ಯಮ ಸರಿಪಡಿಸುವರೆಗೆ ಹೋರಾಟ ಕೈ ಬಿಡುವದಿಲ್ಲ ಎಂದು ಎಚ್ಚರಿಸಿದರು.

ಧರಣಿ ಸ್ಥಳಕ್ಕೆ ತಹಸೀಲ್ದಾರ್‌ ಶ್ರೀಶೈಲ್‌ ತಳವಾರ ಭೇಟಿ ನೀಡಿ ಧರಣಿ ನಿರತ ರೈತರ ಜತೆಗೆ ಚರ್ಚಿಸಿ ಧರಣಿ ಹಿಂದಕ್ಕೆ ಪಡೆದುಕೊಳ್ಳಿ, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಮನವಿ ಮಾಡಿಕೊಂಡರು ಜಿಲ್ಲಾಧಿಕಾರಿಗಳು ಬಂದು ತಾರತಮ್ಯ ಬಗೆಹರಿಸುತ್ತೇನೆ ಎಂದು ಹೇಳುವರೆಗೆ ಧರಣಿ ಹಿಂದಕ್ಕೆ ಪಡೆಯುವದಿಲ್ಲ ಎಂದರು.

ಈ ಸಂದರ್ಭದಲ್ಲಿ ಅಣ್ಣಪ್ಪಗೌಡ ಪಾಟೀಲ, ಕರವೇ ಅಧ್ಯಕ್ಷ ನಬಿಸಾಬ ಕಿಲ್ಲೇದಾರ, ಬಸವರಾಜ ಕಲಕೇರೆ, ವಾಸು ಚವ್ಹಾಣ, ಬಸವರಾಜ ಕರಿಗಾರ, ದೇವಪ್ಪ ಅಣ್ಣಿಗೇರಿ, ಗಂಗಾದಾರ, ಚನ್ನವೀರಯ್ಯ ಹಿರೇಮಠ, ಮಹಾಂತೇಶ ತಾಳಿ, ನಾಗನಗೌಡ ರಾಚನಗೌಡ್ರ, ಮುತ್ತಪ್ಪ ಕಲಹಾಳ, ವೆಂಕನಗೌಡ ಮುದ್ದನಗೌಡರ ಸೇರಿದಂತೆ ಮುಂತಾದವರು ಇದ್ದರು.

Share this article