ಅಡವಿಸಿದ್ದೇಶ್ವರ ಮಠದ ಸಾಮಾಜಿಕ ಕಾರ್ಯ ಶ್ಲಾಘನೀಯ: ಶಾಸಕ ಜಿ.ಎಸ್. ಪಾಟೀಲ

KannadaprabhaNewsNetwork |  
Published : May 16, 2025, 01:46 AM IST
15 ರೋಣ 1. ಪಾರ್ವತಿ ಪರಮೇಶ್ವರ ಕಲ್ಯಾಣ ಮಂಟಪದಲ್ಲಿ ಸರ್ವ ಧರ್ಮ ಸಾಮೂಹಿಕ ವಿವಾಹಗಳು ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಜಿ.ಎಸ್.ಪಾಟೀಲ‌ ಮಾತನಾಡಿದರು. | Kannada Prabha

ಸಾರಾಂಶ

ರೋಣ ತಾಲೂಕಿನ ಕೊತಬಾಳ ಗ್ರಾಮದ ಪಾರ್ವತಿ ಪರಮೇಶ್ವರ ಕಲ್ಯಾಣ ಮಂಟದಲ್ಲಿ ಅಡವಿಸಿದ್ದೇಶ್ವರ ಅವರ 70ನೇ ಪುಣ್ಯಸ್ಮರಣೆ ಹಾಗೂ ರಾಜಶೇಖರ ಶಿವಯೋಗಿಗಳ 24ನೇ ಪುಣ್ಯ ಸ್ಮರಣೆ ಅಂಗವಾಗಿ ಗುರುವಾರ ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು.

ರೋಣ: ಸದಾ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುತ್ತಾ ಬಡವರ ಆಧಾರವಾಗಿ ಶ್ರಮಿಸುತ್ತಿರುವ ಕೊತಬಾಳ ಅಂಕಲಗಿ ಶ್ರೀ ಅಡವಿಸಿದ್ದೇಶ್ವರ ಮಠದ ಕಾರ್ಯ ಮಾದರಿಯಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ತಾಲೂಕಿನ ಕೊತಬಾಳ ಗ್ರಾಮದ ಪಾರ್ವತಿ ಪರಮೇಶ್ವರ ಕಲ್ಯಾಣ ಮಂಟದಲ್ಲಿ ಅಡವಿಸಿದ್ದೇಶ್ವರ ಅವರ 70ನೇ ಪುಣ್ಯಸ್ಮರಣೆ ಹಾಗೂ ರಾಜಶೇಖರ ಶಿವಯೋಗಿಗಳ 24ನೇ ಪುಣ್ಯ ಸ್ಮರಣೆ ಅಂಗವಾಗಿ ಗುರುವಾರ ಜರುಗಿದ ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತರ ಕರ್ನಾಟಕದಲ್ಲಿ ಬರಗಾಲ ಬಿದ್ದಾಗ ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಆ ಸಂದರ್ಭದಲ್ಲಿ ಬಡವರ ಆರ್ಥಿಕ ಹೊರೆ ನೀಗಿಸಲು ಅಂಕಲಗಿ ಶ್ರೀ ಅಡವಿಸಿದ್ದೇಶ್ವರ ಮಠವು ಸಾಮೂಹಿಕ ವಿವಾಹ ಏರ್ಪಡಿಸಿ, ಬಡವರಿಗೆ ಆಧಾರವಾಯಿತು. ಈ ಪದ್ಧತಿಯನ್ನು ನಾಡಿನುದ್ದಗಲಕ್ಕೂ ಹರಡಿಸಿದ ಕೀರ್ತಿ ಮಠಕ್ಕೆ ಸಲ್ಲುತ್ತದೆ. ಸಾಮೂಹಿಕ ವಿವಾಹ ಪರಂಪರೆಯನ್ನು ಮಠ ಇಂದಿಗೂ ಮುಂದುವರಿಸಿಕೊಂಡು ಬಂದಿದೆ. ಗಂಗಾಧರ ಸ್ವಾಮೀಜಿ ಇದಕ್ಕೆ ಶ್ರಮಿಸುತ್ತಿರುವುದು ಸ್ತುತ್ಯಾರ್ಹ. ಸರಳ ಮತ್ತು ಸಾಂಪ್ರದಾಯಿಕ ವಿವಾಹಗಳನ್ನು ಜನತೆ ಪ್ರೋತ್ಸಾಹಿಸಬೇಕು. ಈ ಕುರಿತು ಜನತೆಯ ಮನ ಪರಿವರ್ತನೆಗೊಳ್ಳಬೇಕು ಎಂದರು.

ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ‌ ಮಾತನಾಡಿ, ಆರ್ಥಿಕ ಹೊರೆ ನೀಗಿಸುವ ಸಾಮೂಹಿಕ ವಿವಾಹಗಳು ಬಡವರ ಬಾಳಿನ ಆಶಾದೀಪವಾಗಿವೆ. ಸಾವಿರಾರು ಜನರ ಆಶೀರ್ವಾದ ಮಧ್ಯೆ ಜರುಗುವ ಇಂತಹ ಮದುವೆಗಳು ಭಾವೈಕ್ಯ ಮತ್ತು ಸಾಮರಸ್ಯ ಪ್ರತಿಬಿಂಬಿಸುತ್ತವೆ ಎಂದರು.

18 ಜೋಡಿಗಳು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದವು. ಅಂಕಲಗಿ ಮಠದ ಗಂಗಾಧರ ಸ್ವಾಮೀಜಿ, ಶ್ರೀಧರಮುರಡಿ ಮಠದ ಬಸವಲಿಂಗೇಶ್ವರ ಸ್ವಾಮೀಜಿ, ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಗುಳೇದಗುಡ್ಡ ಒಪ್ಪತ್ತೇಶ್ವರ ಸ್ವಾಮೀಜಿ, ಮಹಾದೇವ ಸ್ವಾಮೀಜಿ, ಗುರುವಸಿದ್ದೇಶ್ವರ ಸ್ವಾಮೀಜಿ, ಕೈಲಾಸಲಿಂಗ ಸ್ವಾಮೀಜಿ, ಯಚ್ವರೇಶ್ವರ ಸ್ವಾಮೀಜಿ, ಷಣ್ಮುಖಪ್ಪಜ್ಜ ಧರ್ಮರಮಠ ಸಾನ್ನಿಧ್ಯ ವಹಿಸಿದ್ದರು.

ಪಿಕಾರ್ಡ್ ಬ್ಯಾಂಕ್‌ ಮಾಜಿ ಅಧ್ಯಕ್ಷ ಬಸವರಾಜ ನವಲಗುಂದ, ಪುರಸಭೆ ಮಾಜಿ ಅಧ್ಯಕ್ಷ ಮುತ್ತಣ್ಣ ಸಂಗಳದ, ನಿಂಬಣ್ಣ ಗಾಣಿಗೇರ, ಶಂಕ್ರಣ್ಣ ಸಂಕಣ್ಣವರ, ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ವೀರಣ್ಣ ಯಾಳಗಿ, ತಾಪಂ ಮಾಜಿ ಸದಸ್ಯ ಸಿದ್ದಣ್ಣ ಯಾಳಗಿ, ಶಿವಣ್ಣ ಪಲ್ಲೇದ, ವಿಶ್ವನಾಥ ಜಿಡ್ಡಿಬಾಗೀಲ, ಗ್ರಾಪಂ ಅಧ್ಯಕ್ಷೆ ಭೀಮವ್ವ ಗುಳಗುಳಿ, ಉಪಾಧ್ಯಕ್ಷ ಹನುಮಪ್ಪ ಅಸೂಟಿ ಉಪಸ್ಥಿತರಿದ್ದರು. ಮುತ್ತಣ್ಣ ಹಡಗಲಿ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ