ರೆಟ್ರೋ ಮೆಲೋಡಿ ಸಂಗೀತ ಸಂಭ್ರಮದಲ್ಲಿ ಸಂಸದ
ಬಡವರು, ನಿರ್ಗತಿಕರ ಸೇವೆಯ ಜತೆಗೆ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಈಶ್ವರಿ ಫೌಂಡೇಶನ್ ಮಾಡುತ್ತಿರುವ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಅವರು ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಈಶ್ವರಿ ಫೌಂಡೇಶನ್ ವತಿಯಿಂದ ಶನಿವಾರ ಸಂಜೆ ಆಯೋಜಿಸಿದ್ದ "ರೆಟ್ರೋ ಮೆಲೋಡಿ-ಮರೆಯಲಾಗದ ಸಂಗೀತ ಸಂಭ್ರಮ " ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸಂತೋಷ ವೆರ್ಣೇಕರ ಅವರು ಶಾಲಾ-ಕಾಲೇಜುಗಳಿಗೆ ಬಣ್ಣದರ್ಪಣ, ಉಚಿತ ಆರೋಗ್ಯ ಕಿಟ್, ಆಹಾರ ಕಿಟ್ ಹಾಗೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇಂತಹ ಸಮಾಜಮುಖಿ ಚಟುವಟಿಕೆ ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸಿದರು.
ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸಂತೋಷ ವೆರ್ಣೇಕರ ಪ್ರಾಸ್ತಾವಿಕವಾಗಿ ಮಾತನಾಡಿ, ಹಣ ಮತ್ತು ಅಂತಸ್ತು ಗಳಿಸುವುದಕ್ಕಿಂತ ಬಡವರು, ನಿರ್ಗತಿಕರ ಸೇವೆ ಮಾಡುವುದೇ ನಿಜವಾದ ಪುಣ್ಯದ ಕೆಲಸ. ಸೇವೆಯ ಮೂಲಕ ದೇವರನ್ನು ಕಾಣಬೇಕು ಎಂಬ ಆಶಯದೊಂದಿಗೆ ಈಶ್ವರಿ ಫೌಂಡೇಶನ್ ಕಾರ್ಯನಿರ್ವಹಿಸುತ್ತಿದೆ. ಸಂಗೀತ ಜನರಿಗೆ ಸಂತೋಷ ಮತ್ತು ನೆಮ್ಮದಿ ನೀಡುತ್ತದೆ ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ವಿಪ ಸದಸ್ಯರಾದ ಪ್ರದೀಪ್ ಶೆಟ್ಟರ್, ಲಿಂಗರಾಜ ಪಾಟೀಲ, ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ, ಡಾ. ರಮೇಶ ಮಹಾದೇವಪ್ಪನವರ, ರಾಜೇಶ ಪಾವಸ್ಕರ, ಅಜಿತ್ ಹಾಗೂ ಸಂದೀಪ ನಾಯಕ ಇದ್ದರು.