ಸಂಗಮ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ವೈದ್ಯ ಸಾಹಿತಿ
ವಚನ ಸಾಹಿತ್ಯವನ್ನು ಓದುವುದಕ್ಕಷ್ಟೇ ಸೀಮಿತಗೊಳಿಸದೆ, ಅದರ ಆಳವಾದ ಅರ್ಥವನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಹಿರಿಯ ವೈದ್ಯ ಸಾಹಿತಿ ಡಾ. ದಯಾನಂದ ನೂಲಿ ಹೇಳಿದರು.
ಅವರು ಭಾನುವಾರ ಇಲ್ಲಿನ ಕೆಎಲ್‌ಇ ಸಂಸ್ಥೆಯ ಪಿ.ಸಿ. ಜಾಬಿನ್ ವಿಜ್ಞಾನ ಮಹಾವಿದ್ಯಾಲಯದ ಸೆಮಿನಾರ್ ಹಾಲ್‌ನಲ್ಲಿ ಡಾ. ಸಂಗಮೇಶ ಹಂಡಗಿ ಸಾಹಿತ್ಯ ಪ್ರತಿಷ್ಠಾನದಿಂದ ಪ್ರದಾನ ಮಾಡುವ ರಾಜ್ಯಮಟ್ಟದ "ಸಂಗಮ ಸಿರಿ " ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪಕ್ಕೆ ದೇಶದ ವಿವಿಧ ಭಾಗಗಳಿಂದ ಶರಣರು, ಶರಣೆಯರು ಆಗಮಿಸಿದ್ದರು. ಭಾಷೆ, ಪ್ರದೇಶದ ಗಡಿಗಳನ್ನು ಮೀರಿ ಬಸವತತ್ವಕ್ಕೆ ಆಕರ್ಷಿತರಾಗಿ ಕಲ್ಯಾಣದಲ್ಲಿ ನೆಲೆಸಿದ್ದರು. ಶರಣರ ವಿಚಾರಧಾರೆಯಲ್ಲಿದ್ದ ಸಾರ್ವತ್ರಿಕ ಮಾನವೀಯ ಮೌಲ್ಯಗಳೇ ಇದಕ್ಕೆ ಕಾರಣವಾಗಿದ್ದವು ಎಂದರು.
ಇಂದಿನ ಯುವಪೀಳಿಗೆ ಧಾವಂತದ ಬದುಕಿನಲ್ಲಿ ಜೀವನದ ಮೌಲ್ಯಗಳನ್ನು ಮರೆಯುತ್ತಿದೆ. ಶರಣರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ. ವಚನಕಾರರ ಕುರಿತು ಅರ್ಥವಿಲ್ಲದ ಟೀಕೆ, ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.
ಪ್ರತಿಷ್ಠಾನದ ಗೌರವಾಧ್ಯಕ್ಷ, ಹಿರಿಯ ಪತ್ರಕರ್ತ ಗಣಪತಿ ಗಂಗೊಳ್ಳಿ ಮಾತನಾಡಿ, ಡಾ. ಸಂಗಮೇಶ ಹಂಡಗಿ ಅವರು ಕಾವ್ಯ, ವಚನ, ವಿಮರ್ಶೆ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 46ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ನಡೆ-ನುಡಿ ಒಂದಾಗಿಸಿಕೊಂಡು ಶುದ್ಧ ಬದುಕು ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಕವಿ ಮಹಾಂತಪ್ಪ ನಂದೂರು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಜಿ.ಬಿ. ಗೌಡಪ್ಪಗೋಳ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕ ಡಾ. ಪ್ರಭು ಗಂಜಿಹಾಳ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ, ಕೆಂಪಣ್ಣವರ ಉಪಸ್ಥಿತರಿದ್ದರು. ಡಾ. ವೀರೇಶ ಹಂಡಗಿ ಸ್ವಾಗತಿಸಿದರು.