ಅಭಿನಂದನಾ ಸಮಾರಂಭದಲ್ಲಿ ಹೇಳಿಕೆ
ಸಭಾಪತಿ ಸ್ಥಾನ ಅಧಿಕಾರವಲ್ಲ, ಅದೊಂದು ಪವಿತ್ರ ಜವಾಬ್ದಾರಿ. ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರಿಗೆ ಸಮಾನ ಅವಕಾಶ ನೀಡಿ, ಸದನದ ಘನತೆ ಕಾಪಾಡುವುದು ನನ್ನ ಕರ್ತವ್ಯ. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡುತ್ತೇನೆ ಎಂದು ವಿಪ ಸಭಾಪತಿ ಸಲೀಂ ಅಹ್ಮದ್ ಭರವಸೆ ನೀಡಿದರು.
ಅವರು ಭಾನುವಾರ ಸಂಜೆ ಇಲ್ಲಿನ ಗೋಕುಲ ರಸ್ತೆಯ ನಾನಕಿ ಕನ್ವೆನ್ಷನ್ ಆವರಣದಲ್ಲಿ ಧಾರವಾಡ ಜಿಲ್ಲಾ ನಾಗರಿಕ ವೇದಿಕೆಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಈ ಭಾಗದ ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ. ಸಭಾಪತಿಯಾಗಿ ಆಯ್ಕೆಯಾದ ಬಳಿಕ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಸಂವಿಧಾನಾತ್ಮಕವಾಗಿ ಅನಿವಾರ್ಯವಿಲ್ಲದಿದ್ದರೂ, ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕೆಂಬ ಆತ್ಮಸಾಕ್ಷಿಯಿಂದ ಈ ನಿರ್ಧಾರ ಕೈಗೊಂಡಿದ್ದೇನೆ. ವೈಯಕ್ತಿಕ ರಾಜಕೀಯ ಭಾವನೆಗಳಿಗಿಂತ ಸದನದ ಘನತೆ ಮತ್ತು ಸದಸ್ಯರ ಹಕ್ಕುಗಳ ರಕ್ಷಣೆಯೇ ಮುಖ್ಯ ಎಂದರು.
ಮೂವರು ಪ್ರಧಾನಮಂತ್ರಿಗಳೊಂದಿಗೆ ಕಾರ್ಯನಿರ್ವಹಿಸುವ ಅವಕಾಶ ದೊರೆತಿದೆ. ಹಿಂದೆ ರಾಜಕೀಯದಲ್ಲಿ ಬ್ಯಾಟ್ಸ್‌ಮನ್ ಆಗಿದ್ದ ನಾನು ಈಗ ಅಂಪೈರ್ ಸ್ಥಾನದಲ್ಲಿದ್ದೇನೆ. ಹೀಗಾಗಿ ಎಲ್ಲರಿಗೂ ನ್ಯಾಯ ಒದಗಿಸುವುದು ನನ್ನ ಜವಾಬ್ದಾರಿ ಎಂದರು.
ವಿಪ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಮಾತನಾಡಿ, ನೂತನ ಸಭಾಪತಿಗಳು ಕಲ್ಯಾಣ ಕರ್ನಾಟಕದ ಮಾದರಿಯಲ್ಲಿ ಕಿತ್ತೂರು ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ರಚಿಸಬೇಕು. ಈ ಕುರಿತು ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಅದ್ಧೂರಿ ಮೆರವಣಿಗೆ:
ಮುಸ್ಲಿಂ ಧರ್ಮಗುರು ತಾಜುದ್ದೀನ್ ಪೀರಾ, ಕ್ರೈಸ್ತ ಧರ್ಮಗುರು ಬಿಷಪ್ ಮಾರ್ಟಿನ್ ಹೋರಗಾವಿ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಧಾರವಾಡ ಜಿಲ್ಲಾ ನಾಗರಿಕ ವೇದಿಕೆ ಅಧ್ಯಕ್ಷ ವಿಶ್ವನಾಥ ಕುಲಕರ್ಣಿ, ಸಂಚಾಲಕ ಶಿವಾನಂದ ಮುತ್ತಣ್ಣವರ, ಧಾರವಾಡ ಮಹಾನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸದಾನಂದ ಡಂಗನವರ, ಗ್ರಾಮೀಣ ಘಟಕದ ಅಧ್ಯಕ್ಷ ಚಂದ್ರಶೇಖರ ಜುಟ್ಟಲ್ ಕೆಪಿಸಿಸಿ ಕಾರ್ಯದರ್ಶಿ ಶಣ್ಮುಖ ಶಿವಳ್ಳಿ ಸೇರಿದಂತೆ ಹಲವರಿದ್ದರು.