ಮಂಡ್ಯ ಜಿಲ್ಲಾ ಕಾರಾಗೃಹದೊಳಗೆ ‘ಕಾಂಚಾಣ’ ಸದ್ದು!

KannadaprabhaNewsNetwork |  
Published : Aug 28, 2026, 02:00 AM ISTUpdated : Aug 28, 2026, 10:51 AM IST
Mandya District Jail

ಸಾರಾಂಶ

ನ್ಯಾಯಾಲಯದ ಅನುಮತಿ ಇಲ್ಲದೆ ವಿಚಾರಣಾಧೀನ ಕೈದಿಯೊಬ್ಬನಿಗೆ ಆಸ್ಪತ್ರೆಗೆ ದಾಖಲಾಗಲು ಅವಕಾಶ ಮಾಡಿಕೊಟ್ಟ ಪ್ರಕರಣವನ್ನು ಜನ ಮರೆಯುವ ಮೊದಲೇ ಮಂಡ್ಯ ಜಿಲ್ಲಾ ಕಾರಾಗೃಹದ ಮತ್ತೊಂದು ಕರ್ಮಕಾಂಡ ಬಯಲಾಗಿದೆ.

ಮಂಡ್ಯ ಮಂಜುನಾಥ

ಮಂಡ್ಯ : ನ್ಯಾಯಾಲಯದ ಅನುಮತಿ ಇಲ್ಲದೆ ವಿಚಾರಣಾಧೀನ ಕೈದಿಯೊಬ್ಬನಿಗೆ ಆಸ್ಪತ್ರೆಗೆ ದಾಖಲಾಗಲು ಅವಕಾಶ ಮಾಡಿಕೊಟ್ಟ ಪ್ರಕರಣವನ್ನು ಜನ ಮರೆಯುವ ಮೊದಲೇ ಮಂಡ್ಯ ಜಿಲ್ಲಾ ಕಾರಾಗೃಹದ ಮತ್ತೊಂದು ಕರ್ಮಕಾಂಡ ಬಯಲಾಗಿದೆ.

ಜೈಲಿನಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲು ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿ ಒಂದೊಂದು ರೇಟ್ ಫಿಕ್ಸ್ ಮಾಡಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೈಲಿನಿಂದಲೇ ೨೦ ವಿಚಾರಣಾಧೀನ ಕೈದಿಗಳು ಬರೆದಿದ್ದಾರೆನ್ನಲಾದ ಪತ್ರ ಇದಾಗಿದ್ದು, ಕೈದಿ ನಂಬರ್‌ಗಳನ್ನು ಹಾಕಿ ಹೆಬ್ಬೆಟ್ಟಿನ ಗುರುತಿನ ಜೊತೆ ಸಹಿ ಮಾಡಿರುವ ಪತ್ರ ಇದಾಗಿದೆ.

ಪತ್ರದಲ್ಲಿ ಏನಿದೆ?: ಜಿಲ್ಲಾ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮಗಳು ಕಾರಾಗೃಹ ಅಧೀಕ್ಷಕಿ ಎಂ.ಶಾಂತಮ್ಮ ನೇತೃತ್ವದಲ್ಲೇ ನಡೆಯುತ್ತಿವೆ. ಜೈಲಿನ ಸಿಬ್ಬಂದಿ ಅನಿಲ, ರವಿ, ಶಿವರಾಜು ಇವರನ್ನು ಬಳಸಿಕೊಂಡು ಪ್ರತಿ ಸೆಲ್‌ಗಳಿಂದಲೂ ಹಣ ವಸೂಲಿ ಮಾಡುತ್ತಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ.

1 ಕೇಜಿ ಮಟನ್‌ಗೆ ₹೧೨೫೦, ಒಂದು ಕೇಜಿ ಕೋಳಿ ಮಾಂಸಕ್ಕೆ ₹೭೦೦ ವಸೂಲಿ ಮಾಡುತ್ತಾರೆ. ಸ್ವಾತಂತ್ರ್ಯ ದಿನಾಚರಣೆಯಂದು ನಡೆದ ಧ್ವಜಾರೋಹಣಕ್ಕೆ ೧ ಲಾಡುಗೆ ₹೨೫ರಂತೆ ಪಡೆದುಕೊಂಡು ೨೦೦ ಲಾಡು ಹಂಚಿದ್ದಾರೆ ಎಂದು ಪತ್ರದಲ್ಲಿ ದಾಖಲಿಸಿದ್ದಾರೆ.

ಸೆಲ್ ನಂ.೧ರಲ್ಲಿರುವ ಕೈದಿಗಳು ಪ್ರತಿ ತಿಂಗಳು ₹೧೦ ಸಾವಿರ, ಸೆಲ್-೩ರಲ್ಲಿರುವವರು ₹೧೫ ಸಾವಿರ, ಸೆಲ್-೬ಕ್ಕೆ ₹೮ ಸಾವಿರ, ಸೆಲ್ ೪ಕ್ಕೆ ₹೧೫ ಸಾವಿರ, ಸೆಲ್-೫ಕ್ಕೆ ₹೫ ಸಾವಿರದಂತೆ ನಿಗದಿಪಡಿಸಿದ್ದಾರೆ. ಬ್ಯಾರಕ್ ಬಿ-೫ನವರು ₹೨೫ ಸಾವಿರ ಕೊಡುತ್ತಿದ್ದಾರೆ. ಬ್ಯಾರಕ್ ಬಿ-೬ನಿಂದ ₹೧೦ ಸಾವಿರ ನೀಡುತ್ತಿರುವುದಾಗಿ ಆರೋಪಿಸಲಾಗಿದೆ.

ಸೆಲ್ ಬದಲಾವಣೆಗೆ ₹2000

ಸೆಲ್ ಬದಲಾವಣೆಗೆ ₹2000 ಕೇಳುವರು. ಪನಿಷ್‌ಮೆಂಟ್ ಸೆಲ್‌ನಿಂದ ಹೊರಬರಬೇಕಾದರೆ ಶಿವರಾಜುಗೆ ₹೧೦ ಸಾವಿರ ಕೊಡಬೇಕು. ಪ್ರತಿ ತಿಂಗಳಿಗೆ ಒಂದು ಬಾರಿ ಕೊಡಬೇಕಾದ ಬ್ರಷ್, ಪೇಸ್ಟ್, ಸೋಪು ಎಲ್ಲವನ್ನೂ ಆರು ತಿಂಗಳಿಗೆ ಒಂದು ಬಾರಿ ಕೊಡುತ್ತಾರೆ. ಪ್ರತಿದಿನ ಸಿಬ್ಬಂದಿಗೆ ಸೌತೆಕಾಯಿ, ತಗನಿಕಾಳು ಸಾಂಬಾರ್ ಬೇರೆ ವಿಶೇಷ ಸಾಂಬಾರ್‌ಗಳನ್ನು ಮಾಡಿಸುತ್ತಾರೆ. ತರಕಾರಿಗಳನ್ನು ಸಿಸಿಟಿವಿ ಮರೆಮಾಚಿ ಒಳಗಡೆ ತರುತ್ತಾರೆ.

ಚಪಾತಿ ಒಂದಕ್ಕೆ ₹೨೫ ಪಡೆದರೆ, 1 ಮೊಟ್ಟೆಗೆ ₹೧೫ ಕೇಳುತ್ತಾರೆ. ಅಡುಗೆ ಮನೆಗೆ ೩ ಸೀಸಿ ಟೀವಿ ಇರಬೇಕು. ಆದರೆ, ಇಲ್ಲಿ ಒಂದು ಮಾತ್ರವಿದೆ. ಅಧೀಕ್ಷಕರ ಕಚೇರಿಗೆ ಸಿಸಿಟೀವಿ ಇಲ್ಲ. ಶಿವರಾಜು ಮತ್ತು ಅನಿಲ್‌ ಅವರ ದಬ್ಬಾಳಿಕೆಯನ್ನು ನಿಲ್ಲಿಸಿ ಬಡ ಕೈದಿಗಳಿಗೆ ಅನುಕೂಲ ಕಲ್ಪಿಸುವಂತೆ ಕೋರಿದ್ದಾರೆ.

ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಗೆ ನೀಡುವಂತಹ ಆಹಾರ ಪಟ್ಟಿ ಮತ್ತು ಇರುವ ಸೌಕರ್ಯಗಳ ಪಟ್ಟಿಯನ್ನು ಹಾಕದೆ ಅದರ ಬಗ್ಗೆ ಯಾವುದೇ ಮಾಹಿತಿಯನ್ನೂ ನೀಡದೆ ಸಂಪೂರ್ಣವಾಗಿ ಮರೆಮಾಚಲಾಗಿದೆ. ಕಾರಾಗಹೃದಲ್ಲಿ ಬಂಧಿತ ವಿಚಾರಣಾ ಆರೋಪಿಗಳಾಗಿರುವ ನಾವು ನಮ್ಮ ಕೈಬೆರಳಚ್ಚು ಮತ್ತು ಸಹಿಯನ್ನು ನಮ್ಮ ಇಚ್ಛೆಯಿಂದ ಮಾಡಿರುವುದಾಗಿ ಪತ್ರದಲ್ಲಿ ದಾಖಲಿಸಿದ್ದಾರೆ.

ಡಿಜಿಪಿ ಅಲೋಕ್‌ ಮಾಡಿರುವ ಬದಲಾವಣೆಗಳೇನು?

ವಿಚಾರಣಾಧೀನ ಕೈದಿಯೊಬ್ಬರನ್ನು ನ್ಯಾಯಾಲಯದ ಅನುಮತಿ ಪಡೆಯದೆ ಆಸ್ಪತ್ರೆಗೆ ದಾಖಲಾಗಿ ಗೆಳತಿ ಜೊತೆ ಇರುವುದಕ್ಕೆ ಅವಕಾಶ ಮಾಡಿಕೊಟ್ಟ ಪ್ರಕರಣದ ಪರಿಶೀಲನೆಗೆ ಆಗಮಿಸಿದ್ದ ಡಿಜಿಪಿ ಅಲೋಕ್‌ಕುಮಾರ್ ಅವರು ಕಾರಾಗೃಹದಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದಿದ್ದಾರೆ.

ಬ್ಯಾರಕ್ ಸೆಲ್‌ಗಳಲ್ಲಿ ಆಲ್‌ಫಾಬೆಟಿಕ್ ಆರ್ಡರ್‌ನಂತೆ ಕೈದಿಗಳನ್ನಿರಿಸುವುದು. ಮನೆ ಊಟ ಕೊಡುವುದನ್ನು ನಿಲ್ಲಿಸಬೇಕು. ಚಪಾತಿ ಊಟವನ್ನೂ ಕೊಡಬಾರದು. ಬೀಡಿ, ಸಿಗರೆಟ್, ಮೊಬೈಲನ್ನು ಸಂಪೂರ್ಣ ನಿಷೇಧಿಸುವಂತೆ ಸೂಚನೆ ನೀಡಿದ್ದಾರೆ.

ಸೆಲ್‌ ಬದಲಿಸಿದ್ದಕ್ಕೆ ಪತ್ರ

ಡಿಜಿಪಿ ಅಲೋಕ್‌ ಕುಮಾರ್ ಅವರು ಬಂದು ಹೋದ ಬಳಿಕ ಅವರ ಸೂಚನೆಯಂತೆ ಕೈದಿಗಳಿದ್ದ ಸೆಲ್‌ಗಳನ್ನು ಬದಲಾಯಿಸಲಾಗಿದೆ. ಜೈಲು ಸಿಬ್ಬಂದಿ ಕೈದಿಗಳಿಗೆ ತಂದು ಊಟ ಕೊಡುವುದಿಲ್ಲ. ಟೆಂಡರ್ ಪಡೆದಿರುವವರು ಅವರಿಗೆ ಊಟ ನೀಡುತ್ತಾರೆ. ಡಿಜಿಪಿ ಸೂಚನೆಯಂತೆ ಕೈದಿಗಳ ಸೆಲ್‌ಗಳು ಬದಲಾಗಿರುವುದರಿಂದ ಅವರು ಅಸಮಾಧಾನಗೊಂಡಿರಬಹುದು. ಅದಕ್ಕಾಗಿ ಕೆಲವರು ಸುಳ್ಳು ಆರೋಪ ಮಾಡಿರಬಹುದು. ಕೈದಿಗಳು ಬರೆದಿರುವ ಪತ್ರದ ವಿಚಾರ ನನಗೆ ಗೊತ್ತಿಲ್ಲ. ಜೈಲಿನಲ್ಲಿರುವ ಕೈದಿಗಳೇ ಪತ್ರ ಬರೆದಿದ್ದಾರೆಂಬ ಬಗ್ಗೆ ಖಚಿತತೆ ಇಲ್ಲ. ಈ ಕುರಿತು ತನಿಖೆ ನಡೆಸಿ ಖಚಿತಪಡಿಸಿಕೊಳ್ಳುತ್ತೇನೆ.

-ಎಂ.ಶಾಂತಮ್ಮ, ಅಧೀಕ್ಷಕಿ, ಜಿಲ್ಲಾ ಕಾರಾಗೃಹ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಪ್ರಶ್ನಿಸುವುದು, ಮೌಲ್ಯದ ಜತೆ ರಾಜಿ ಬೇಡ : ಸಿಎಂ
ವಿಜಯದಶಮಿ ಬಳಿಕ ಹೋರಾಟ ತೀವ್ರ : ಎಚ್ಡಿಕೆ