ಸಮಾನತೆಯ ಮನೋಭಾವ ಪ್ರತಿಯೊಬ್ಬರಲ್ಲೂ ಜಾಗೃತವಾಗಬೇಕು: ಸುರೇಶ್ ಗೌಡ

KannadaprabhaNewsNetwork |  
Published : Jun 20, 2026, 01:45 AM IST
19ಕೆಎಂಎನ್ ಡಿ23 | Kannada Prabha

ಸಾರಾಂಶ

ಗೆಲ್ಲುವ ಸಂಖ್ಯಾಬಲವಿಲ್ಲದಿದ್ದರೂ ನಮ್ಮಲ್ಲಿದ್ದ ಕೆಲ ಸಮಸ್ಯೆಗಳ ಆತ್ಮಾವಲೋಕನದ ದೃಷ್ಟಿಯಿಂದ ಸ್ಪರ್ಧೆ ಅವಶ್ಯವಿತ್ತು. ಅಡ್ಡ ಮತದಾನ ಇದು ಮೊದಲೇನಲ್ಲ. ಆದರೂ ಆ ಬಗ್ಗೆ ಪಕ್ಷದ ವರಿಷ್ಠರು ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದ ಬಿಜೆಪಿ ಮತ್ತು ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೂ ನಮ್ಮಿಬ್ಬರ ಮಧ್ಯೆ ಹುಳಿ ಹಿಂಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪ್ರಜಾಪ್ರಭುತ್ವ ವ್ಯವಸ್ಥೆ ಆಧಾರವಾಗಿರುವ ಸಂವಿಧಾನದ ಆಶಯದಂತೆ ಸಮ ಸಮಾಜದ ಗುರಿ ತಲುಪಬೇಕಾದರೆ ಸಮಾನತೆಯ ಮನೋಭಾವ ಪ್ರತಿಯೊಬ್ಬರಲ್ಲೂ ಜಾಗೃತವಾಗಬೇಕು ಎಂದು ಮಾಜಿ ಶಾಸಕ ಸುರೇಶ್‌ಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಶಿಕ್ಷಕರ ಭವನದಲ್ಲಿ ಸ್ವಾಭಿಮಾನಿ ಬಿ.ಕೃಷ್ಣಪ್ಪ ಬಣದ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರವರ 135ನೇ ಹಾಗೂ ಪ್ರೊ.ಬಿ.ಕೃಷ್ಣಪ್ಪ ಅವರ 88ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆಧುನಿಕತೆ ಮತ್ತು ತಂತ್ರಜ್ಞಾನ ಮುಂದುವರಿದಿರುವ ಪ್ರಸ್ತುತ ದಿನಮಾನದಲ್ಲೂ ಜಾತಿ ಪದ್ಧತಿ ಜೀವಂತವಾಗಿರುವುದು ನಿಜಕ್ಕೂ ವಿಷಾದನೀಯ. ಡಾ.ಬಿ.ಆರ್.ಅಂಬೇಡ್ಕರ್‌ರವರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಪ್ರೊ.ಬಿ.ಕೃಷ್ಣಪ್ಪ ಅವರು ತಮ್ಮ ಹೋರಾಟದುದ್ದಕ್ಕೂ ದಲಿತ ಸಮುದಾಯದ ಏಳ್ಗೆಯ ಕನಸು ಕಂಡಿದ್ದವರು. ಅಂತಹ ಮಹನೀಯರ ಜನ್ಮ ದಿನಾಚರಣೆ ಕೇವಲ ಇಂತಹ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೆ ಅವರ ಸದುದ್ದೇಶಗಳು ಸಾಕಾರವಾಗುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಸಂವಿಧಾನ ಎಂಬುದು ಯಾವುದೇ ಒಂದು ಜಾತಿ, ವರ್ಗಕ್ಕೆ ಸೀಮಿತವಾದುದಲ್ಲ. ಆದಾಗ್ಯೂ ಶೋಷಿತ ವರ್ಗಗಳ ಅನುದಾನಗಳು ಅರ್ಹ ಫಲಾನುಭವಿಗಳಿಗೆ ಅಥವಾ ಅಂತಹ ಶೋಷಿತ ವರ್ಗಕ್ಕೆ ತಲುಪದಿರುವುದು ಆಡಳಿತ ವ್ಯವಸ್ಥೆಯ ದುಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಅಧಿಕಾರಕ್ಕಾಗಿ ಸಮುದಾಯಗಳ ನಡುವೆ ಸಾಮರಸ್ಯ ಕದಡುವ ಪ್ರಯತ್ನ ನಿಜಕ್ಕೂ ಬೇಸರದ ಸಂಗತಿ. ಸಾಮರಸ್ಯವಿದ್ದರೆ ಯಶಸ್ಸಿನ ಗುರಿ ಮುಟ್ಟಲು ಸಾಧ್ಯ ಎಂದು ಸಲಹೆ ನೀಡಿದರು.

ದಸಂಸ ರಾಜ್ಯ ಸಂಚಾಲಕ ಕಂಚಿನಕೋಟೆ ಮೂರ್ತಿ ಹಾಗೂ ಮುಖಂಡ ಆಟೋ ಶಿವಣ್ಣ ಮಾತನಾಡಿದರು. ಜಿಲ್ಲಾ ಸಂಚಾಲಕ ಎಚ್.ಕ್ಯಾತನಹಳ್ಳಿ ಮಂಜು ಮತ್ತು ತಂಡ ಗೀತಗಾಯನ ನಡೆಸಿಕೊಟ್ಟರು. ವೇದಿಕೆಯಲ್ಲಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಂ.ಸಿ.ಚನ್ನಪ್ಪ, ಸಮಾಜ ಸೇವಕ ಸಿ.ಜಿ.ರಮೇಶ್, ದಸಂಸ ಮುಖಂಡರಾದ ಮುಳಕಟ್ಟೆ ಶಿವರಾಮಯ್ಯ, ಸಿ.ಬಿ.ನಂಜುಂಡಪ್ಪ, ಹುರಳಿಗಂಗನಹಳ್ಳಿ ಮಹದೇವು, ಸೋಮನಹಳ್ಳಿ ಅಂದಾನಿ ಸೇರಿದಂತೆ ಹಲವರು ಇದ್ದರು.

-----------

ಪರಿಷತ್ ಫಲಿತಾಂಶ ದಿಕ್ಸೂಚಿಯಲ್ಲ :

ಗೆಲ್ಲುವ ಸಂಖ್ಯಾಬಲವಿಲ್ಲದಿದ್ದರೂ ನಮ್ಮಲ್ಲಿದ್ದ ಕೆಲ ಸಮಸ್ಯೆಗಳ ಆತ್ಮಾವಲೋಕನದ ದೃಷ್ಟಿಯಿಂದ ಸ್ಪರ್ಧೆ ಅವಶ್ಯವಿತ್ತು. ಅಡ್ಡ ಮತದಾನ ಇದು ಮೊದಲೇನಲ್ಲ. ಆದರೂ ಆ ಬಗ್ಗೆ ಪಕ್ಷದ ವರಿಷ್ಠರು ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದ ಬಿಜೆಪಿ ಮತ್ತು ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೂ ನಮ್ಮಿಬ್ಬರ ಮಧ್ಯೆ ಹುಳಿ ಹಿಂಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಅಲ್ಲದೆ ಈ ಫಲಿತಾಂಶ ಮುಂದೆ ನಡೆಯುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಸುರೇಶ್‌ಗೌಡರು ಉತ್ತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜುಲೈ 15ರೊಳಗೆ ಇಲಾಖೆಗಳ ಕ್ರಿಯಾ ಯೋಜನಾ ವರದಿ ಸಲ್ಲಿಸಿ
ಹಾಡಹಗಲೇ ಮನೆಗೆ ನುಗ್ಗಿ ವೃದ್ಧೆ ಹತ್ಯೆ: ಕಿವಿ ಸಮೇತ ಓಲೆ ಕಿತ್ತು ಪರಾರಿ