ಕನ್ನಡಪ್ರಭ ವಾರ್ತೆ ಕಲಬುರಗಿ
ಉತ್ತರಾದಿ ಮಠಾಧೀಶ ಸತ್ಯಾತ್ಮ ತೀರ್ಥರ ಅನುಗ್ರಹ ಹಾಗೂ ಸಂಕಲ್ಪದೊಂದಿಗೆ ಮಳಖೇಡದ ಉತ್ತರಾದಿ ಮಠದ ವ್ಯವಸ್ಥಾಪಕರಾದ ಪಂ.ವೆಂಕಣ್ಣಾಚಾರ್ಯ ಪೂಜಾರಿಯವರು ಕಳೆದ 1 ವರ್ಷದಿಂದ ಆನ್‌ಲೈನ್ ಮೂಲಕ ನಿತ್ಯ 4 ಹಂತಗಳಲ್ಲಿ ಅರ್ಥ ಸಹಿತ 1008 ಜನರಿಗೆ ಹೇಳಿಕೊಟ್ಟ ಸುಮಧ್ವ ವಿಜಯ ಪಾಠದ ಫಲವೇ ಆಗಿದೆ. ಇಂದಿನ ಮಧ್ವ ನವಮಿಯಲ್ಲಿ ಎತ್ತ ನೋಡಿದರತ್ತ ಸುಮಧ್ವ ವಿಜಯ ಮಳಖೇಡದಲ್ಲಿ ಪ್ರತಿಧ್ವನಿಸಿತ್ತು.
ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದ ಉತ್ತರಾದಿ ಮಠ ಜಯತೀರ್ಥರ ಮೂಲ ಸನ್ನಿಧಾನದಲ್ಲಿ ಮಧ್ವ ನವಮಿ ನಿಮಿತ್ತ ಹಾಗೂ ಪಾರಾಯಣದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು.ಸತ್ಯಾತ್ಮತೀರ್ಥರ ಸಾನ್ನಿಧ್ಯದಲ್ಲಿ ಜರುಗಿದ ಈ ಜ್ಞಾನ ಸತ್ರ ಕಾಯಕ್ರಮದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಸೇರಿದಂತೆ ದೇಶದ ಉದ್ದಲಗಳಿಂದಲೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ನಂತರ ಶ್ರೀ ಮಧ್ವಾಚಾರ್ಯರ ಮೂರ್ತಿಗೆ 108 ಕೇಜಿ ಜೇನು ತುಪ್ಪದಿಂದ ಅಭಿಷೇಕ ಮಾಡಲಾಯಿತು. ನಂತರ ಶ್ರೀಗಳು ದಿಗ್ವೀಜಯ ಮೂಲರಾಮದೇವರ ಪೂಜೆ ನಡರವೇರಿಸಿದರು. ಶ್ರೀರಾಮದೇವರಿಗೆ ಲಕ್ಷ ತುಳಸಿ ಅರ್ಚನೆ ಮಾಡಲಾಯಿತು.
ಮಧ್ವಾಚಾರ್ಯರ ಕೊಡುಗೆ ಅನನ್ಯ
ಗುರುಗಳಲ್ಲಿ ಭಕ್ತಿ ಮಾಡಿದರೆ ಮುಕ್ಕುಂದನ ಮೇಲೆ ಭಕ್ತಿ ಬರುತ್ತದೆ. ಭಗವಂತನನ್ನು ಭಜಿಸಿದರೆ ಮೋಕ್ಷದ ಫಲ ಸಿಗುತ್ತದೆ. ಮೋಕ್ಷವನ್ನು ಭಗವಂತ ಕೊಡುತ್ತಾನೆ. ಆದರೆ ಭಗವಂತನ ಕಡೆ ನಮ್ಮನ್ನು ಕರೆದುಕೊಂಡು ಹೋಗುವ ಶಕ್ತಿ ಗುರುಗಳಲ್ಲಿದೆ. ಸಹಸ್ರಾರು ಭಕ್ತರು ಲಕ್ಷ ಸಲ ಸುಮಧ್ವೀಜಯ ಪಾರಾಯಣ ಮಾಡಿ ಮಳಖೇಡದ ಇಂದ್ರನಸನ್ನಿಧಾನದಲ್ಲಿ ಸಮರ್ಪಣೆ ಮಾಡಿದ್ದು ಪುಣ್ಯದ ಕಾರ್ಯ. ಇಂಥ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಶ್ರೀಗಳು ನುಡಿದರು.
ಮಳಖೇಡದ ಹಿರಿಯರಾದ ಕಮಲಾಕರ ಕುಲಕರ್ಣಿ ಅವರು ರಚಿಸಿದ ಅದಮ್ಯ ಚೇತನ ಪುಸ್ತಕವನ್ನು ಸತ್ಯಾತ್ಮತೀರ್ಥರ ಸಮ್ನುಖದಲ್ಲಿ ಪಂ. ವೆಂಕಣ್ಣಾಚಾರ್ಯ ಪೂಜಾರ ಬಿಡುಗಡೆಗೊಳಿಸಿದರು. ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ದಿ. ಕಮಲಾಬಾಯಿ ಮಣೂರ ಅವರ ಜೀವನ ಚರಿತ್ರೆಯನ್ನು ಕಮಲಾಕರ ಕುಲಕರ್ಣಿ ಅವರು ಅದಮ್ಯ ಚೇತನ ಪುಸ್ತಕದಲ್ಲಿ ನಿರೂಪಿಸಿದ್ದಾರೆ.