ಎಸ್ಸೆಸ್ಸೆಂಗೆ ಅಧಿಕಾರ ಮದ, ಏನೇನೋ ಮಾತಾಡ್ತಾರೆ: ಹರೀಶ ಟೀಕೆ

KannadaprabhaNewsNetwork | Published : Mar 10, 2025 12:17 AM

ಸಾರಾಂಶ

ನನ್ನನ್ನು ಕೌನ್ಸಿಲರ್‌ ಮಾಡಿದ್ದು, ನಮ್ಮ ತಂದೆ ಸಮಾಧಿಯನ್ನು ನನಗೆ ತೋರಿಸಿದ್ದು ತಾವೇ ಎಂದು ಮಾಧ್ಯಮಗಳ ಮುಂದೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹೇಳಿಕೆ ನೀಡಿದ್ದಾರೆ. ಆದರೆ, ಅವರು ಆಗಿನ್ನೂ ಬಾಲಕನಾಗಿದ್ದ ವಿಚಾರ ಮರೆಯಬಾರದು. ಈಗ ಅಧಿಕಾರದ ಮದದ ಕಾಯಿಲೆ, ಮನಸ್ಸಿಗೆ ಏನು ತೋಚುತ್ತೋ ಅದನ್ನು ಹೇಳುವ ಕಾಯಿಲೆಯಿಂದ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿರಬೇಕು ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ದಾವಣಗೆರೆಯಲ್ಲಿ ತಿರುಗೇಟು ನೀಡಿದ್ದಾರೆ.

- ತಂದೆ ಸಮಾಧಿ ತೋರಿಸಿದ್ದೆ, ಕೌನ್ಸಿಲರ್ ಮಾಡಿದ್ದೆ ಅನ್ನೋರು ಆಗ ಬಾಲಕ ಆಗಿದ್ದು ಮರೆಯಬೇಡಿ ಎಂದು ತಾಕೀತು

- ನಮ್ಮದು ದೊಡ್ಡ ಜಮೀನ್ದಾರರ ಕುಟುಂಬ, ಅಜ್ಜ, ಅಪ್ಪ ಸಹ ಆಗಲೇ ಶಾಸಕರಾಗಿದ್ದವರು

- ಶಾಬನೂರು ಜಮೀನು ಭೂಸ್ವಾಧೀನಕ್ಕೆ ಖರ್ಗೆ ಮುಂದಾದಾಗ ಹೋರಾಡಿ ಉಳಿಸಿದ್ದು ನಾವೇ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ನನ್ನನ್ನು ಕೌನ್ಸಿಲರ್‌ ಮಾಡಿದ್ದು, ನಮ್ಮ ತಂದೆ ಸಮಾಧಿಯನ್ನು ನನಗೆ ತೋರಿಸಿದ್ದು ತಾವೇ ಎಂದು ಮಾಧ್ಯಮಗಳ ಮುಂದೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹೇಳಿಕೆ ನೀಡಿದ್ದಾರೆ. ಆದರೆ, ಅವರು ಆಗಿನ್ನೂ ಬಾಲಕನಾಗಿದ್ದ ವಿಚಾರ ಮರೆಯಬಾರದು. ಈಗ ಅಧಿಕಾರದ ಮದದ ಕಾಯಿಲೆ, ಮನಸ್ಸಿಗೆ ಏನು ತೋಚುತ್ತೋ ಅದನ್ನು ಹೇಳುವ ಕಾಯಿಲೆಯಿಂದ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿರಬೇಕು ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ತಿರುಗೇಟು ನೀಡಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರ ಹೇಳಿಕೆಗೆ ಕಾರಣಾಂತರದಿಂದ ಆಗ ಪ್ರತಿಕ್ರಿಯಿಸಲು ನನಗೆ ಆಗಿರಲಿಲ್ಲ. ನಾನು ನಗರಸಭೆ ಸದಸ್ಯನಾಗಿದ್ದು 1983ರಲ್ಲಿ. ಆಗಿನ ಹಿರಿಯರನ್ನೆಲ್ಲಾ ಸೋಲಿಸಿ, ವಿದ್ಯಾರ್ಥಿ, ಯುವಜನರ ಸಹಕಾರದಲ್ಲಿ ಗೆದ್ದಿದ್ದೆ. ಆಗ ಮಲ್ಲಿಕಾರ್ಜುನ ವಯಸ್ಸು ಕೇವಲ 16 ವರ್ಷ. ಆಗ ಮಲ್ಲಿಕಾರ್ಜುನಗೆ ನಾನು ನೋಡಿರಲೂ ಇಲ್ಲ ಎಂದರು.

16ನೇ ವಯಸ್ಸಿನಲ್ಲೇ ಮಲ್ಲಿಕಾರ್ಜುನ ನನ್ನನ್ನು ಹೇಗೆ ಕೌನ್ಸಿಲರ್ ಮಾಡಿದರು? ನನಗೆ ಎಸ್‌.ಎಸ್‌. ಬಕ್ಕೇಶ್ ಹಳೆಯ ಸ್ನೇಹಿತರು. ಎಸ್‌.ಎಸ್‌. ಗಣೇಶ ಸಹ ಒಳ್ಳೆಯ ಗೆಳೆಯ. ನಮ್ಮದು ಬೂದಿಹಾಳ್‌ನಲ್ಲಿ ದೊಡ್ಡ ಜಮೀನ್ದಾರರ ಕುಟುಂಬ. ಅಜ್ಜ ಮೈಸೂರು ರಾಜ್ಯದಲ್ಲೇ 2 ಸಲ ಶಾಸಕರಿದ್ದರು. ನಮ್ಮ ತಂದೆ ಪಿ.ಬಸವನಗೌಡ 2 ಸಲ ಶಾಸಕಾರಿದ್ದರು. ಕಾರ್ಮಿಕರನ್ನು ಸಂಘಟಿಸುವ ಜೊತೆಗೆ ಹೋರಾಟದಲ್ಲೂ ಇದ್ದವರು. ನಮ್ಮಂತಹ ಮನೆತನ ನಿಮ್ಮದಲ್ಲ ಎಂದು ಅವರು ಕುಟುಕಿದರು.

ಸಂಪುಟ ಸಚಿವನೆಂದರೆ ಸಾಮಾನ್ಯ ವ್ಯಕ್ತಿಯಲ್ಲ. ಇನ್ನಾದರೂ ಮಾತನಾಡುವಾಗ ಎಸ್ಸೆಸ್ಸೆಂಗೆ ಎಚ್ಚರ ಇರಲಿ. ನನ್ನ ತಂದೆ ಡಿಸೆಂಬರ್ 1978ರಲ್ಲಿ ನಿಧನರಾಗಿದ್ದು, ಆಗ ನೀವಿನ್ನೂ ಹತ್ತೂವರೆ ವರ್ಷದ ಬಾಲಕ. ನೀವು ಹೇಗೆ ನನ್ನ ಸಮಾಧಿ ತೋರಿಸಲು ಸಾಧ್ಯ? ನನ್ನ ತಂದೆ ಸಮಾಧಿ ಸುತ್ತಮುತ್ತಲಿನ ಶಾಬನೂರು ಗ್ರಾಮಸ್ಥರ ಜಮೀನನ್ನು ಆಗಿನ ವೀರೇಂದ್ರ ಪಾಟೀಲರ ಸರ್ಕಾರದಲ್ಲಿ ಕಂದಾಯ ಮಂತ್ರಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ಮುಖಾಂತರ ಭೂ ಸ್ವಾಧೀನಕ್ಕೆ ಮುಂದಾದಾಗ ನಿರಂತರ ಹೋರಾಟ ಮಾಡಿ, ತಡೆದವರಲ್ಲಿ ನಾನೂ ಒಬ್ಬ ಎಂದು ಹರೀಶ ಹೇಳಿದರು.

ಅನಂತರ ಬಂಗಾರಪ್ಪ ಮುಖ್ಯಮಂತ್ರಿಯಾದಾಗ ಆರ್.ಎಲ್‌.ಜಾಲಪ್ಪ ಕಂದಾಯ ಸಚಿವರಾದರು. ನಮ್ಮ ನಿರಂತರ ಹೋರಾಟದಿಂದಾಗಿ ಯಾರೋ ಕಟ್ಟಿದ್ದ, ಈಗ ನಿಮ್ಮ ಕುಟುಂಬದ ಕೈಯಲ್ಲಿರುವ ಬಾಪೂಜಿ ವಿದ್ಯಾಸಂಸ್ಥೆಗೆ ಜಮೀನು ಸಿಗಲಿಲ್ಲ. ನಿಮ್ಮ ತಂದೆ ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿಯಾಗಲು ಆಲೂರು ಚಂದ್ರಶೇಖರಪ್ಪ, ನನ್ನ ತಂದೆ ಪಿ.ಬಸವನಗೌಡರೇ ಕಾರಣ. ಆಲೂರು ಮನೆತನ, ಬಸವನಗೌಡರ ಮನೆತನದ ಬೆಂಬಲ ಇಲ್ಲದಿದ್ದರೆ, ಶಾಮನೂರು ಶಿವಶಂಕರಪ್ಪನವರು ಬಿಇಎ ಕಾರ್ಯದರ್ಶಿಯೇ ಆಗುತ್ತಿರಲಿಲ್ಲ ಎಂದು ಅವರು ಕುಟುಕಿದರು.

- - -

ಬಾಕ್ಸ್‌ * ಕ್ಷೇತ್ರಕ್ಕೆ ಕೆಲಸ ಮಾಡಲಾಗಿದ್ದರೆ ರಾಜಿನಾಮೆ ನೀಡಿ ಜಿಲ್ಲೆಯ ಯಾವುದೇ ಶಾಸಕರನ್ನೂ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಮೊನ್ನೆ ಕೆಡಿಪಿ ಸಭೆಯಲ್ಲೇ ಶಾಸಕರೊಂದಿಗೆ ಅಧಿಕಾರಿಗಳು ಶಾಮೀಲಾಗಿ ಹಣ ಪಡೆದಿದ್ದಾರೆಂಬಂತೆ ಮಾತನಾಡಿದ್ದಾರೆ. ಯಾವುದೇ ಶಾಸಕರು, ಜನ ಪ್ರತಿನಿಧಿಗಳಿಗೆ ಗೌರವ ಕೊಡದೇ, ಉಡಾಫೆಯಾಗಿ ಮಾತನಾಡುವುದು ಸರಿಯಲ್ಲ. ಜಿಲ್ಲಾ ಮಂತ್ರಿಯಾಗಿ ಕೇವಲ ನಿಮ್ಮ ಸಕ್ಕರೆ ಕಾರ್ಖಾನೆಗಳ ಅಭಿವೃದ್ಧಿಗೆ ಗಮನಹರಿಸಿದ್ದೀರಿ ಹೊರತು, ದಾವಣಗೆರೆ ಜಿಲ್ಲೆಯ ಅಭಿವೃದ್ಧಿ ಕಡೆಗೆ ಗಮನಹರಿಸುತ್ತಿಲ್ಲ. ಇನ್ನಾದರೂ ವಿದೇಶ ಪ್ರಯಾಣ ಬಿಟ್ಟು, ಜಿಲ್ಲೆ ಅಭಿವೃದ್ಧಿಗೆ ಮುಂದಾಗಿ. ಕ್ಷೇತ್ರ, ಜಿಲ್ಲೆಯ ಅಭಿವೃದ್ಧಿಗಾಗಿ ಕೆಲಸ ಮಾಡಲಾಗಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ

- - - (ಫೋಟೋ: ಬಿ.ಪಿ.ಹರೀಶ್)

Share this article