ಕನ್ನಡಪ್ರಭ ವಾರ್ತೆ ನಾಗಮಂಗಲ
ದೈಹಿಕ ಮತ್ತು ಮಾನಸಿಕ ಒತ್ತಡ ನಿಯಂತ್ರಿಸಲು ಯೋಗ ಸುಲಭ ಸಾಧನವಾಗಿದೆ ಎಂದು ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾಕೇಂದ್ರದ ಹಿರಿಯ ಸಂಶೋಧನಾಧಿಕಾರಿ ಡಾ.ಸಿಂಧುಶ್ರೀ ಹೇಳಿದರು.ತಾಲೂಕಿನ ಮುಳಕಟ್ಟೆ ಗ್ರಾಮದ ರಂಗದಹಟ್ಟಿ ಆವರಣದಲ್ಲಿ ಬಿಎಸ್‌ಎಫ್ ಫೌಂಡೇಷನ್, ಪಟ್ಟಣದ ಭೂ ಸಿರಿ ರೈತ ಉತ್ಪಾದಕರ ಕಂಪನಿ ಹಾಗೂ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನದ ಸಹಭಾಗಿತ್ವದಲ್ಲಿ ಈಚೆಗೆ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ನೈಸರ್ಗಿಕ ಚಿಕಿತ್ಸಾ ಪದ್ಧತಿ ಆರೋಗ್ಯ ಕ್ಷೇತ್ರದಲ್ಲಿ ವಿಶೇಷ ಸ್ಥಾನ ಪಡೆದಿದೆ. ಮಾನಸಿಕ ಮತ್ತು ದೈಹಿಕ ಸ್ಥಿರತೆ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಕ್ರಮ ಬದ್ಧ ಆಹಾರ ಪದ್ಧತಿ ಮತ್ತು ದೈನಂದಿನ ಚಟುವಟಿಕೆಗಳ ಅನುಸರಣೆಯ ಜೊತೆಗೆ ಯೋಗಭ್ಯಾಸದಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು ಎಂದರು.ಯೋಗ ಮತ್ತು ಧ್ಯಾನ ಆರೋಗ್ಯದ ಸರಳ ಮಾರ್ಗಗಳು. ಆರೋಗ್ಯದಲ್ಲಿ ಆಗಬಹುದಾದ ಸಣ್ಣ ಪುಟ್ಟ ವ್ಯತ್ಯಾಸಗಳ ಬಗ್ಗೆ ಉದಾಸೀನ ಮಾಡಬಾರದು. ತೀವ್ರತರನಾದ ಪರಿಣಾಮಕಾರಿ ಔಷಧಿಗಳ ಬಳಕೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.
ಪ್ರಕೃತಿ ಚಿಕಿತ್ಸಾ ಪದ್ದತಿಯ ಅನುಸರಣೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಸುಸ್ಥಿರತೆಗೆ ಸಹಕರಿಸುತ್ತದೆ. ಹಾಗಾಗಿ ಗ್ರಾಮೀಣ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.ಡಾ. ರಘುರಾಮ್ ಮಾತನಾಡಿ, ರೈತರು ಪ್ರತಿನಿತ್ಯ ತಮ್ಮಕಾಯಕದಲ್ಲಿಯೇ ಯೋಗವನ್ನು ತೊಡಗಿಸಿಕೊಂಡರೂ ಕೂಡ ಬದಲಾಗಿರುವ ಬೇಸಾಯ ಕ್ರಮದಲ್ಲಿ ಅನುಸರಿಸಬೇಕಾಗಿರುವ ಮುಂಜಾಗ್ರತೆ ಕೊರತೆಯಿಂದ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿದೆ ಎಂದರು.
ರಸಗೊಬ್ಬರ ಮತ್ತುಕೀಟ ನಾಶಕಗಳ ಬಳಕೆಯಿಂದ ಭೂಮಿ ಆರೋಗ್ಯದ ಜೊತೆಗೆ ರೈತರ ಆರೋಗ್ಯದಲ್ಲೂ ದುಷ್ಪರಿಣಾಮ ಬೀರುತ್ತಿದೆ. ರೈತರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಪಾಲಿಸಬೇಕಾದ ಕ್ರಮಗಳ ಅರಿವಿನ ಜೊತೆಗೆಯೋಗ ಮತ್ತು ಪ್ರಕೃತಿಚಿಕಿತ್ಸೆಯ ಪ್ರಯೋಜನದ ಅರಿವು ಬಹಳ ಮುಖ್ಯ ಎಂದರು.ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಣ್ಣಗೌಡ ಹಾಗೂ ಯೋಗಚಿಕಿತ್ಸಕ ಸಿದ್ದಪ್ಪ ನರಗಟ್ಟಿ ಮಾತನಾಡಿದರು. ಗ್ರಾಪಂ ಸದಸ್ಯ ಅಪ್ಪಾಜಿ, ಭೂ ಸಿರಿ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ತಮ್ಮಣ್ಣಗೌಡ, ಉಪಾಧ್ಯಕ್ಷೆ ಚೂಡಾಮಣಿ ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.